ಆನೇಕಲ್: ಉತ್ತರ ಕರ್ನಾಟಕದ ಭಾಗದಲ್ಲಿ ಧಾರಕಾರ ಮಳೆಯಿಂದ ಗ್ರಾಮಗಳು ಜಲಾವೃತ ಗೊಂಡಿದ್ದು ಜನ ಹಾಗೂ ಜಾನುವಾರುಗಳ ರಕ್ಷಣೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಶಾಂತಿಪುರ ಗ್ರಾಪಂ ಅಧ್ಯಕ್ಷ ವೆಂಕಟೇಶ್ ಹೇಳಿದರು.
ತಾಲೂಕಿನ ಶಾಂತಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರೆಗೆ ಸಾರ್ವಜನಿಕವಾಗಿ ಅಂಗಡಿ ಮುಗ್ಗಟ್ಟು ಮತ್ತು ದಾನಿಗಳಿಂದ ಆಹಾರ ಸಾಮಗ್ರಿ, ದೇಣಿಗೆ ಸಂಗ್ರಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಳೆಯಿಂದ ಉತ್ತರ ಕರ್ನಾಟಕದ ಜನ ಮನೆ ಕಳೆದು ಕೊಂಡು ಬೀದಿಗೆ ಬಂದಿದ್ದಾರೆ. ಊಟಕ್ಕೂ ಸಹ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅವರ ರಕ್ಷಣೆಗೆ ಸರ್ಕಾರದ ಜೊತೆಗೆ ಜನರೂ ಕೂಡ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪಂಚಾಯಿತಿ ಸದಸ್ಯ ಮದನ್ ಮಾತನಾಡಿ, ನೆರೆ ಸಂತ್ರಸ್ತರಿಗೆ ಸ್ವಯಂ ಪ್ರೇರಣೆಯಿಂದ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಸಂಗ್ರಹವಾದ ಆಹಾರ ಸಾಮಗ್ರಿಗಳನ್ನು ನಾವೇ ನೇರವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೋಗಿ ಜನರ ಕೈ ತಲುಪುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಂತಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಶಂಕರಪ್ಪ, ರಾಮಸ್ವಾಮಿ, ಗೋಂವಿದರಾಜು, ಬಾಬು, ಚಂದ್ರು, ಚಂದ್ರಶೇಖರ್, ಮುನಿರಾಜು, ಪಿಡಿಒ ಬಸವರಾಜ್ ಮತ್ತು ಸಿಬ್ಬಂದಿ ಇದ್ದರು.