Advertisement

ರೆಸಾರ್ಟ್‌ ತೆರವಿಗೆ ಕಾರಣವಾದ ನೆರೆ

11:40 AM Aug 17, 2019 | Suhan S |

ಗಂಗಾವತಿ: ತುಂಗಭದ್ರಾ ನದಿಯ ಪ್ರವಾಹ ತಾಲೂಕಿನ ವಿರೂಪಾಪೂರ ಗಡ್ಡಿಯಲ್ಲಿರುವ ರೆಸಾರ್ಟ್‌ಗಳ ತೆರವಿಗೆ ಪ್ರಮುಖ ಕಾರಣವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಹಲವು ದಶಕಗಳ ರೆಸಾರ್ಟ್‌ ಗಳ ವ್ಯವಹಾರಕ್ಕೆ ತಡೆ ಬೀಳುವ ಸಾಧ್ಯತೆ ಇದೆ.

Advertisement

ಕಳೆದ ವಾರ ತುಂಗಭದ್ರಾ ನದಿಯಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ವಿರೂಪಾಪೂರಗಡ್ಡಿಯ ರೆಸಾರ್ಟ್‌ಗಳಲ್ಲಿ ದೇಶ, ವಿದೇಶದ 550ಕ್ಕೂ ಹೆಚ್ಚು ಪ್ರವಾಸಿಗರು ಸಿಕ್ಕು ಹಾಕಿಕೊಂಡಿದ್ದರು. ಪ್ರವಾಹ ಕಂಡು ಪ್ರವಾಸಿಗರು ಭಯಭೀತರಾಗಿದ್ದರು. ಪ್ರವಾಸಿಗರನ್ನು ರಕ್ಷಿಸಲು ಆಗಮಿಸಿದ್ದ ಎನ್‌ಡಿಆರ್‌ಎಫ್‌ ಇತರೆ ರಕ್ಷಣಾ ಸಿಬ್ಬಂದಿ ಪೈಕಿ ಐವರು ಬೋಟ್ ಮುಗುಚಿ ನದಿಗೆ ಬಿದ್ದ ಸಂದರ್ಭದಲ್ಲಿ ಸ್ಥಳೀಯರು ಮತ್ತು ವಾಯುಸೇನೆ ಹೆಲಿಕ್ಯಾಪ್ಟರ್‌ ಸಹಾಯದಿಂದ ಅವರನ್ನು ರಕ್ಷಿಸಲಾಯಿತು. ಅದೃಷ್ಟವಶಾತ್‌ ಬೋಟ್ ಮುಳುಗಿ ನೀರು ಪಾಲಾಗಿದ್ದವರು ಬದುಕಿ ಬಂದಿದ್ದು, ಈ ಘಟನೆ ಜರುಗಲು ಪರೋಕ್ಷವಾಗಿ ರೆಸಾರ್ಟ್‌ ಮಾಲಿಕರೇ ಕಾರಣರಾಗಿದ್ದಾರೆ. ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು ಬಿಡುವ ಕುರಿತು ಐದು ದಿನಗಳ ಮುಂಚೆ ನದಿ ಪಾತ್ರದ ವಿರೂಪಾಪೂರಗಡ್ಡಿ ಸೇರಿ ಎಲ್ಲ ಗ್ರಾಮಗಳಲ್ಲಿ ಡಂಗೂರ ಹಾಕಿಸಲಾಗಿತ್ತು. ಆದರೂ ವೀಕ್‌ಎಂಡ್‌ ಪಾರ್ಟಿ ಮಾಡಲು ಆಗಮಿಸಿದ್ದ ಪ್ರವಾಸಿಗರನ್ನು (ಟೆಕ್ಕಿ)ಗಳನ್ನು ರೆಸಾರ್ಟ್‌ಗಳಲ್ಲಿ ಉಳಿಸಿಕೊಳ್ಳದೇ ಕಳುಹಿಸಬೇಕಾಗಿತ್ತು. ಹಣದ ಆಸೆಗೆ ಪ್ರವಾಸಿಗರನ್ನು ರೈಸಾರ್ಟ್‌ಗಳಲ್ಲಿ ಉಳಿಸಿಕೊಂಡು ಉದ್ದೇಶಪೂರ್ವಕವಾಗಿ ಪ್ರವಾಸಿಗರಿಗೆ ಮತ್ತು ಜಿಲ್ಲಾಡಳಿತಕ್ಕೆ ತೊಂದರೆ ಕೊಟ್ಟಂತಾಗಿದೆ. ಪ್ರವಾಸಿಗರ ರಕ್ಷಣೆಗೆ ಆಗಮಿಸಿದ್ದ ರಕ್ಷಾ ತಂಡದ ಐವರು ನದಿಯಲ್ಲಿ ತೊಂದರೆಗೆ ಸಿಲುಕಿದ ವಿಷಯ ದೇಶ, ವಿದೇಶದ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ರೆಸಾರ್ಟ್‌ ವಿಷಯವನ್ನು ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪೊಲೀಸ್‌ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲಾ ರೆಸಾರ್ಟ್‌ ತೆರವುಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ಹಿನ್ನೆಲೆ: ವಿರೂಪಾಪೂರಗಡ್ಡಿಯಲ್ಲಿ ಮೂರು ದಶಕಗಳ ಹಿಂದೆ ಹಂಪಿ ಹಾಗೂ ಕಿಷ್ಕಿಂದಾ ಅಂಜನಾದ್ರಿಬೆಟ್ಟ ಪ್ರದೇಶಗಳಿಗೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿಗಾಗಿ ಹೊಟೇಲ್ಗಳನ್ನು ಇಲ್ಲಿಯ ಭೂಮಾಲೀಕರು ಆರಂಭಿಸಿದರು. ಹೊಟೇಲ್ಗಳೇ ಇದೀಗ ರೆಸಾರ್ಟ್‌ ಗಳಾಗಿ ಮಾರ್ಪಾಡಾಗಿವೆ. ಪ್ರತಿ ವರ್ಷ ನವೆಂಬರ್‌ನಿಂದ ಏಪ್ರೀಲ್ ತಿಂಗಳು ಇಲ್ಲಿಗೆ ಆಗಮಿಸುವ ವಿದೇಶದ ಪ್ರವಾಸಿಗರು ವಿರೂಪಾಪೂರಗಡ್ಡಿಯ ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ಹಂಪಿ ಸೇರಿ ಸುತ್ತಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡುತ್ತಾರೆ. ಇತ್ತೀಚಿಗೆ ವಿದೇಶಿ ಪ್ರವಾಸಿಗರಿಗಿಂತ ಬೆಂಗಳೂರು, ಹೈದ್ರಾಬಾದ್‌, ಪುಣೆ, ಗೋವಾ, ಕೇರಳ, ಚೆನ್ನೈ ಸೇರಿ ಹಲವು ನಗರಗಳಿಂದ ಐಟಿ, ಬಿಟಿ ಉದ್ಯೋಗಿಗಳು ಮತ್ತು ಶ್ರೀಮಂತ ಕುಟುಂಬದವರು ವೀಕ್‌ಎಂಡ್‌ ಪಾರ್ಟಿ ಮಾಡುವ ನೆಪದಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ನೆರೆ ಬಂದರೂ ಪ್ರವಾಸಿಗರನ್ನು ಹರಿಗೋಲಿನ ಮೂಲಕ ದಾಟಿಸಲಾಗುತ್ತಿತ್ತು. ಈ ಭಾರಿಯೂ ನದಿ ಉಕ್ಕಿಹರಿಯುವ ಸಂದರ್ಭದಲ್ಲಿ ಹರಿಗೋಲಿನ ಮೂಲಕ ಪ್ರವಾಸಿಗರನ್ನು ನದಿ ದಾಟಿಸುವ ಯತಕ್ಕೆ ಸುರಕ್ಷಿತವಲ್ಲದ ಕಾರಣಕ್ಕಾಗಿ ಜಿಲ್ಲಾಧಿಕಾರಿ ನದಿಯಲ್ಲಿ ಹರಿಗೋಲು ಹಾಕುವುದನ್ನು ನಿಷೇಧ ಹೇರಿದ್ದರಿಂದ 550 ಜನ ಪ್ರವಾಸಿಗರು ಗಡ್ಡಿಯಲ್ಲಿ ಉಳಿಯಬೇಕಾಯಿತು.

ವಿರುಪಾಪೂರಗಡ್ಡಿಯಲ್ಲಿ ಇತ್ತೀಚೆಗೆ ನದಿ ನೀರಿನಿಂದ 590 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಅವರನ್ನು ನಾವು ರಕ್ಷಣೆ ಮಾಡಿದ್ದೇವೆ. ಅಲ್ಲಿನ ಹೋಟೆ‌ಲ್, ರೆಸಾರ್ಟ್‌ ಮಾಲಿಕರು ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೇ ನನ್ನ ಆದೇಶ ಉಲ್ಲಂಘನೆ ಮಾಡಿದ್ದರು. ಇದೆಲ್ಲವನ್ನು ಪರಿಗಣಿಸಿ 21 ಮಾಲಿಕರ ಮೇಲೆ ಪ್ರಕರಣ ದಾಖಲಿಸುವಂತೆ ಗಂಗಾವತಿ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ. ನಾವು ನಡೆಸಿದ ರಕ್ಷಣಾ ಕಾರ್ಯದ ವೆಚ್ಚವನ್ನೂ ಅವರಿಂದಲೇ ಭರಿಸುವ ಕುರಿತು ಚಿಂತನೆ ನಡೆಸಿದ್ದೇವೆ.•ಸುನೀಲ್ ಕುಮಾರ, ಜಿಲ್ಲಾಧಿಕಾರಿ

 

Advertisement

ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next