Advertisement

ದ.ಕ.ಕ್ಕೆ ಬರಲ್ಲ ಪ್ರವಾಹ ಅಧ್ಯಯನ ತಂಡ

10:17 AM Aug 27, 2019 | Team Udayavani |

ಮಂಗಳೂರು: ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಸರಕಾರದ ಅಧಿಕಾರಿಗಳ ತಂಡದ ಪ್ರವಾಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಿಲ್ಲ. ಇದು ಭಾರೀ ಮಳೆ ಮತ್ತು ನೆರೆ ಹಾನಿ ಅನುಭವಿಸಿ ಪರಿಹಾರದ ನಿರೀಕ್ಷೆಯಲ್ಲಿರುವ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.

Advertisement

ತಂಡ ಪ್ರವಾಹ ಅಧ್ಯಯನಕ್ಕೆ ಆ.24ರಂದು ಆಗಮಿಸಿದ್ದು, ಮೂರು ದಿನ ವಿವಿಧೆಡೆ ಸಂಚರಿಸಿ ಹಾನಿಯನ್ನು ಅಂದಾಜಿಸಲಿದೆ. ತಂಡದ ಪ್ರವಾಸ ಪಟ್ಟಿಯಲ್ಲಿ ರಾಜ್ಯದ ಇತರ ಪ್ರವಾಹಪೀಡಿತ ಜಿಲ್ಲೆಗಳಿದ್ದರೂ ದಕ್ಷಿಣ ಕನ್ನಡ ಇಲ್ಲ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿರುವ ಅಧಿಕಾರಿಗಳು ರಾಜ್ಯದಲ್ಲಾಗಿರುವ ಹಾನಿಯ ಮಾಹಿತಿ ಪಡೆದುಕೊಂಡಿದ್ದಾರೆ. ಆ.25ರಂದು ಬೆಳಗಾವಿ, ಬಳಿಕ ಬಾಗಲಕೋಟೆಯಲ್ಲಿ ವಾಸ್ತವ್ಯ; ಆ. 26ರಂದು ಬಾಗಲಕೋಟೆ, ಗದಗ ಮತ್ತು ಧಾರವಾಡ; ಆ. 27ರಂದು ಅಲ್ಲಿಂದ ಕೊಡಗು ಜಿಲ್ಲಾ ಭೇಟಿಯ ಬಳಿಕ ತಂಡ ಬೆಂಗಳೂರಿಗೆ ತೆರಳಲಿದೆ.

ದಕ್ಷಿಣ ಕನ್ನಡ ಜಿಲ್ಲೆ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಇತ್ತೀಚಿನ ದಶಕಗಳಲ್ಲಿ ಕಂಡರಿಯದ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ. ಅಲ್ಲಿನ ಹಲವು ಊರುಗಳ ಚಿತ್ರಣವೇ ಬದಲಾಗಿದೆ.

ಜಿಲ್ಲಾಡಳಿತ ನಡೆಸಿರುವ ಸಮೀಕ್ಷೆಯಂತೆ 750 ಕೋ.ರೂ.ಗೂ ಅಧಿಕ ಪ್ರಮಾಣದಲ್ಲಿ ಮೂಲ ಸೌಕರ್ಯಗಳು ನಾಶವಾಗಿವೆ. 944 ಮನೆಗಳು ಮತ್ತು 1,229.66 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ವೆಂಟೆಡ್‌ಡ್ಯಾಂಗಳಿಗೆ ಆಗಿರುವ ಹಾನಿ ನೂರಾರು ಕೋ. ರೂ. ಮೊತ್ತದ್ದು. 222 ಶಾಲೆಗಳಿಗೆ ಹಾನಿಯಾಗಿದೆ. 105 ಕುಟುಂಬಗಳನ್ನು ಸ್ಥಳಾಂತರಿಸಿ ಶಾಶ್ವತ ನೆಲೆ ಕಲ್ಪಿಸಬೇಕಿದೆ. ಇದೆಲ್ಲವನ್ನೂ ಅಂದಾಜಿಸಿದರೆ ಸುಮಾರು ಕನಿಷ್ಠ 2,000 ಕೋ.ರೂ.ಗೂ ಅಧಿಕ ಹಾನಿಯಾಗಿದೆ.

ಕೇಂದ್ರ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೂ ಆಗಮಿಸಬಹುದು ಮತ್ತು ಬದುಕು ಕಟ್ಟಿಕೊಳ್ಳಲು ಹೆಚ್ಚಿನ ನೆರವು ದೊರೆಯಬಹುದು ಎಂಬ ಸಂತ್ರಸ್ತರ ನಿರೀಕ್ಷೆ ಹುಸಿಯಾಗಿದೆ.

Advertisement

ವಿವರ ಕೋರುತ್ತೇನೆ
ಕೇಂದ್ರ ಅಧಿಕಾರಿಗಳ ತಂಡದ ನೆರೆ ಹಾನಿ ಅಧ್ಯಯನ ಪ್ರವಾಸ ರಾಜ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯೋಜನೆಗೊಂಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಿರದ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆಯಲಾಗುವುದು. ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೂ ಭೇಟಿ ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದ

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next