Advertisement

ನೆರೆ ತಪ್ಪಿಸುತ್ತಿವೆ ಲಿಂಗನಮಕ್ಕಿ-ಟೇಲರೀಸ್‌

02:31 PM Aug 14, 2019 | Team Udayavani |

ಹೊನ್ನಾವರ: 1964ರಲ್ಲಿ ಉದ್ಘಾಟನೆಗೊಂಡ ಲಿಂಗನಮಕ್ಕಿ ಅಣೆಕಟ್ಟು ಕೇವಲ 2 ಅವಧಿಯ ಹೊರತಾಗಿ 50 ವರ್ಷಗಳಿಗೂ ಹೆಚ್ಚುಕಾಲ ಶರಾವತಿಕೊಳ್ಳವನ್ನು ನೆರೆಹಾವಳಿಯಿಂದ ಕಾಪಾಡಿದೆ ಎಂಬ ಸತ್ಯವನ್ನು ಈಗ ನೆರೆಯ ನೋವಿನಲ್ಲೂ ನೆನಪಿಸಿಕೊಳ್ಳಬೇಕಾಗಿದೆ.

Advertisement

ನೇಪಾಳ ಮಳೆ ಉತ್ತರಭಾರತವನ್ನು, ಮಹಾರಾಷ್ಟ್ರದ ಮಳೆ ಬಯಲುಸೀಮೆಯನ್ನು, ಸಹ್ಯಾದ್ರಿಯ ಮಳೆ ಅಘನಾಶಿನಿ, ಕಾಳಿ, ಬೇಡ್ತಿ ತೀರವನ್ನು ಮುಳುಗಿಸುತ್ತಿದ್ದರೆ ಶರಾವತಿಕೊಳ್ಳದ ಜನ ಅಣೆಕಟ್ಟು ತುಂಬಿದರೂ ತುಳುಕದಂತೆ ಮಾಡು ಎಂದು ಪ್ರಾರ್ಥಿಸುತ್ತಿದ್ದಾರೆ.

ವಿದ್ಯುತ್‌ ಉತ್ಪಾದನೆ, ನೀರಾವರಿ ಬಳಕೆ ಮತ್ತು ನೆರೆ ನಿಯಂತ್ರಣ ಈ ತ್ರಿವಿಧ ಲಾಭಕ್ಕಾಗಿ ಅಣೆಕಟ್ಟುಗಳು ನಿರ್ಮಾಣಗೊಂಡವು. ಸರ್ಕಾರಕ್ಕೆ ಆದಾಯಬರುವ ವಿದ್ಯುತ್‌ ಉತ್ಪಾದನೆ ನಂತರ ಜನರಿಗೆ ಉಪಯುಕ್ತವಾಗುವ ನೆರೆ ನಿಯಂತ್ರಣ ಮತ್ತು ನೀರಾವರಿಗೆ ಸರ್ಕಾರಗಳು ಹೆಚ್ಚು ಕಾಳಜಿ ವಹಿಸಲಿಲ್ಲ. ನೀರು ತುಂಬಿಸುತ್ತಲೇ ಹೋಗಿ ಕೊನೆಯ ಘಳಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬಂದು ಜನಜೀವನವನ್ನು ಸಂಕಷ್ಟಕ್ಕೆ ನೂಕಿತು. ಲೆಕ್ಕಾಚಾರದಷ್ಟು ನೀರು ಕೃಷಿಗೆ ಬಳಕೆಯಾಗದ ಕಾರಣ ಇನ್ನೂ ನೀರಾವರಿ ಇಲ್ಲದ ಏಕಬೆಳೆ ಪ್ರದೇಶವನ್ನು ಕಾಣಬಹುದು.

ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗುವ ಮೊದಲು ಶರಾವತಿಕೊಳ್ಳದಲ್ಲಿ ಕಾಯಂ ನೆರೆ ಬರುತ್ತಿತ್ತು. ಹೊಳೆಸಾಲಿನವರಿಗೆ ಹೆಣ್ಣು ಕೊಡುವವರು ಇರಲಿಲ್ಲ. ಅಳಿಯನ ಬೆಳೆಯೊಂದಿಗೆ ಮಗಳೂ ಹೋದರೆ ಎಂಬ ಚಿಂತೆ. ಲಿಂಗನಮಕ್ಕಿ ಅಣೆಕಟ್ಟಿನ ನಂತರ ಬೇಸಿಗೆಯಲ್ಲೂ ಶರಾವತಿಯಲ್ಲಿ ಪ್ರವಾಹ ಇರುವುದರಿಂದ ಶರಾವತಿಕೊಳ್ಳ ತಾಲೂಕಿನಲ್ಲಿ ಸಮೃದ್ಧ ಭೂಮಿಯಾಯಿತು. 80ರ ದಶಕದಲ್ಲಿ ಒಂದೆರಡು ಬಾರಿ ಗರಿಷ್ಠ 1819 ಅಡಿ ನೀರು ತುಂಬಿಸಿದ್ದರು. ಒಂದು ಅಡಿ ನೀರು ಒಂದು ಕೋಟಿ ರೂ. ವಿದ್ಯುತ್‌ ಉತ್ಪಾದಿಸುತ್ತದೆ ಎಂಬುದು ಕೆಪಿಸಿ ವಾದವಾಗಿತ್ತು. 80ರ ದಶಕದಲ್ಲಿ ಎರಡು ಬಾರಿ ಏಕಾಏಕಿ ನೀರು ಬಿಟ್ಟು ಅನಾಹುತವಾದ ಕಾರಣ ಕೆಪಿಸಿ ಬುದ್ಧಿಕಲಿಯಿತು. ಈಗ ಅಣೆಕಟ್ಟು ತುಂಬುತ್ತಿದ್ದಂತೆಯೇ ಹಿತಮಿತವಾಗಿ ನೀರು ಬಿಟ್ಟು ಗೇರುಸೊಪ್ಪ ಅಣೆಕಟ್ಟನ್ನು ಸಮತೋಲನ ಕಾಯುವ ಅಣೆಕಟ್ಟನ್ನಾಗಿ ಬಳಸಿಕೊಂಡು ನೆರೆ ತಪ್ಪಿಸುತ್ತಿದೆ.

ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿ 55ವರ್ಷಗಳಲ್ಲಿ ಕೇವಲ 16ಬಾರಿ ಪೂರ್ತಿ ತುಂಬಿದೆ. ಎರಡು ಬಾರಿ ನಿರ್ಲಕ್ಷದಿಂದ ನೀರು ಬಿಡುವಂತಾಯಿತು. ಉಳಿದ ಅರ್ಧ ದಶಕದಲ್ಲಿ ಲಿಂಗನಮಕ್ಕಿ ಶರಾವತಿಕೊಳ್ಳದಲ್ಲಿ ಸಮೃದ್ಧ ನೀರನ್ನು ಒದಗಿಸಿದೆ. ಈ ದೃಷ್ಠಿಯಿಂದ ಕೃತಜ್ಞರಾಗಿರಬೇಕಾಗಿದೆ. ಜಲವಿದ್ಯುತ್‌ ಯೋಜನೆ ಕಡಿಮೆವೆಚ್ಚದ್ದಾದರೂ ಪರಿಸರ ನಾಶವಾಗುವ ಭೀತಿಯಿಂದ ಬೇಡ್ತಿ, ಅಘನಾಶಿನಿ ಸಹಿತ ರಾಜ್ಯದ ಹಲವು ಇಂತಹ ಯೋಜನೆಯನ್ನು ಜನರ ಪ್ರತಿಭಟನೆ ಮಧ್ಯೆ ಕೈಬಿಡಲಾಯಿತು. ಅಣು, ಉಷ್ಣ ವಿದ್ಯುತ್‌ ಉತ್ಪಾದನೆಯಲ್ಲೂ ಪರಿಸರ ಹಾನಿಯಿದೆ. ಎಲ್ಲ ಯೋಜನೆಗೂ ವಿರೋಧವಿದೆ, ಆದರೆ ವಿದ್ಯುತ್‌ ಎಲ್ಲರಿಗೂ ಬೇಕಿದೆ.

Advertisement

ಪಶ್ಚಿಮ ಘಟ್ಟದಲ್ಲಿ ಇಳಿದು ಬರುವ ನೀರಿಗೆ ಅಲ್ಲಲ್ಲಿ ಕಿರು ಅಣೆಕಟ್ಟು ನಿರ್ಮಿಸಿ, ಆಯಾಭಾಗಕ್ಕೆ ವಿದ್ಯುತ್‌ ಮತ್ತು ಕೃಷಿ ಭೂಮಿಗೆ ನೀರು ಪಡೆಯುವ, ಪ್ರವಾಹ ತಡೆಯುವಂತಹ ಯೋಜನೆ ಉಯುಕ್ತವಾಗುತ್ತಿತ್ತು. ಇದರಿಂದ ಪರಿಸರವೂ ಉಳಿಯುತ್ತಿತ್ತು. ವಿದೇಶಗಳಲ್ಲಿ ಯಶಸ್ವಿಯಾದ ಇಂತಹ ಯೋಜನೆಯ ಅಧ್ಯಯನಕ್ಕೂ ಜನರು ಅವಕಾಶಕೊಡಲಿಲ್ಲ. ಎತ್ತರ ಜಾಗ ಮನೆಕಟ್ಟಿಕೊಳ್ಳಲು ಸಿಗುವುದಿಲ್ಲ, ಪ್ರವಾಹ ತಡೆಯಲೂ ಸಾಧ್ಯವಾಗುವುದಿಲ್ಲ. ಲಿಂಗನಮಕ್ಕಿ, ಟೇಲರೀಸ್‌ ಜಲವಿದ್ಯುತ್‌ ಯೋಜನೆಗಳ ಅಡ್ಡಪರಿಣಾಮ ಹೇಳುವಾಗ ಅದರ ಒಳಿತನ್ನು ಈ ಕಾಲದಲ್ಲಿ ಸ್ಮರಿಸುವುದು ಅನಿವಾರ್ಯ.

 

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next