Advertisement

ತಾಲೂಕಿನಾದ್ಯಂತ ಹಲವೆಡೆ ನೆರೆ ಸದೃಶ ಸ್ಥಿತಿ

02:25 AM Jun 12, 2018 | Team Udayavani |

ಬೆಳ್ತಂಗಡಿ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಲವೆಡೆ ನೀರು ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ಸಂಕಷ್ಟ ಆನುಭವಿಸುವಂತಾಯಿತು. ತಾಲೂಕಿನ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಸಣ್ಣ ಪುಟ್ಟ ಡ್ಯಾಂಗಳು ತುಂಬಿ ಹರಿದಿವೆ. ಮುಖ್ಯವಾಗಿ ಉಜಿರೆ ಬಳಿ ಹಲವು ಬಾರಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಜನಸಾಮನ್ಯರು ಸಂಕಷ್ಟ ಅನುಭವಿಸುವಂತಾಯಿತು. ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಮಳೆಗೆ ಉಜಿರೆ ಪರಿಸರದಲ್ಲಿ ನೆರೆ ಸದೃಶ ದೃಶ್ಯ ಕಂಡು ಬಂತು.

Advertisement


ಬೆಳ್ತಂಗಡಿಯಿಂದ ಉಜಿರೆಗೆ ತೆರಳುವ ದಾರಿಯಲ್ಲಿ ಉಜಿರೆ ಸಮೀಪದ ಪೆಟ್ರೋಲ್‌ ಬಂಕ್‌ ಬಳಿ ನೀರುನಿಂತು ಸಮಸ್ಯೆ ಎದುರಾಗಿದೆ. ಹಲವಾರು ದಿನಗಳಿಂದ ಸಮಸ್ಯೆ ಇದ್ದರೂ ಸ್ಥಳೀಯ ಗ್ರಾಪಂ ಹಾಗೂ ಹೆದ್ದಾರಿ ಸಹಾಯದಿಂದ ಚರಂಡಿ ಹೂಳು ತೆಗೆಯದೆ, ಕಸದ ರಾಶಿಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಸ್ಥಳಕ್ಕೆ ಸ್ಥಳೀಯ ಪಿಡಿ.ಒ ಗಾಯತ್ರಿ, ತಾ.ಪಂ. ಇಒ ಬಸವರಾಜ ಅಯ್ಯಣ್ಣನವರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಯಶವಂತ್‌, ಸ್ಥಳೀಯ ಗ್ರಾ.ಪಂ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಂಡರು.

ಗುಡ್ಡ ಕುಸಿತ
ತಾಲೂಕಿನ ಚಾರ್ಮಾಡಿ ಬಳಿ ಸೋಮನಾಥ್‌ ಎಂಬುವವರ ಮನೆ ಬಳಿ ಗುಡ್ಡ ಕುಸಿದಿದೆ. ಚಾರ್ಮಾಡಿ ವ್ಯಾಪ್ತಿಯಲ್ಲಿ ಕತ್ತರಿ ಗುಡ್ಡವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಕೆರೆ ಬಳಿ ಕುಸಿತವಾಗಿದ್ದು, ಸಂಪರ್ಕ ಕಡಿದುಕೊಳ್ಳುವ ಭೀತಿ ಎದುರಾಗಿದೆ.

ಸಾರ್ವಜನಿಕರಿಂದ ಶ್ರಮದಾನ
ಅಧಿಕಾರಿಗಳು ಸಮರ್ಪಕ ಮಳೆ ನಿರ್ವಹಣೆ ಕಾರ್ಯ  ಮಾಡದನ್ನು ಗಮನಿಸಿ ಸಾರ್ವಜನಿಕರು ಸಹಾಯ ಹಸ್ತ ಚಾಚುತ್ತಿದ್ದ ದೃಶ್ಯ ಕಂಡುಬಂದಿದೆ. ಉಜಿರೆಯಲ್ಲೂ ಸಾರ್ವಜನಿಕರೂ ಚರಂಡಿ ಕಸ ತೆಗೆಯಲು ಸಹಕರಿಸಿ ದರು. ಲಾೖಲ ಸೇತುವೆ ಬಳಿ ನೀರು ನಿಲ್ಲುತ್ತಿದ್ದು, ಆಟೋ ಶಂಕರ್‌ ಅವರು ನೀರು ಚರಂಡಿಗೆ ಹರಿಯಲು ಶ್ರಮದಾನ ಮಾಡಿದರು. ಚಾರ್ಮಾಡಿ ಯಲ್ಲಿ ರಕ್ಷಣಾ ಕಾರ್ಯ ನಡೆಸಲು ಹಸನಬ್ಬ ಅವರ ತಂಡ ಸಿದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಪ್ರದೇಶಗಳಲ್ಲೂ ಜನತೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ.

ನೀರಿನ ಮಟ್ಟ ಹೆಚ್ಚಳ
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕುಕ್ಕಾವು ಬಳಿ ಕಿಲ್ಲೂರು ಸಂಪರ್ಕಿಸುವ ಸಾರ್ವಜನಿಕರು ಬಳಸುತ್ತಿದ್ದ ಡ್ಯಾಂ ಮುಳುಗಿದೆ. ಕೊಲ್ಲಿ- ಕಿಲ್ಲೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೇತ್ರಾವತಿ ನೀರಿನ ಹರಿವು ಹೆಚ್ಚಳವಾಗಿದ್ದು ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next