Advertisement

ಮಳೆ ಬಂದರೂ, ಬಾರದಿದ್ದರೂ ನೆರೆ! ಜನರಿಗೆ ತಪ್ಪದ ಗೋಳು

06:34 PM Sep 14, 2022 | Team Udayavani |

ಬಾಗಲಕೋಟೆ: ಮಳೆ ಬಂದರೂ ಒಂದು, ಬಾರದಿದ್ದರೂ ಮತ್ತೊಂದು. ಸಮಸ್ಯೆ-ಸಂಕಷ್ಟ ಮಾತ್ರ ತಪ್ಪಿದ್ದಲ್ಲ. ನೀರಿನೊಂದಿಗಿನ ಬದುಕಿಗೆ ಕೊನೆ ಸಿಕ್ಕಿಲ್ಲ! ಇದು ಮುಳುಗಡೆ ಜಿಲ್ಲೆ ಬಾಗಲಕೋಟೆಯ ಸಂಕಷ್ಟದ ಸ್ಥಿತಿ.

Advertisement

ಮೂರು ನದಿಗಳು, 278ಕ್ಕೂ ಹೆಚ್ಚು ಕೆರೆಗಳಿಂದ ಸಮೃದ್ಧವಾಗಿ ಕಂಗೊಳಿಸಬೇಕಿರುವ ಬಾಗಲಕೋಟೆ ಜಿಲ್ಲೆ, ವರ್ಷದ ಆರು ತಿಂಗಳು ನೀರಿನಿಂದ ಸಂಕಷ್ಟ ಎದುರಿಸುತ್ತದೆ. ಅದರಲ್ಲೂ ನದಿ ತೀರದ ಜನರು, ಮಳೆ ಬಂದರೂ, ಬಾರದಿದ್ದರೂ ಆತಂಕದಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ.

ಜಿಲ್ಲೆಯಲ್ಲಿ ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ಎಂಬ ಮೂರು ನದಿಗಳು ಹರಿದಿವೆ. ಘಟಪ್ರಭೆ ಮತ್ತು ಕೃಷ್ಣೆ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಒಂದಾಗುತ್ತವೆ. ಮುಂದೆ ಆಲಮಟ್ಟಿ ಜಲಾಶಯದ ಮೂಲಕ ಹರಿದು ಕೂಡಲಸಂಗಮದಲ್ಲಿ ಕೃಷ್ಣೆಯೊಂದಿಗೆ ಮಲಪ್ರಭೆ ಲೀನವಾಗುತ್ತಾಳೆ. ಬೆಳಗಾವಿಯಲ್ಲಿ ಹುಟ್ಟಿ ಚಿಕ್ಕಸಂಗಮ ಮತ್ತು ಕೂಡಲಸಂಗಮದಲ್ಲಿ ಘಟಪ್ರಭೆ, ಮಲಪ್ರಭೆ ನದಿಗಳು ಕೃಷ್ಣೆಯೊಂದಿಗೆ ಕೂಡಿ ಮುಂದೆ ಹರಿಯುತ್ತವೆ.

ಅತ್ಯಂತ ಇಳಿಜಾರು ಪ್ರಮಾಣದಲ್ಲಿರುವ ಮಲಪ್ರಭಾ ನದಿಗೆ ಸ್ವಲ್ಪ ನೀರು ಹರಿದು ಬಂದರೂ ಅದು ರಭಸವಾಗಿರುತ್ತದೆ. ಹೀಗಾಗಿ ಈ ನದಿಗೆ ಇಳಿಯಲು ಯಾರೂ ಧೈರ್ಯ ಮಾಡಲ್ಲ. ಅದರಲ್ಲೂ ನಾರಾಯಣಪುರ ಜಲಾಶಯ ನಿರ್ಮಾಣದ ಬಳಿಕ ಕೂಡಲಸಂಗಮದ ಸುತ್ತ ಹಿನ್ನೀರಿನ ಒತ್ತು ವಿಸ್ತಾರವಾಗಿ ನಿಲ್ಲುತ್ತದೆ. ಮಲಪ್ರಭೆ ನದಿಗೆ ಕನಿಷ್ಟ 15 ಸಾವಿರ ಕ್ಯೂಸೆಕ್‌ ನೀರು ಹರಿದು ಬಂದರೂ ನೀರಿನ ಒತ್ತಿನಿಂದ ಅದು ಸುಮಾರು 11ಕ್ಕೂ ಹೆಚ್ಚು ಹಳ್ಳಿಗಳಿಗೆ ನುಗ್ಗುತ್ತದೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಪ್ರವಾಹ ಬರುವಷ್ಟು ದೊಡ್ಡ ಪ್ರಮಾಣದ ಮಳೆ ಬಾರದಿದ್ದರೂ ಹುನಗುಂದ ತಾಲೂಕಿನ ಸುಮಾರು ಏಳು ಹಳ್ಳಿಗಳಿಗೆ ನೀರು ನುಗ್ಗಿದೆ. ಅದರಲ್ಲೂ ವರಗೋಡದಿನ್ನಿ, ಗಂಜಿಹಾಳ, ಹಿರೇಮಾಗಿ, ಚಿಕ್ಕಮಾಗಿ, ಚಿತ್ತರಗಿ ಗ್ರಾಮಗಳ ಸುತ್ತಲೂ ನೀರು ಆವರಿಸಿಕೊಂಡು ಸಂಕಷ್ಟ ತಂದಿಟ್ಟಿತ್ತು. ಇದೀಗ ಗ್ರಾಮದೊಳಗೆ ನುಗ್ಗಿದ್ದ ನೀರು ಕ್ರಮೇಣ ಸರಿಯುತ್ತಿದ್ದು, ಕೆಸರು ತುಂಬಿದ ರಸ್ತೆಗಳು, ಮನೆಗಳ ಆವರಣವನ್ನು ಸಂತ್ರಸ್ತರು ಸ್ವತ್ಛತೆ ಮಾಡಿಕೊಂಡು ಮುಂದಿನ ಬದುಕು ನಿರ್ವಹಣೆಗೆ ದಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

ಕೃಷ್ಣೆಯ ರುದ್ರನರ್ತನ: ಇನ್ನು ಕೃಷ್ಣೆ ಶಾಂತವಾಗಿ ಹರಿಯುವ ನದಿ ಎಂಬ ಖ್ಯಾತಿ ಪಡೆದರೂ ರುದ್ರನರ್ತನ ಶುರುವಾದರೆ ಜಿಲ್ಲೆಯ ಸುಮಾರು 262ಕ್ಕೂ ಹೆಚ್ಚು ಹಳ್ಳಿಗಳು ಸಂಕಷ್ಟ ಎದುರಿಸುತ್ತವೆ. ಬೆಳಗಾವಿ ಜಿಲ್ಲೆಯಿಂದ ಜಿಲ್ಲೆ ಪ್ರವೇಶಿಸುವ ಈ ನದಿ, ಜಿಲ್ಲೆಯ ಕೂಡಲಸಂಗಮದ ಬಳಿ ಯಾದಗಿರಿ ಜಿಲ್ಲೆಗೆ ಸಾಗುವ ಮೂಲಕ ಜಿಲ್ಲೆಯಲ್ಲಿನ ಪಾತ್ರ ಕೊನೆಗೊಳ್ಳುತ್ತದೆ.

ಹಿಪ್ಪರಗಿ, ಚಿಕ್ಕಪಡಸಲಗಿ, ಗಲಗಲಿ ಎಂಬ ಮೂರು ಬ್ಯಾರೇಜ್‌, ಆಲಮಟ್ಟಿ, ನಾರಾಯಣಪುರ ಎಂಬ ಎರಡು ಜಲಾಶಯ ಈ ನದಿ ಪಾತ್ರದಲ್ಲಿವೆ. ಈ ಎರಡು ಜಲಾಶಗಳ ಹಿನ್ನೀರಿನಿಂದ 192 ಹಳ್ಳಿಗಳು ಮುಳುಗಡೆಯಾಗಿದ್ದು, ಅವುಗಳಿಗಾಗಿ 136 ಪುನರ್‌ ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಹಳೆಯ ಹಳ್ಳಿಗಳ ಒಡನಾಟ, ಅರ್ಧಂಬರ್ಧ ಉಳಿದ ಭೂಮಿ, ಪುನರ್‌ ವಸತಿ ಕೇಂದ್ರಗಳಲ್ಲಿ ಇಲ್ಲದ ಮೂಲಭೂತ ಸೌಲಭ್ಯ ಹೀಗೆ ಹಲವು ಕಾರಣಗಳಿಂದ ಶೇ.48ರಷ್ಟು ಮುಳುಗಡೆ ಗ್ರಾಮಗಳ ಜನರು ಇಂದಿಗೂ ಹಳೆಯ ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ.ಹೀಗಾಗಿ ನದಿ ಪಾತ್ರದಲ್ಲಿ ಸ್ವಲ್ಪ ನೀರು ಬಂದರೂ ಸಾಕು ಮನೆಯಂಗಳಕ್ಕೆ ನದಿ ನೀರು ಬಂದೇ ಬಿಡುತ್ತದೆ. ಹೀಗಾಗಿ ಪ್ರತಿ ವರ್ಷ ಎದುರಿಸುವ ಈ ಸಂಕಷ್ಟದ ಗೋಳಿಗೆ ಕೊನೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ನದಿ ಪಾತ್ರದ ಗ್ರಾಮಗಳಲ್ಲಿ ಪ್ರತಿ ವರ್ಷ ಉಂಟಾಗುತ್ತಿದ್ದ ಪ್ರವಾಹದಿಂದ ಪಾರು ಮಾಡಲೆಂದೇ ಆಸರೆ ಗ್ರಾಮ ನಿರ್ಮಿಸಲಾಗಿದೆ. ಜತೆಗೆ ಮುಳುಗಡೆ ಗ್ರಾಮಗಳಿಗೆ ಪುನರ್‌ ವಸತಿ ಕೂಡ ಕಲ್ಪಿಸಲಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಸರ್ಕಾರ ಈ ಪ್ರಯತ್ನ ಮಾಡಿದೆ. ಜನರು ದೊಡ್ಡ ಮನಸ್ಸು ಮಾಡಿ, ಆಸರೆ ಗ್ರಾಮ ಮತ್ತು ಪುನರ್‌ ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಬೇಕು.
ದೊಡ್ಡನಗೌಡ ಪಾಟೀಲ, ಹುನಗುಂದ ಶಾಸಕ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next