ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಪಂನ ಎಲ್ಲ ಸದಸ್ಯರು ಒಳಗೊಂಡ ನಿಯೋಗ, ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒಕ್ಕೋರಲ ಒತ್ತಾಯ ಕೇಳಿ ಬಂತು.
ನೆರೆ ಹಾವಳಿ ಜಿಲ್ಲೆಯಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ಸಂತ್ರಸ್ತರ ಸಮಸ್ಯೆ, ಕೈಗೊಳ್ಳಬೇಕಾದ ಪರಿಹಾರ, ಸಂತ್ರಸ್ತರಿಗೆ ಜಿಪಂನಿಂದ ನೀಡಬೇಕಾದ ನೆರವು ಸಹಿತ ನೆರೆ ಹಾವಳಿ ಕುರಿತು ಪ್ರಮುಖ ಚರ್ಚೆ ನಡೆಯುವ ಬದಲು, ಜಿಪಂನಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ, ಜಿಪಂ ಸಿಇಒ ವಿರುದ್ಧ ಅಸಮಾಧಾನಗಳ ಬಗ್ಗೆಯೇ ಸಭೆಯಲ್ಲಿ ಚರ್ಚೆ ನಡೆದವು. ಗುಡೂರ ಎಸ್‌ಸಿ ಗ್ರಾಮ ಒಳಗೊಂಡ ಇಲಾಳ ಮತ್ತು ಇತರೆ 16 ಹಳ್ಳಿಗಳ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಜುಲೈ 31ಕ್ಕೆ ನೀರು ಕೊಡುವುದಾಗಿ ಸಿಇಒ ಹೇಳಿದ್ದರು. ಈ ಕುರಿತು ಪ್ರಚಾರವೂ ಪಡೆದಿದ್ದರು. ಆದರೆ, ಈವರೆಗೆ ನೀರು ಕೊಟ್ಟಿಲ್ಲ. ಪ್ರವಾಹದಿಂದ ಜನರು ನಲುಗಿದ್ದಾರೆ. ಕುಡಿಯಲು ನೀರಿಲ್ಲ. ಈಗಾಗಲ 43 ಕೋಟಿ ಬಿಲ್ನ್ನು ಗುತ್ತಿಗೆದಾರರಿಗೆ ಕೊಡಲಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲ. ಆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಬಿಜೆಪಿ ಸದಸ್ಯ ಶಶಿಕಾಂತ ಪಾಟೀಲ, ಧರಣಿ ಕೂಡ ನಡೆಸಿದರು.
ಶೇ.1 ಕಮೀಷನ್ ಕೊಟ್ರೆ ಬಿಲ್ ಕೊಡ್ತಾರೆ: ಬಿಜೆಪಿ ಹಿರಿಯ ಸದಸ್ಯ ಹೂವಪ್ಪ ರಾಠೊಡ, ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆರ್‌ಡಿಪಿಆರ್‌ನಿಂದ 11.60 ಕೋಟಿ ಅನುದಾನ ಮಾರ್ಚ್ ನಲ್ಲೇ ಬಿಡುಗಡೆಗೊಂಡರೂ ಗುತ್ತಿಗೆದಾರರಿಗೆ ಬಿಲ್ ಕೊಡಲಿಲ್ಲ. ಹೀಗಾಗಿ ಆ ಹಣ ಮರಳಿ ಹೋಗಿತ್ತು. ಗುತ್ತಿಗೆದಾರರೇ ಅವರಿವರ ಕಾಲು ಹಿಡಿದು ಆ ಹಣ ಮರಳಿ ಬಿಡುಗಡೆ ಮಾಡಿಸಿದ್ದಾರೆ. ಈಗ ಬಿಲ್ ನೀಡಲು ಜಿಪಂನಲ್ಲಿ ಶೇ.1ರಷ್ಟು ಕಮೀಷನ್ ಕೊಟ್ಟಾಗಲೇ ಎರಡು ದಿನಗಳ ಹಿಂದೆ ಬಿಲ್ ಕೊಡಲಾಗಿದೆ. ಮೂರು ತಿಂಗಳು 11.60 ಕೋಟಿ ಜಿಪಂನಲ್ಲಿತ್ತು. ಅದರ ಬಡ್ಡಿ ಹಣ ಎಲ್ಲಿ ಹೋಯಿತು. ಇದಕ್ಕೆ ಯಾರು ಸಂಬಂಧ. ಕಮೀಷನ್ ಕೊಟ್ಟರೆ ಮಾತ್ರ ಜಿಪಂನಲ್ಲಿ ಬಿಲ್ ಕೊಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ, 11.60 ಕೋಟಿ ಅನುದಾನ ಸರ್ಕಾರದ ಪಿಡಿ ಖಾತೆಯಲ್ಲಿತ್ತು. ಚುನಾವಣೆ ನೀತಿ ಸಂಹಿತೆ ಇದ್ದಾಗ ಅನುದಾನ ಕೊಡಲು ವಿಳಂಬವಾಗಿತ್ತು. ಅಲ್ಲದೇ ಹಣ ಪಿಡಿ ಖಾತೆಗೆ ಹಾಕಿದ ಬಳಿಕ, ಸರ್ಕಾರದ ಮಟ್ಟದಲ್ಲಿ ಅಕೌಂಟ್ ಲಾಕ್ ಮಾಡಲಾಗಿತ್ತು. ಇದರಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಆಗಿರಲಿಲ್ಲ. ಬಳಿಕ ಆ ಹಣ ಸರ್ಕಾರ ಮರಳಿ ಜಮೆ ಮಾಡಿಕೊಂಡಿತ್ತು. ಈಗ ಪುನಃ ಅನುದಾನ ಬಂದಿದ್ದು, ಗುತ್ತಿಗೆದಾರರಿಗೆ ಬಿಲ್ ನೀಡಲಾಗಿದೆ. ಅವರಿಂದ ಶೇ.1ರಷ್ಟು ಕಮೀಷನ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ಹೂವಪ್ಪ ರಾಠೊಡ, ಶಿವಾನಂದ ಪಾಟೀಲ, ಶರಣಪ್ಪ ಹಂಚಿನಾಳ, ಶಶಿಕಲಾ ಯಡಹಳ್ಳಿ, ಹನಮಂತ ಕಾಖಂಡಕಿ, ಹುನಗುಂದ ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಮುಂತಾದವರು ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಅವರಿಗೆ ಪುನರ್ ಬದುಕು ಕಲ್ಪಿಸಲು ಎಲ್ಲ ರೀತಿಯ ನೆರವಾಗಬೇಕು ಎಂದು ಆಗ್ರಹಿಸಿದರು.
Related Articles
ಅಧಿಕಾರಿಗಳ ತಂಡ ರಚನೆ:
ಇಲಾಳ ಮತ್ತು ಇತರೆ 16 ಹಳ್ಳಿಗಳ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎಂದು ಸದಸ್ಯರು ಆರೋಪಿಸಿದ್ದು, ಈ ಕುರಿತು ಜಿಪಂ ಸದಸ್ಯರು ಒಳಗೊಂಡ ಅಧಿಕಾರಿಗಳ ತಂಡ ರಚಿಸಿ, ಪರಿಶೀಲಿಸಿ, ವರದಿ ಬಂದ ಬಳಿಕ ಗುತ್ತಿಗೆದಾರರು ತಪ್ಪು ಮಾಡಿದ್ದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುವುದು. • ಬಾಯಕ್ಕ ಮೇಟಿ, ಜಿಪಂ ಅಧ್ಯಕ್ಷೆ
Advertisement