Advertisement

ಮೂರ್‍ನಾಲ್ಕು ದಿನದಲ್ಲಿ ನೆರೆ ಪರಿಹಾರ ನಿರೀಕ್ಷೆ

11:17 PM Aug 29, 2019 | Lakshmi GovindaRaj |

ಮೈಸೂರು/ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರು ಸೆ.7 ಅಥವಾ 8 ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಆ ವೇಳೆ, ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿ ಹಾಗೂ ಅನಾವೃಷ್ಠಿ ಬಗ್ಗೆ ಪ್ರಧಾನಿ ಜೊತೆ ಚರ್ಚಿಸಿ, ಅಗತ್ಯವಿರುವ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್‌ಎಸ್‌ಗೆ ಗುರುವಾರ ಭೇಟಿ ನೀಡಿದ್ದ ಅವರು, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.

Advertisement

ಬಳಿಕ, ಮಾತನಾಡಿ, ಮಳೆಯಿಂದಾಗಿ ರಾಜ್ಯದ ಹಲವೆಡೆ ಸಾಕಷ್ಟು ಹಾನಿ ಸಂಭವಿಸಿದೆ. ಜೊತೆಗೆ, ಕೆಲವೆಡೆ ಮಳೆಯಿಲ್ಲದೆ ಬರಗಾಲ ಕೂಡ ಸೃಷ್ಠಿಯಾಗಿದೆ. ಈ ಬಗ್ಗೆ ಪ್ರಧಾನಿಯವರ ಗಮನ ಸೆಳೆಯಲಾಗುವುದು. ಪ್ರವಾಹದಿಂದ ಉಂಟಾಗಿರುವ ಹಾನಿ, ಸಂತ್ರಸ್ತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು.

ಬದುಕನ್ನು ಕಳೆದುಕೊಂಡು ಅತಂತ್ರ ಸ್ಥಿತಿಗೆ ಸಿಲುಕಿರುವವರಿಗೆ ಪುನರ್ವಸತಿ ಕಲ್ಪಿಸಿಕೊಡುವ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ ಹೆಚ್ಚಿನ ನೆರವು ಕೋರಲಾಗುವುದು ಎಂದು ತಿಳಿಸಿದರು. ಕೇಂದ್ರದ ಅಧ್ಯಯನ ತಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಅದರ ಆಧಾರದ ಮೇಲೆ ಮೂರ್‍ನಾಲ್ಕು ದಿನಗಳಲ್ಲಿ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದರು.

ಕಾವೇರಿಗೆ ಬಾಗಿನ ಅರ್ಪಣೆ: ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಾರಿನಿಂದ ಇಳಿದ ಯಡಿಯೂರಪ್ಪ, ತುಂಬಿದ ಜಲಾಶಯ ವೀಕ್ಷಿಸಿದರು. ಸಚಿವ ಆರ್‌.ಅಶೋಕ್‌, ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ್‌ ಸಿಂಹ ಸೇರಿದಂತೆ ಹಲವರು ಸಾಥ್‌ ನೀಡಿದರು.

ಕಾವೇರಿ ಮಾತೆಗೆ ಬಾಗಿನ ಸಲ್ಲಿಸಲು ಸಿದ್ಧಗೊಳಿಸಿದ್ದ ಸಾಮಗ್ರಿಗಳಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್‌ ಶರ್ಮಾ ನೇತೃತ್ವದ 8 ಜನರ ಪುರೋಹಿತರ ತಂಡ, ವಿಶೇಷ ಪೂಜೆ ನೆರವೇರಿಸಿತು. ಅಭಿಜಿನ್‌ ಮುಹೂರ್ತದಲ್ಲಿ ಯಡಿಯೂರಪ್ಪ ಅವರು, ಬಾಗಿನ ಅರ್ಪಿಸಿದರು. ಮೊರದೊಳಗೆ ಹಣ್ಣು, ಕಾಯಿ, ಹೂವು, ಬಾಳೆಹಣ್ಣು, ರವಿಕೆ ಕಣ, ಬಳೆ-ಬಿಚ್ಚೋಲೆ, ಎಲೆ-ಅಡಿಕೆ, ಹೆಸರುಬೇಳೆ, ಉದ್ದಿನಬೇಳೆ, ಕಡಲೆ ಬೇಳೆ, ಅಕ್ಕಿ, ಸುಗಂದ ದ್ರವ್ಯಗಳು, ಅರಿಶಿನ-ಕುಂಕುಮ ಇಟ್ಟು ಕಾವೇರಿಗೆ ಅರ್ಪಿಸಲಾಯಿತು.

Advertisement

ಕೆಆರ್‌ಎಸ್‌ ಅಭಿವೃದ್ಧಿಗೆ ಯೋಜನಾ ವರದಿ ತಯಾರಿಸಿ: ಕೆಆರ್‌ಎಸ್‌ ಬೃಂದಾವನ ವಿಶ್ವವಿಖ್ಯಾತವಾಗಿದ್ದು, ಜಗತ್ತಿನ ಮೂಲೆ ಮೂಲೆಯಿಂದ ಲಕ್ಷಾಂತರ ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಬೃಂದಾವನವನ್ನು ಇನ್ನಷ್ಟು ಸುಂದರವಾಗಿ ಅಭಿವೃದ್ಧಿಪಡಿಸಿ, ಮತ್ತಷ್ಟು ಆಕರ್ಷಣೀಯಗೊಳಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಕ್ಕೆ ನಾನು ಸಿದ್ಧನಿದ್ದೇನೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡ ಸಮಗ್ರ ಯೋಜನಾ ವರದಿ ಸಲ್ಲಿಸಿ. ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ ಎಂದು ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದರು.

ಚಾಮುಂಡಿಗೆ ವಿಶೇಷ ಪೂಜೆ: ಕಾವೇರಿಗೆ ಬಾಗಿನ ಸಲ್ಲಿಕೆಗೂ ಮುನ್ನ ಯಡಿಯೂರಪ್ಪ ಅವರು, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಬೆಳಗ್ಗೆ ಕಂದಾಯ ಸಚಿವ ಆರ್‌.ಅಶೋಕ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಯಡಿಯೂರಪ್ಪ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಡಳಿತದ ವತಿಯಿಂದ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.

ಯಡಿಯೂರಪ್ಪ ಅವರು ಬರುವುದಕ್ಕೂ ಮೊದಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು, ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡು ದಸರಾ ಸಿದ್ಧತಾ ಸಭೆಯಿಂದ ದೂರ ಉಳಿದಿದ್ದ ಶಾಸಕ ಎಸ್‌.ಎ.ರಾಮದಾಸ್‌ ಸಹ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌, ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ ಮಾಡಿ, ಶಾಲು ಹೊದಿಸಿ, ಸನ್ಮಾನಿಸಿ ಫ‌ಲ-ತಾಂಬೂಲ, ಪ್ರಸಾದ ನೀಡಿ ಗೌರವಿಸಿದರು.

ಸುಮಲತಾ-ಜೆಡಿಎಸ್‌ ಶಾಸಕರ ನಡುವೆ ಮಾತುಕತೆ ಇಲ್ಲ: ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆ ಕಾರ್ಯ ಕ್ರಮದ ವೇದಿಕೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರು ಯಡಿಯೂರಪ್ಪ ಹಾಗೂ ಜೆಡಿಎಸ್‌ ಶಾಸಕರೊಂದಿಗೆ ವೇದಿಕೆ ಹಂಚಿಕೊಂಡರು. ಇದೇ ವೇಳೆ, ಸಂಸದೆ ಸುಮಲತಾ ಅಂಬರೀಶ್‌ ಹಾಗೂ ಜೆಡಿಎಸ್‌ ಶಾಸಕರು ಪರಸ್ಪರ ಮುಖಾಮುಖೀಯಾದರೂ, ಯಾರೂ ಮುಖ ಕೊಟ್ಟು ಮಾತನಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next