Advertisement

ನೆರೆ ಪರಿಹಾರಕ್ಕೆ ಕನಿಷ್ಠ 10ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿ

09:10 PM Oct 05, 2019 | Lakshmi GovindaRaju |

ಹಾಸನ: ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 1200 ಕೋಟಿ ರೂ. ಮಧ್ಯಂತರ ನೆರವಿನಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕನಿಷ್ಠ 10 ಸಾವಿರ ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಬೇಕು ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ, ಶಾಸಕ ಎಚ್‌.ಕೆ.ಕುಮಾರಸ್ವಾಮಿ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು, ಜನಪ್ರತಿನಿಧಿಗಳ ಒತ್ತಡಕ್ಕಿಂತ ಹೆಚ್ಚಾಗಿ ಸಂತ್ರಸ್ತರು, ಜನ ಸಾಮಾನ್ಯರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ 1,200 ಕೋಟಿ ರೂ. ಬಿಡುಗಡೆ ಮಾಡಲು ಸಮ್ಮತಿಸಿದೆ. ಆದರೆ ರಾಜ್ಯ ಸರ್ಕಾರ 38 ಸಾವಿರ ಕೋಟಿ ರೂ. ಬೇಡಿಕೆಗೆ ಹೋಲಿಸಿದರೆ ಈಗ ಘೋಷಣೆಯಾಗಿರುವ ಮೊತ್ತದ ಪ್ರಮಾಣ ಶೇ.3 ರಷ್ಟಿದೆ. ಈ ನೆರವನ್ನು ಬಿಡುಗಡೆ ಮಾಡಬೇಕೋ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಅರೆ ಮನಸ್ಸಿನಿಂದ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಒಪ್ಪಿದಂತಿದೆ ಎಂದರು.

ಪ್ರಧಾನಿ ಮೋದಿ ಬರಬೇಕಿತ್ತು: ನೆರೆ ಸಂತ್ರಸ್ತರ ಸ್ಥಳಕ್ಕೆ ಪ್ರಧಾನಿ ಮೋದಿ ಅವರು ಬರಬೇಕಾಗಿತ್ತು. ಅಮೆರಿಕಕ್ಕೆ ಪ್ರವಾಸಕ್ಕೆ ಮೋದಿ ಒಂದು ವಾರ ಹೋಗಿದ್ದರು. ಆದರೆ ಅವರಿಗೆ ಕರ್ನಾಟಕಕ್ಕೆ ಅರ್ಧ ದಿನ ಬಂದು ನೆರೆ ಪರಿಸ್ಥಿತಿ ವೀಕ್ಷಿಸಲು ಸಮಯವಿರಲ್ಲವೇ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ನೆರವಿನ ಮೊತ್ತ ಪರಿಹಾರ ಕಾರ್ಯಗಳಿಗೆ ಸಾಲುವುದಿಲ್ಲ. ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಹೆಚ್ಚಿನ ಮೊತ್ತ ಬಿಡುಗಡೆಗೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಈಗ ಬಿಡುಗಡೆ ಮಾಡಿರುವ ನೆರವಿಗೆ ರಾಜ್ಯ ಸರ್ಕಾರ ತೃಪ್ತಿಪಡಬಾರದು ಎಂದು ಕುಮಾರಸ್ವಾಮಿ ಅವರು ಸಲಹೆ ನೀಡಿದರು.

ಅನುದಾನ ತಡೆಹಿಡಿದ ಸರ್ಕಾರ: ನೆರೆ ಪರಿಹಾರ ಕಾರ್ಯಗಳಿಗೆ ಹಣ ಇಲ್ಲ ಎಂದು ಈ ಹಿಂದೆ ಸಮ್ಮಿಶ್ರ ಸರ್ಕಾರ ಅನುಮೋದನೆ ನೀಡಿದ್ದ ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ 200 – 300 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯವರು ತಡೆ ಹಿಡಿದಿದ್ದಾರೆ. ಹಾಗೆಯೇ ಮುಖ್ಯಮಂತ್ರಿಯವರು ಸ್ವ ಕ್ಷೇತ್ರಕ್ಕೆ ಮಂಜೂರಾಗಿರುವ ಅನುದಾನವನ್ನೂ ತಡೆ ಹಿಡಿಯಲಿ. ಪರಿಶಿಷ್ಟ ಜಾತಿ, ವರ್ಗದ ವಿಶೇಷ ಘಟಕ ಯೋಜನೆಯಲ್ಲಿ 1150 ಕೋಟಿ ರೂ. ವಾಪಸ್‌ ಪಡೆದು ನೆರೆ ಪರಿಹಾರ ಕಾರ್ಯಗಳಿಗೆ ಖರ್ಚು ಮಾಡಲು ಸರ್ಕಾರ ತೀರ್ಮಾನ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಇದು ಖಂಡನೀಯ ಎಂದು ಆಕ್ರೋಶವ್ಯಕ್ತಪಡಿಸಿದ‌ರು.

ಪರಿಹಾರಕ್ಕೆ ಎಸ್ಸಿ,ಎಸ್ಟಿ ಅನುದಾನ ಬಳಕೆಗೆ ವಿರೋಧ: ಪರಿಶಿಷ್ಟ ಜಾತಿ, ವರ್ಗಗಳಿಗೆ ಮೀಸಲಾಗಿದ್ದ ಮೊತ್ತವನ್ನು ನೆರೆ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವ ಸರ್ಕಾರದ ನಿರ್ಧಾರದ ಬಗ್ಗೆ ಅ.10 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ. ಸದನದ ಹೊರಗೂ ಃಓರಾಟ ನಡೆಸುತ್ತೇವೆ ಎಂದು ತಿಳಿಸಿದರು.

Advertisement

ರಾಜ್ಯಾದ್ಯಂತ ಪ್ರತಿಭಟನೆ: ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಅಗತ್ಯದಷ್ಟು ನೆರವು ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಆಹಗೂ ನೆರೆ ಪರಿಹಾರ ಕಾರ್ಯಗಳಿಗೆ ಎಸ್ಟಿ, ಎಸ್ಟಿ ವಿಶೆಷ ಘಟಕ ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಳ್ಳು ನಿರ್ಧಾರವನ್ನು ಖಂಡಿಸಿ ಅ.10 ರಂದು ಜೆಡಿಎಸ್‌ ಎಲ್ಲಾ ತಾಲೂಕು ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಬಯಲು ಶೌಚ ಮುಕ್ತ ದೇಶವಲ್ಲ: ಭಾರತ ಬಯಲು ಮುಕ್ತ ದೇಶ ಎಂದು ಪ್ರಧಾನಿಯವರು ಘೋಷಣೆ ಮಾಡಿದ್ದಾರೆ. ನಿಜಕ್ಕೂ ಭಾರತ ಬಯಲು ಮುಕ್ತ ದೇಶವಾಗಿದೆಯೇ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು. ದೇಶದಲ್ಲಿ ವರ್ಷಕ್ಕೆ 5. 80ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ದೇಶ ಬಯಲು ಶೌಚಮುಕ್ತವಾಗಿಲ್ಲ. ಪ್ರಧಾನಿಯವರು . ಬಯಲು ಶೌಚ ಮುಕ್ತ ಭಾರತ ಘೊಷಣೆಯನ್ನು ವಾಪಸ್‌ ಪಡೆಯಬೇಕು ಎಂದು ಎಚ್‌.ಕೆ. ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ನಾಗರಾಜು, ನಿರ್ದೇಶಕ ಜಯರಾಂ, ನಗರಸಭೆ ಮಾಜಿ ಅಧ್ಯಕ್ಷ ಸಯ್ನಾದ್‌ ಅಕºರ್‌, ಜಿಲ್ಲಾ ಜೆಡಿಎಸ್‌ ವಕ್ತಾರ ಎಚ್‌.ಎಸ್‌.ರಘು ಸುದ್ದಿಗೋಷ್ಠಿಯಲ್ಲಿದ್ದರು.

ಕೇಂದ್ರ, ರಾಜ್ಯ ವೆಚ್ಚ ಭರಿಸಲಿ: ಆನೆ ಹಾವಳಿ ತಪ್ಪಿಸುವುದಕ್ಕೆ ಸುಮಾರು 512 ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದೇವೆ ಎಂಬ ಹೇಳಿಕೆಯನ್ನು ಸಚಿವ ಮಾಧುಸ್ವಾಮಿ ನೀಡಿದ್ದಾರೆ. 2 ವರ್ಷದ ಹಿಂದೆಯೇ ಸುಮಾರು 120 ಕಿ.ಮೀ. ರೈಲ್ವೆ ಹಳಿ ಬೇಲಿ ನಿರ್ಮಿಸುವ ತೀರ್ಮಾನವನ್ನು ಸರ್ಕಾರ ಮಾಡಿತ್ತು. ಒಂದು ಕಿ.ಮೀ.ಗೆ 1.20 ಕೋಟಿ ರೂ.ವೆಚ್ಚ ತಗಲುತ್ತದೆ ಎಂದು ಅಂದಾಜು ಮಾಡಲಾಗಿತ್ತು. ರೈಲು ಹಳಿ ಬೇಳಿ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವೆಚ್ಚ ಭರಿಸಲಿ ನೀಡಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಹೆದ್ದಾರಿ ಕಾಮಗಾರಿ ಸ್ಥಗಿತ: ಹಾಸನ – ಬಿ.ಸಿ.ರೋಡ್‌ ನಡುವೆ ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಹಾಸನ – ಸಕಲೇಶಪುರ ನಡುವಿನ ಅಂದಾಜು 564 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಇದುವರೆಗೂ 23 ಕೋಟಿಯಷ್ಟು ಕಾಮಗಾರಿಯಾಗಿದೆ. ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ಮೌನವಾಗಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next