ಬರ್ಲಿನ್: ಹಿಂದೆಂದೂ ಕಂಡರಿಯದಂಥ ಭಾರೀ ಪ್ರವಾಹ ಹಾಗೂ ಭೂಕುಸಿತವು ಪಶ್ಚಿಮ ಜರ್ಮನಿ ಮತ್ತು ಬೆಲ್ಜಿಯಂ ಅನ್ನು ಬೆಚ್ಚಿ ಬೀಳಿಸಿದೆ. ಪ್ರವಾಹ, ಭೂಕುಸಿತ ಸಂಬಂಧಿ ಘಟನೆಗಳಿಗೆ120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು,2 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ:ವಿದಿಶಾ; ರಕ್ಷಿಸಲು ಹೋದ 30 ಜನರು ಬಾವಿಗೆ ಬಿದ್ದ ಘಟನೆ – ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಅಹ್ರ್ ನದಿಯು ರಾತ್ರೋರಾತ್ರಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ, ಹಲವು ಗ್ರಾಮ ಗಳು ರಾತ್ರಿ ಬೆಳಗಾಗುವುದರೊಳಗೆ ನಿರ್ನಾಮಗೊಂಡಿವೆ. ಜನರು ಭಯಭೀತಿಯಿಂದ ಮನೆ ಯೊಳಗೇ ಕುಳಿತಿರುವ ಹಾಗೆಯೇ ಮನೆಗಳು ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಸಾವಿನ ಸಂಖ್ಯೆಯನ್ನು ಸದ್ಯಕ್ಕೆ ಅಂದಾಜು ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾವು ಇಲ್ಲಿ ಕಳೆದ 20ವರ್ಷಗಳಿಂದ ವಾಸವಾಗಿದ್ದೇವೆ, ಆದರೆ ಇಂತಹ ಯುದ್ಧ ವಲಯದಂತಹ ಪರಿಸ್ಥಿತಿಯ ಅನುಭವವಾಗಿರಲಿಲ್ಲ ಎಂದು ಜರ್ಮನ್ ನಿವಾಸಿಯೊಬ್ಬರು ತಿಳಿಸಿದ್ದಾರೆ. ಬೆಲ್ಜಿಯಂನಲ್ಲಿಯೂ ಧಾರಾಕಾರ ಮಳೆಗೆ ಸಾವನ್ನಪ್ಪಿರುವವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ 21ಸಾವಿರಕ್ಕೂ ಅಧಿಕ ಜನರು ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನು ಜರ್ಮನಿಯ ಆಧುನಿಕ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎಂದು ಬಣ್ಣಿಸಲಾಗಿದೆ. 1962ರಲ್ಲಿ ಹ್ಯಾಂಬರ್ಗ್‌ನಲ್ಲಿ ಪ್ರವಾಹ ಉಂಟಾಗಿ 300 ಮಂದಿ ಸಾವಿಗೀಡಾಗಿದ್ದರು. “ಈ ದುರ್ಘಟನೆಯು ನನ್ನನ್ನು ಆಘಾತಕ್ಕೆ ನೂಕಿದೆ’ ಎಂದು ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೆನ್ ಮಿಯರ್ ಹೇಳಿದ್ದಾರೆ.