Advertisement

ಜಲದಿ ಜನ್ಮಭೂಮಿ

09:54 AM Aug 18, 2019 | mahesh |

ಬೆಂಗಳೂರು, ವಲಸಿಗರ ಕರ್ಮಭೂಮಿ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದವರಿಗೆ ಪ್ರತಿಕ್ಷಣವೂ ಕಾಡುವುದು ಜನ್ಮಭೂಮಿಯ ನೆನಪುಗಳು. ಇಲ್ಲಿ ನೆಲೆನಿಂತು ವರುಷಗಳುರುಳಿದರೂ, ರಾತ್ರಿ ಬೀಳುವುದೂ ಬರೀ ಹುಟ್ಟೂರಿನ ಕನಸುಗಳು. ಕ್ಷಣಕ್ಕೂ ಕ್ಷಣಕ್ಕೂ ಊರಿನ ನೆನಪಿನೊಂದಿಗೆ ಜೀಕುತ್ತಾ, ಇಲ್ಲಿ ಕೆಲಸದಲ್ಲಿ ಮುಳುಗಿರುವಾಗ, ಅತ್ತ ಹುಟ್ಟೂರು ಮುಳುಗಿದೆಯೆನ್ನುವ ಸುದ್ದಿ ಕೇಳಿದಾಗ ಯಾರಿಗೂ ದಿಗಿಲಾಗುತ್ತದೆ. ಈ ಪ್ರವಾಹದ ಹೊತ್ತಿನಲ್ಲಿ ಹಾಗೆ ವಿಳಾಸ ಕಳಕೊಂಡವರ ಧ್ವನಿ ಕಟ್ಟಿದಂತಿದೆ…

Advertisement

ಚಸ್ಮಾ ಇದ್ದಿದ್ದರೆ, ಅಪ್ಪ ಪ್ರವಾಹ ನೋಡುತ್ತಿದ್ದ!
– ಮಲ್ಲಪ್ಪ ತಿಪ್ಪಣ್ಣ ತಳವಾರ, ಪೊಲೀಸ್‌
ಹುಟ್ಟೂರು: ಹಿರೇಪಡಸಲಗಿ, ಜಮಖಂಡಿ ತಾಲೂಕು
“ಜಮೀನು ಮುಳುಗೈತಿ. ಮನೆಗುಂಟ ನೀರು ಬರಕತ್ತೈತಿ. ಇನ್ನೇನು ಊರೂ ಕಾಣ್ಸಗಿಲ್ಲ. ಅಜ್ಜಾ ಹೋಗೂಣ ಬಾ…’ ಅಂತ ಅಕ್ಕಪಕ್ಕದವರು ಎಷ್ಟೇ ಗಟ್ಟಿ ಹೇಳಿದರೂ, ಬಹುಶಃ ನನ್ನ ತಂದೆಗೆ ಅದು ಕೇಳಿರುವುದೂ ಇಲ್ಲ. ಅವರಿಗೆ ವಯಸ್ಸು 80 ದಾಟಿದೆ. ಕಿವಿ ಕೇಳಿಸದು. ದೃಷ್ಟಿ ಹೋಗಿದೆ. ಕಳೆದಸಲ ಊರಿಗೆ ಹೋದಾಗ, “ನಂಗೆ ಮೊದಲು ಕಣ್ಣಿತ್ತಲ್ಲ, ಹಾಗೇ ಕಾಣಂಗ್‌ ಮಾಡು’ ಅಂದಿದ್ರು. “ಡಾಕ್ಟರ್‌ ಹಂಗೆಲ್ಲ ಚಸ್ಮಾ ಕೊಡಂಗಿಲ್ಲ. ಟೆಸ್ಟ್‌ ಮಾಡೀನೇ ಹಾಕ್ಕೋಬೇಕು’ ಅಂದಿದ್ದೆ. ಕಣ್ಣಿನ ನರ ದುರ್ಬಲ ಆಗಿದ್ದರಿಂದ, ವೈದ್ಯರೂ ಆಪರೇಶನ್‌ಗೆ ಮನಸ್ಸು ಮಾಡಿರಲಿಲ್ಲ. ಮೊನ್ನೆ ನೆರೆ ಬಂದಾಗ, ನನ್ನ ತಂದೆಯನ್ನು ಕೆಲವರು ಎತ್ಕೊಂಡು ಟ್ರ್ಯಾಕ್ಟರ್‌ನಲ್ಲಿ ಕೂರಿಸಿದ್ದಾರೆ ಅಂತ ಕೇಳಿದೆ. ಟ್ರ್ಯಾಕ್ಟರ್‌ನಲ್ಲಿ ಕುಳಿತ ಆ ಜೀವಕ್ಕೆ ತಾನು ಎಲ್ಲಿಗೆ ಹೊರಟಿದ್ದೀನಿ, ಇವತ್ತು ಗಂಜಿ ಕೇಂದ್ರದಲ್ಲಿದ್ದರೂ ತಾನೆಲ್ಲಿದ್ದೀನಿ ಅನ್ನೋ ವಿಚಾರವೇ ಅವರಿಗೆ ಇನ್ನೂ ಗೊತ್ತಿರುವುದು ಕಷ್ಟ.

ಬೆಂಗಳೂರಿನ ಅಲಸೂರು ಗೇಟ್‌ ಠಾಣೆಯಲ್ಲಿ ನಾನು ಪೊಲೀಸ್‌ ಕೆಲಸದಲ್ಲಿದ್ದೇನೆ. ಅದಕ್ಕೂ ಮುಂಚೆ ಆರ್ಮಿಯಲ್ಲಿದ್ದೆ. ನನ್ನ ಊರು, ಜಮಖಂಡಿ ತಾಲೂಕಿನ ಹಿರೇಪಡಸಲಗಿ. ಕೃಷ್ಣಾ ನದಿಯ ದಂಡೆಯಲ್ಲಿದೆ. ಕೊಯ್ನಾ ಡ್ಯಾಮ್‌ನ ನೀರು ಬಿಟ್ಟಿದ್ದರಿಂದ, ಈಗ ಅಲ್ಲೇನೂ ಕಾಣದಂತಾಗಿದೆ. ನನಗೆ ರಜೆ ಸಿಕ್ಕಿದೆಯಾದರೂ, ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಊರ ಸುತ್ತಲಿನ ರಸ್ತೆಗಳು, ಸೇತುವೆಗಳೆಲ್ಲ ಮುಳುಗಿ ಹೋಗಿವೆ. ನನ್ನ ತಮ್ಮನಿಂದ, ತಂದೆ- ತಾಯಿಯ ವಿಚಾರವನ್ನು ಕೇಳಿ, ತಿಳಿಯುತ್ತಿದ್ದೇನೆ. ಪ್ರವಾಹ ತಗ್ಗಿದ ಮೇಲೆ, ನಾನು ಅಪ್ಪ- ಅಮ್ಮನ ಮುಖ ನೋಡಬೇಕು.

ನನ್ನ ತಾಯಿಗೆ ಒಂದು ಫೋನು ಕೊಡಿಸಿದ್ದೆ. ಅದಕ್ಕೆ ಚಾರ್ಜ್‌ ಹಾಕುವುದೂ ಅವರಿಗೆ ಗೊತ್ತಿಲ್ಲ. ಹ್ಯಾಗೆ ಬಟನ್‌ ಒತ್ಬೇಕು ಅನ್ನೋದು ತಿಳಿಯದೇ, ಅದನ್ನು ಬಳಸುವುದೇ ಬಿಟ್ಟಿದ್ದಾರೆ. “ಇಲ್ಲೇ ಇರಿ, ಊಟ ಮಾಡಿ, ಸುಮೆR ಕುಂದುರ್ರಿ. ವಯಸ್ಸಾದ ಮೇಲೆ ಮಕ್ಕಳ ಜತೆ ಇದ್ರೆ ಆತಲ್ಲ’ ಅಂದ್ರೆ, ಅವರು ಜಮೀನು ಬಿಟ್ಟು ಬರೋದಿಕ್ಕೆ ತಯಾರಿಲ್ಲ. ನಾನು ಇಲ್ಲಿ ಕೆಲಸ ಬಿಟ್ಟು, ಊರಿಗೆ ಹೋಗೋಕೆ ಆಗೋಲ್ಲ. ಇದೇ ನನಗೆ ಹೊಟ್ಟೆಪಾಡು. ಹೋದಾಗೆಲ್ಲ ಕಾಸು, ರೇಶನ್ನು ಕೊಟ್ಟು, ಮಾತಾಡಿಸಿಕೊಂಡು ಬರೋ ಹಾಗೆ ಆಗಿದೆ. “ಹೆಂಗೋ ಏನೋ, ಇಲ್ಲೇ ಇರ್ತೀವಿ’ ಅಂತಿದ್ರು.

ಅಪ್ಪನ ಪ್ರತಿ ಸೇವೆಯನ್ನೂ ಅವ್ವನೇ ಮಾಡೋದು. ಆಕೆಗೂ ವಯಸ್ಸಾಗಿದೆ. ಆಡು- ಮೇಕೆಗಳೆಂದರೆ, ಅವಳಿಗೆ ಪ್ರಾಣ. ವಯಸ್ಸಾದ ತಂದೆ- ತಾಯಿಯನ್ನು ಹೀಗೆ ದೂರದಲ್ಲಿ ಬಿಟ್ಟಿರೋದು, ಮಕ್ಕಳಿಗೂ ಕಷ್ಟ. ಏನು ಮಾಡೋದು? ನಾವು ಹೊಟ್ಟೆಪಾಡಿಗಾಗಿ ಈ ಬೆಂಗಳೂರಿನಲ್ಲಿ ದುಡಿಯಲೇಬೇಕಿದೆ.

Advertisement

ನಮ್ಮೂರಲ್ಲೀಗ ಒಬ್ಬನೇ ಒಬ್ಬ ಮನುಷ್ಯನಿಲ್ಲ…
– ಯಶವಂತ್‌
“ರೈಟ್‌ ಮ್ಯಾನೇಜ್‌ಮೆಂಟ್‌’ ಉದ್ಯೋಗಿ
ಹುಟ್ಟೂರು: ಆಲೆಖಾನ್‌ ಹೊರಟ್ಟಿ, ಮೂಡಿಗೆರೆ
ಪ್ರತಿನಿತ್ಯ ಕೆಲಸ ಮುಗಿಸಿ ಮನೆಗೆ ಬಂದಾದ ಮೇಲೆ ಊರಿಗೆ ಫೋನು ಮಾಡುವುದು ರೂಢಿ. ಕಳೆದವಾರ ಯಾಕೋ ಅಲ್ಲಿಗೆ ಫೋನೇ ಹೋಗುತ್ತಿರಲಿಲ್ಲ. ಮೂಡಿಗೆರೆಯಿಂದ 35 ಕಿ.ಮೀ. ದೂರದಲ್ಲಿರುವ ನನ್ನ ಊರು ಇರೋದು ದಟ್ಟ ಕಾಡಿನ ನಡುವೆ. ಅಲ್ಲಿ ಸಿಗ್ನಲ್‌ ಸಿಗದೇ ಇರೋದು ಸಾಮಾನ್ಯ ಅಂತ ಸುಮ್ಮನಿದ್ದೆ. ಆದರೆ, ಯಾವಾಗ ಅಲ್ಲಿ ಪರಿಸ್ಥಿತಿ ಕೈ ಮೀರಿತೋ, ಆಗ ಊರಿಂದ ತುರ್ತು ಫೋನ್‌ ಬಂತು. ಕಟ್‌ ಕಟ್‌ ಆಗುತ್ತಿದ್ದ ವಾಯ್ಸನಲ್ಲೇ, ಜೀವಕ್ಕೆ ನಡುಕ ಹುಟ್ಟಿಸುವಂಥ ಸುದ್ದಿ ಕೇಳಿದೆ.

ನಮ್ಮ ಅಕ್ಕಪಕ್ಕದ ಮನೆಯವರು ಗುಡ್ಡ ಕುಸಿತಕ್ಕೆ ಹೆದರಿ, ನಮ್ಮ ಮನೆಗೆ ಓಡಿಬಂದಿದ್ದರು. ಪಕ್ಕದ ಊರಿಗೆ, ತಿಥಿ ಕಾರ್ಯಕ್ರಮಕ್ಕಾಗಿ ಹೋಗಿದ್ದ ಅಪ್ಪ, ವಾಪಸು ಬರುವಾಗ, ಊರಿನ ಚಿತ್ರವೇ ಬದಲಾಗಿತ್ತು. ಇದ್ದ ಒಂದು ಸೇತುವೆಯೂ ಮುಳುಗಿತ್ತು. ಕಣ್ಣೆದುರೇ ಗುಡ್ಡಗಳು ಕುಸಿಯುತ್ತಿದ್ದವು. ಕೊನೆಗೆ ಹೇಗೋ ಸಾಹಸಪಟ್ಟು ಮನೆ ಮುಟ್ಟಿದ್ದರಂತೆ.

ಆಲೆಖಾನ್‌ ಹೊರಟ್ಟಿ ಊರಿನ ಕೆಲವು ಹುಡುಗರು, ಬೆಂಗಳೂರಿನಲ್ಲಿದ್ದೇವೆ. ನಾವೆಲ್ಲ ಸೇರಿಕೊಂಡು, ಅಗ್ನಿಶಾಮಕ ದಳದವರಿಗೆ, ಅಲ್ಲಿನ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ವಿಷಯ ಮುಟ್ಟಿಸಿದೆವು. ಫೈರ್‌ ಡಿಪಾರ್ಟ್‌ಮೆಂಟ್‌ನ ಒಂದು ತಂಡ, ಕಾಡಿನಲ್ಲಿ 8 ಕಿ.ಮೀ. ನಡೆದು, ಊರಿಗೆ ಹೋಗಲೆತ್ನಿಸಿತಾದರೂ, ಒಂದು ದಿನದಲ್ಲಿ ಅದು ಸಾಧ್ಯವಾಗಲಿಲ್ಲ. ಕೊನೆಗೆ ಮಿಲಿಟರಿಯವರು ನೆರವಿಗೆ ಬಂದರಂತೆ.

ಊರಿನಲ್ಲಿ ಜೀವಹಾನಿ ಆಗಿಲ್ಲವಾದರೂ, ನಾವು ಸಾಕಿದ್ದ ದನಕರುಗಳೆಲ್ಲ ಎಲ್ಲಿ ಕೊಚ್ಚಿ ಹೋಗಿವೆಯೋ, ಇವತ್ತಿಗೂ ತಿಳಿದಿಲ್ಲ. ಇಂದು ನಮ್ಮ ಊರಿನಲ್ಲಿ ಒಬ್ಬನೇ ಒಬ್ಬ ಮನುಷ್ಯನಿಲ್ಲ. ಊರಿನಲ್ಲಿದ್ದ 75 ಜನರನ್ನು ಸುರಕ್ಷಿತವಾಗಿ, ಮೂಡಿಗೆರೆಯ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ವಯಸ್ಸಾದವರನ್ನು, ವ್ಹೀಲ್‌ಚೇರ್‌ನಲ್ಲಿ ಇದ್ದಂಥವರನ್ನು, ಆ ಕಾಡಿನಿಂದ ಹೊರ ತರುವಷ್ಟರಲ್ಲಿ ಮಿಲಿಟರಿಯವರೂ, ಸುಸ್ತು ಹೊಡೆದಿದ್ದಾರೆ. ಈ ಕಾರ್ಯಾಚರಣೆಗೆ ಬರೋಬ್ಬರಿ ಎರಡು ದಿನಗಳೇ ತಗುಲಿವೆ.

ರಜೆ ಇದ್ದ ಕಾರಣ, ನಾನೀಗ ಕಾಳಜಿ ಕೇಂದ್ರಕ್ಕೆ ಬಂದಿದ್ದೇನೆ. ಇಲ್ಲಿ ಎಲ್ಲರ ಮೊಗದಲ್ಲೂ ಚಿಂತೆ. ಊರಿನಲ್ಲಿ ಮನೆಗಳೆಲ್ಲ ಏನಾಗಿವೆಯೋ ಎಂಬ ಆತಂಕ ಅವರಿಗೆ. ಗಟ್ಟಿ ಮಣ್ಣಿನ ಬೆಟ್ಟ ಇದ್ದಕ್ಕಿದ್ದಂತೆ, ಒಬ್ಬ ಮನುಷ್ಯನನ್ನು ಆಹುತಿ ತೆಗೆದುಕೊಳ್ಳುವಷ್ಟು ಮೆತ್ತಗಾಗಿ, ಕುಸಿಯುತ್ತಿದೆಯೆಂದರೆ, ಯಾರಿಗೂ ನಂಬಲಾಗುತ್ತಿಲ್ಲ. ಕೈಯ್ನಾರೆ ನೆಟ್ಟ ಗಿಡಗಳು, ತೋಟಗಳೆಲ್ಲ ಮಣ್ಣಡಿಯಲ್ಲಿವೆ.

ಅಮ್ಮನ ಸ್ಥಿತಿ ನೆನೆದು, ನಿದ್ದೆ ಬರುತ್ತಿಲ್ಲ…
ರಾಜು ಮುಲ್ಲಾ
ಕಿರಿಯ ಸಹಾಯಕ, ವಿಧಾನಸೌಧ
ಹುಟ್ಟೂರು: ಟಕ್ಕಳಕಿ, ಬಾಗಲಕೋಟೆ
ಬೆಂಗಳೂರಿನಲ್ಲಿ ನೆಲೆನಿಂತ ಹೊರ ಊರಿಗರಂತೆ, ನಾನು ಕೂಡ ಸಾಲು ರಜೆ ಸಿಕ್ಕರೆ ಸಾಕು, ಹುಟ್ಟೂರಿಗೆ ಹೋಗ್ಬೇಕು ಅಂತ ಕಾಯುವವನು. ಈ ಬಾರಿಯ ಬಕ್ರೀದ್‌ ಹಬ್ಬಕ್ಕೆ ಊರಿಗೆ ಬರ್ತೀನಿ ಅಂತ ಅಮ್ಮನ ಬಳಿ ಹೇಳಿದ್ದೆ. ರಿಸರ್ವೇಶನ್ನೂ ಮಾಡಿಸಿದ್ದೆ. ಈಗ ನನ್ನ ಊರು ನೀರೊಳಗೆ ಮುಳುಗಿದೆ. ಊರಿನ ಹಲವು ಮನೆಗಳ ಮೇಲೆ ಮೂರ್ನಾಲ್ಕು ಅಡಿ ನೀರು ನಿಂತಿದೆಯೆಂದರೆ, ಅದರ ತೀವ್ರತೆಯನ್ನು ನೀವೇ ಊಹಿಸಿಕೊಳ್ಳಿ. ಊರಿಗೆ ಊರೇ ಕಾಣಿಸುತ್ತಿಲ್ಲ ಎನ್ನುವಂಥ ಸ್ಥಿತಿ.

“ನಾವೇ ಗಂಜಿಕೇಂದ್ರಗಳಲ್ಲಿದ್ದೀವಿ. ನೀ ಬಂದ್‌ ಇಲ್ಲಿ ಏನ್ಮಾಡ್ತೀಯ? ನೀ ಅಲ್ಲೇ ಇರು. ಈ ವರ್ಷ ಹಬ್ಬ ಮಾಡಕ್ಕಾಗಂಗಿಲ್ಲ. ಅನ್ನಕ್ಕಾಗಿ ತಟ್ಟಿ ಹಿಡಿದು ಕೈ ಚಾಚೋ ಪರಿಸ್ಥಿತಿ ಐತಿ, ನೀ ಬರಬ್ಯಾಡಪ್ಪಾ…’ ಎಂದು ಅಮ್ಮ ಬಿಕ್ಕುತ್ತಿದ್ದಾರೆ. ಅಲ್ಲಿ ಊರಿನಲ್ಲಿ ಹಾಗಾಗಿರುವಾಗ, ಇಲ್ಲಿ ನಮಗೆ ಕಣ್ಣಿಗೆ ನಿದ್ರೆಯೇ ಹತ್ತುತ್ತಿಲ್ಲ.
ನಾನು ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದವನು. ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾದರೆ, ಕೊಯ್ನಾ ಡ್ಯಾಂ ಭರ್ತಿ ಆಗುತ್ತದೆ. ಹೆಚ್ಚುವರಿ ನೀರನ್ನು ಅದರ ದ್ವಾರಗಳಿಂದ ಬಿಡುತ್ತಾರೆ. ಟಕ್ಕಳಕಿಯು ತುಂಬಾ ತಗ್ಗುಪ್ರದೇಶದಲ್ಲಿರುವುದರಿಂದ, ಈ ಊರು ಕೃಷ್ಣೆಯ ಪ್ರವಾಹಕ್ಕೆ ಅತಿ ಸುಲಭದ ತುತ್ತು.

ಮೊನ್ನೆಯೂ ಹಾಗೆಯೇ ಆಯ್ತು. ಜಾನುವಾರುಗಳಿಗೆ ಮೇವು ಹಾಕಲೆಂದು ನಡುರಾತ್ರಿಯಲ್ಲಿ ಎದ್ದಿದ್ದಾರೆ. ಮನೆಯ ಹಿಂಬದಿ ಕಾಲಿಟ್ಟಾಗ, ಮೊಣಕಾಲು ಮುಳುಗುವಷ್ಟು ನೀರು! ಉಟ್ಟಬಟ್ಟೆಯಲ್ಲೇ ಮಧ್ಯರಾತ್ರಿ ಮನೆ ಬಿಟ್ಟಿದ್ದಾರೆ. ಬಟ್ಟೆ- ಪಾತ್ರೆ- ಪೆಟ್ಟಿಗೆಗಳನ್ನೆಲ್ಲ ಅಲ್ಲಿಯೇ ಬಿಟ್ಟು, ಜೀವ ಕೈಯಲ್ಲಿ ಹಿಡಿದು ಓಡಿಬಂದಿದ್ದಾರೆ. ಕೇವಲ ನಮ್ಮೂರು ಮಾತ್ರವಲ್ಲ, ಸುತ್ತಮುತ್ತಲಿನ ಹಳ್ಳಿಯ ಜನರೆಲ್ಲ ಈಗ ಗಂಜಿಕೇಂದ್ರಗಳಲ್ಲಿದ್ದಾರೆ.

ನನಗೆ ಇನ್ನೂ ಊರಿಗೆ ಹೋಗಲು ಸಾಧ್ಯವಾಗಿಲ್ಲ. ಅಲ್ಲಿಗೆ ಹೋಗಲು ರಸ್ತೆಗಳೂ ಇಲ್ಲದಂತಾಗಿದೆ. ನನ್ನ ಒರಿಜಿನಲ್‌ ಡಾಕ್ಯುಮೆಂಟ್‌ಗಳು, ಪದವಿ ಸರ್ಟಿಫಿಕೇಟ್‌ಗಳೆಲ್ಲ ನೀರಿನಲ್ಲಿ ಎಲ್ಲಿ ಕೊಚ್ಚಿ ಹೋಗಿವೆಯೋ ಗೊತ್ತಿಲ್ಲ. ಮದುವೆಯಲ್ಲಿ ಕೊಟ್ಟ ಉಡುಗೊರೆಗಳು, ಆಲ್ಬಮ್ಮುಗಳ ನೆನಪುಗಳನ್ನೆಲ್ಲ ನೀರು ಬಲಿ ತೆಗೆದುಕೊಂಡಿದೆ.

ಬೆಳಗಾಗೋದ್ರೊಳಗೆ ಮುಳುಗಿ ಹೋಗ್ತಿವೇನೋ..!
ಮಂಜುನಾಥ್‌ ವೈದ್ಯ
ಅಕೌಂಟೆಂಟ್‌, ವರ್ಲ್ದ್ ಟ್ರೇಡ್‌ ಸೆಂಟರ್‌
ರಾಮನಗುಳಿ, ಅಂಕೋಲಾ
ಜೋರು ನಿದ್ರೆಯಲ್ಲಿದ್ದೆವು. ಬೆಳಗ್ಗೆ 4.30ರ ಹೊತ್ತಿನಲ್ಲಿ ಊರಿನಿಂದ ಭಾವನ ಫೋನು ಬಂತು. “ಗಂಗಾವಳಿ ಹೊಳೆಯ ನೀರು, ಮನೆಯೊಳಗೇ ಬಂದುಬಿಟ್ಟಿದೆ. ಹತ್ತು ನಿಮಿಷ ಆಗಿದ್ರೂ, ಬಚಾವಾಗೋದು ಕಷ್ಟವಿತ್ತು. ಬೆಳಗಾಗುವುದರೊಳಗೆ ಮುಳುಗಿ ಹೋಗ್ತಿನೋ…’ ಎಂದಾಗ, ಅದನ್ನು ಕೇಳುತ್ತಿದ್ದ ನನ್ನ ಅಕ್ಕನ ಕಂಗಳು ತೇವಗೊಂಡಿದ್ದವು.

ಅಂಕೋಲಾ ತಾಲೂಕಿನ ನ್ಯಾಷನಲ್‌ ಹೈವೇ ಪಕ್ಕದಲ್ಲೇ ಇರುವ ಊರು ರಾಮನಗುಳಿ. ನಾನು ಹುಟ್ಟಿದ ಮನೆ, ಒಂದು ರಾತ್ರಿಯೊಳಗೆ ದ್ವೀಪವಾಗಿದ್ದನ್ನು ಕೇಳಿ, ಆತಂಕ ಹೆಚ್ಚಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ. ಅಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿತ್ತಂತೆ. ರಾತ್ರಿ 2ರ ಹೊತ್ತಿಗೆ ಅಮ್ಮ ಯಾಕೋ ಎದ್ದು, ಅಡುಗೆ ಮನೆಯ ಕಡೆಗೆ ಕಣ್ಣು ಹಾಯಿಸಿದ್ದಾರೆ. ಅಷ್ಟರಲ್ಲಾಗಲೇ ಅಲ್ಲಿ ನೀರು ನುಗ್ಗಿ, ಪಾತ್ರೆಗಳೆಲ್ಲ ತೇಲುತ್ತಿದ್ದವು. ಅವರು ಮಲಗಿದ್ದ ಹಾಲ್‌, ಸ್ವಲ್ಪ ಎತ್ತರದಲ್ಲಿತ್ತು. ಮನೆಯ ಜಗುಲಿ ಮೇಲೂ ನೀರು ಬಂದಾಗಿತ್ತು. ಇನ್ನು 10 ನಿಮಿಷ ತಡವಾಗಿದ್ದರೂ, ಅವರು ಮನೆಯಿಂದ ಈಚೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪ- ಅಮ್ಮ ಅಲ್ಲೇ ಸಮೀಪವಿದ್ದ, ಅಕ್ಕನ ಮನೆಗೆ ಬಂದು ಆಶ್ರಯ ಪಡೆದರು.

ಹೀಗೆಲ್ಲ ಆಗುವುದಕ್ಕೂ ಎರಡೂರು ದಿನಗಳ ಮೊದಲು ನಮ್ಮ ಊರಿಗೆ ಫೋನ್‌ ಹೋಗುತ್ತಿರಲಿಲ್ಲ. ಕರೆಂಟೂ ಇಲ್ಲದಾಗಿತ್ತು. ಅಲ್ಲೇನಾಗ್ತಿದೆ ಅನ್ನೋದೇ ನಮಗೆ ತಿಳಿಯದಾಗಿತ್ತು. ದೇವರಗೂಡಿನಲ್ಲಿಟ್ಟಿದ್ದ ಫೋಟೋಗಳೆಲ್ಲ ನದಿಪಾಲಾಗಿವೆ. ಅಪ್ಪ, ಸಾಲಿಗ್ರಾಮವನ್ನು ಇಟ್ಟು ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಆ ಹರಳೂ ಪ್ರವಾಹದಲ್ಲಿ ತೇಲಿಹೋಗಿದೆ. ದೇವರಿಂದಲೂ ನಮ್ಮ ಮನೆಯನ್ನು ಕಾಪಾಡಲಾಗಲಿಲ್ಲ ಎಂಬುದೇ ಅವರಿಗೆ ಚಿಂತೆಯಾಗಿದೆ.



ವಾಟ್ಸಾಪಲ್ಲಿ ಬಂದಿದ್ದು, ನಮ್ಮನೆ ಫೋಟೋ!

ಮಂಜು, ಟೊಯೆಟೊ ಕಂಪನಿ ನೌಕರ
ಹುಟ್ಟೂರು: ಖ್ಯಾಡ, ಬಾದಾಮಿ
ನಾನು ಡ್ನೂಟಿ ಮುಗಿಸಿ, ಮನೆಗೆ ಹೋಗುವಾಗ, ನಮ್ಮೂರಿನ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಂದಷ್ಟು ಫೋಟೋಗಳು ಬಂದವು. ಬೆಂಗಳೂರಿನಂಥ ದೂರದ ಸಿಟಿಯಲ್ಲಿರುವ ನನ್ನಂಥವರಿಗೆ ಊರಿನ ಚಿತ್ರಗಳೆಂದರೆ, ಏನೋ ಒಂದು ಕುತೂಹಲ. ಅದೇ ಕೌತುಕದಲ್ಲಿಯೇ ಝೂಮ್‌ ಮಾಡಿ ನೋಡಿದೆ. ಹಾಗೆ ಝೂಮ್‌ ಮಾಡಿದ, ಬೆರಳುಗಳೇಕೋ ಕಂಪಿಸತೊಡಗಿದವು. ಫೋಟೋಗಳನ್ನು ಮತ್ತೂಮ್ಮೆ ದೊಡ್ಡದು ಮಾಡಿ, ನೋಡಿ ಬೆಚ್ಚಿಬಿದ್ದೆ. ನಾನು ಹುಟ್ಟಿದ ಮನೆ, ನೆಲಕ್ಕುರುಳಿ ಬಿದ್ದಿದ್ದ ಫೋಟೋಗಳು ಅವು.

ತಕ್ಷಣವೇ ಊರಿಗೆ ಹೋಗಲು ಪ್ರಯತ್ನಿಸಿದೆನಾದರೂ, ರೈಲು- ರಸ್ತೆ ಸಂಪರ್ಕಗಳನ್ನೆಲ್ಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಐದಾರು ದಿನಗಳ ಬಳಿಕ ಈಗ ಊರಿನ ದಾರಿ ಹಿಡಿದಿದ್ದೇನೆ. ಆದರೆ, ಊರಿಗೆ ಹೋಗಲು ದಾರಿಗಳೇ ಕಾಣಿಸುತ್ತಿಲ್ಲ.

– ನಿರೂಪಣೆ: ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next