ವಿಜಯಪುರ: ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಪ್ರವಾಹ ತಗ್ಗದ ಕಾರಣ ಉಕ್ಕಿ ಹರಿಯುತ್ತಿರುವ ಡೋಣಿ ನದಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ.
ಡೋಣಿ ನದಿ ಪ್ರವಾಹದಿಂದಾಗಿ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ನದಿ ತೀರದ ಜನರು ಕಂಗಾಲಾಗಿದ್ದಾರೆ
ಡೋಣಿ ನದಿ ತುಂಬಿ ಹರಿಯುತ್ತಿರುವುದರಿಂದ ಬಬಲೇಶ್ವರ ತಾಲೂಕಿನ ತೊನಶ್ಯಾಳ ಬಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಗ್ರಾಮದ ಸಂಪರ್ಕ ಕಡಿತವಾಗಿದೆ. ನೆಲಮಟ್ಟದಲ್ಲಿರುವ ಸೇತುವೆ ಜಲಾವೃತವಾಗಿದ್ದು, 4-5 ಅಡಿಯಷ್ಟು ನೀರು ಸೇತುವೆ ಮೇಲೆ ಹರಿಯುತ್ತಿರುವ ಕಾರಣ ಜನರು ಜೀವ ಪಣಕ್ಕಿಟ್ಟು ಸಂಚಾರ ಮಾಡುವ ದುಸ್ಥಿತಿ ಎದುರಾಗಿದೆ. ಜನರು ತುರ್ತು ಕೆಲಸಕ್ಕಾಗಿ ನೀರಿನಲ್ಲೇ ಹೋಗಿ ಬರುತ್ತಿದ್ದಾರೆ. ಇನ್ನು ಅಪಾಯ ಲೆಕ್ಕಿಸದೇ ಜಲಾವೃತ ಸೇತುವೆ ಮೇಲೆ ಸಾರಿಗೆ ಸಂಸ್ಥೆ ಬಸ್ ಚಲಾಯಿಸಿ ಚಾಲಕನೊಬ್ಬ ಆತಂಕ ಸೃಷ್ಡಿಸಿರುವ ಘಟನೆಯೂ ಜರುಗಿದೆ.
ಡೋಣಿ ಪ್ರವಾಹದಲ್ಲಿ ಸೇತುವೆ ಮುಳುಗಡೆಯಾಗಿ ತುಂಬಿ ಹರಿಯುತ್ತಿದ್ದರೂ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಜಲಾವೃತ ಸೇತುವೆ ಮೇಲೆ ಹತ್ತಾರು ಪ್ರಯಾಣಿಕರಿದ್ದ ಬಸ್ ಚಲಾಯಿಸಿದ್ದಾನೆ. ಜಲಾವೃತವಾದ ಸೇತುವೆ ಮೇಲೆ ಚಾಲಕ ಬಸ್ ಚಲಾಯಿಸಿದ್ದಾನೆ. ಈ ವೇಳೆ ಪ್ರವಾಹದ ಸೆಳೆತಕ್ಕೆ ಬಸ್ ಕೊಚ್ಚಿಕೊಂಡು ಮಗುಚಿ ಬೀಳುವ ಅಪಾಯ ಎದುರಾಗಿದ್ದಾಗ, ಸೇತುವೆ ಬಳಿ ನಿಂತಿದ್ದ ಜನರು ಚಾಲಕನಿಗೆ ಕೈ ಮಾಡಿ ಅಪಾಯದ ಪರಿಸ್ಥಿಯನ್ನು ಮನವರಿಕೆ ಮಾಡಿದ್ದಾರೆ. ತನ್ನ ನಿರ್ಲಕ್ಷ್ಯದಿಂದ ಎಚ್ಚೆತ್ತ ಚಾಲಕ ಕೋಡಲೇ ಸೇತುವೆ ಗಡಿ ಬಿಟ್ಟು ವಾಲಿದ್ದ ಬಸ್ ಸರಿದಾರಿಗೆ ಚಲಾಯಿಸಿದ್ದಾನೆ. ಇದರಿಂದ ಭಯಗೊಂಡಿದ್ದ ಬಸ್ ಪ್ರಯಣಿಕರು ಚೀರಾಟ ಆರಂಭಿಸಿದ್ದಾರೆ.
ಇದನ್ನೂ ಓದಿ:ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ : ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸಾವು
ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಬಸ್ ಚಾಲಕನ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯರು ಯಾವೊಂದು ವಾಹನ ಸೇತುವೆಗೆ ಇಳಿಯಲು ಬಿಡುತ್ತಿಲ್ಲ. ಹೀಗಾಗಿ ಸೇತುವೆ ಮೇಲೆ ಎರಡು ಬದಿಯಲ್ಲಿ ವಾಹನ ಸಾಲುಗಟ್ಟಿವೆ. ದೇವರಹಿಪ್ಪರಗಿ, ಬಸವನಬಾಗೇವಾಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ-41 ಸಂಚಾರ ಸಂಪೂರ್ಣ ಬಂದ್ ಆಗಿದೆ.