Advertisement

ಪ್ರವಾಹ: ನೆರವಾಗದಿದ್ದರೆ ಜೈಲು; ಬಿಎಂಸಿ

11:44 AM Jun 14, 2019 | Team Udayavani |

ಮುಂಬಯಿ: ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಈ ಬಾರಿಯ ಮಳೆಗಾಲದ ಅವಧಿಗಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ಧಪಡಿಸಿರುವ ತನ್ನ ಸ್ಥಳಾಂತರಣ ಯೋಜನೆಯಲ್ಲಿ ಅದು ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತ ನಾಗರಿಕರಿಗೆ ನೆರವಾಗದಿರುವ ಸಾರಿಗೆ ಮತ್ತು ಆಹಾರ ಸೇವೆಗಳಂತಹ ಖಾಸಗಿ ಸಂಸ್ಥೆಗಳನ್ನು ವಿಪತ್ತು ನಿರ್ವಹಣ (ಡಿಎಂ) ಕಾಯಿದೆಯಡಿ ಶಿಕ್ಷಿಸಲು ನಿಬಂಧನೆ ಮಾಡಿದೆ.

Advertisement

ಮುಂಬಯಿಯಲ್ಲಿರುವ ಈ ಪ್ರಾಧಿಕಾರದ ಜವಾಬ್ದಾರಿಯನ್ನು ಹೆಚ್ಚುವರಿ ಮನಪಾ ಆಯುಕ್ತರಿಗೆ ವಹಿಸಲಾಗಿದೆ. ಪ್ರಾಧಿಕಾರವು ನಿಯಮ ಉಲ್ಲಂಘಿಸಿದ ಖಾಸಗಿ ಮಳಿಗೆಗಳಿಗೆ ಡಿಎಂ ಕಾಯಿದೆಯಡಿ ನೋಟಿಸ್‌ ಹೊರಡಿಸುವ ಸಮಯದಲ್ಲಿ ದಂಡ ಮೊತ್ತವನ್ನು ನಿರ್ಣಯಿಸಲಿದೆ ಎಂದು ಆಂಗ್ಲ ಸುದ್ದಿ ಪತ್ರಿಕೆ ದಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಸ್ಥಳಾಂತರಣ ಯೋಜನೆಯ ಭಾಗವಾಗಿ ಬಿಎಂಸಿಯು ಸಂಬಂಧಪಟ್ಟ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸಂಭಾವ್ಯ ನೀರು ಜಮಾವಣೆಯ ಬಗ್ಗೆ ಕನಿಷ್ಠ ಎರಡು ಗಂಟೆಗಳಿಗೆ ಮೊದಲೇ ಎಚ್ಚರಿಕೆಯನ್ನು ನೀಡಲಿದೆ. ಸ್ಥಳೀಯ ಕಾರ್ಪೊರೇಟರ್‌ಗಳು ಮತ್ತು ಇತರ ಅಧಿಕಾರಿಗಳು ಪ್ರವಾಹ ಪ್ರಾರಂಭವಾಗುವ ಮೊದಲು ಸಂಬಂಧಪಟ್ಟ ಪ್ರದೇಶಗಳ ನಿವಾಸಿಗರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿ ಸ್ಥಳವನ್ನು ಖಾಲಿ ಮಾಡಲು ಸೂಚಿಸಲಿದ್ದಾರೆ. ಅವರು ಸಮೀಪದ ಮನಪಾ ಆಶ್ರಯ ತಾಣಗಳು ಮತ್ತು ಸ್ಥಳಾಂತರಿಸುವಿಕೆಯ ಪಿಕ್‌-ಅಪ್‌ ಪಾಯಿಂಟ್‌ಗಳ ಬಗ್ಗೆ ನಾಗರಿಕರಿಗೆ ವಿವರಗಳನ್ನು ನೀಡಲಿದ್ದಾರೆ ಮತ್ತು ನಿವಾಸಿಗರಿಗೆ ಅವರ ಪ್ರಮುಖ ದಾಖಲೆಗಳನ್ನು ಸಾಗಿಸಲು ತಿಳಿಸಲಿದ್ದಾರೆ ಎಂದು ಬಿಎಂಸಿ ಅಧಿಕಾರಿ ಹೇಳಿದ್ದಾರೆ.

ಮಳೆಗಾಲದ ಸಂದರ್ಭ ಯಾವುದೇ ಪ್ರವಾಹ- ಪೀಡಿತ ಸ್ಥಳಗಳಲ್ಲಿ ನಾವು ನಮ್ಮ ಸ್ಥಳಾಂತರಣ ಯೋಜನೆಯನ್ನು ಜಾರಿಗೊಳಿಸುವ ಮೊದಲು ನಾವು ಅಲ್ಲಿ ಖಾಸಗಿ ಸಂಸ್ಥೆಗಳು ಅಥವಾ ಮಳಿಗೆಗಳಿಗೆ ಅವರ ಕರ್ತವ್ಯದ ಬಗ್ಗೆ ಎಚ್ಚರಗೊಳಿಸಲಿದ್ದೇವೆ. ಒಂದೊಮ್ಮೆ ನಿರಾಕರಿಸಿದರೆ, ನಾವು ಅವುಗಳ ಮೇಲೆ ಡಿಎಂ ಕಾಯಿದೆಯನ್ನು ಹೇರಲಿದ್ದೇವೆ ಎಂದು ಬಿಎಂಸಿಯ ಡಿಎಂ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಥಳಾಂತರಣ ಯೋಜನೆಯು ದಹಿಸರ್‌, ಮೀಠಿ, ಓಶಿವಾರಾ ಮತ್ತು ಪೊಯಿಸರ್‌ ಈ ನಾಲ್ಕು ನದಿಗಳ ತಟದಲ್ಲಿ ವಾಸಿಸುವ ನಿವಾಸಿಗಳಿಗಾಗಿ ಬಿಎಂಸಿಯ ವಿಪತ್ತು ನಿರ್ವಹಣೆ ಇಲಾಖೆಯು ಪ್ರಾರಂಭಿಸಿರುವ ವಿಪತ್ತು ಪ್ರತಿಕ್ರಿಯೆ ಮತ್ತು ಸ್ಥಳಾಂತರಣ ಯೋಜನೆಯನ್ನು ಆಧರಿಸಿದೆ. 10 ಪ್ರವಾಹ ಪೀಡಿತ ಸ್ಥಳಗಳಿಗೆ ಈ ಯೋಜನೆಯನ್ನು ಸಿದ್ಧಪಡಿಸುವ ಕೆಲಸವು ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ ಆರಂಭವಾಗಿದೆ.

Advertisement

ಶಿಕ್ಷೆಯ ವಿವರ
ಸ್ಥಳಾಂತರಣ ಯೋಜನೆಯು ಜಾರಿಗೆ ಬಂದಾಗ ಸಹಾಯಕ್ಕೆ ನಿರಾಕರಿಸಿದ ವ್ಯಕ್ತಿಗೆ ಡಿಎಂ ಕಾಯಿದೆಯಡಿಯಲ್ಲಿ ಒಂದು ವರ್ಷದ ವರೆಗೆ ಜೈಲು ಅಥವಾ ಸಂಬಂಧಪಟ್ಟ ಸಂಸ್ಥೆಗೆ ದಂಡನೀಯ ಶಿಕ್ಷೆಯಾಗಲಿದೆ. ಒಂದೊಮ್ಮೆ ಅವರ ನಿರಾಕಣೆಯು (ಸಂತ್ರಸ್ತರ ನೆರವಿಗೆ) ಜೀವ ಹಾನಿಗೆ ಕಾರಣವಾಗಿದ್ದಲ್ಲಿ, ಸಂಬಂಧಪಟ್ಟ ಖಾಸಗಿ ಸಂಸ್ಥೆಯ ವ್ಯಕ್ತಿಗಳಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ದಂಡ ಮೊತ್ತ ಇನ್ನೂ ನಿಗದಿಯಾಗಿಲ್ಲ, ಆದರೆ ಬಿಎಂಸಿಯು ವಿಪತ್ತು ನಿರ್ವಹಣ ಕಾಯಿದೆಯ ಅಡಿಯಲ್ಲಿ ರೂಪುಗೊಳಿಸಿರುವ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರವು ಅದನ್ನು ನಿರ್ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next