Advertisement

ನೆರೆ ಸಂಕಷ್ಟ; ಸದ್ದುಗದ್ದಲವಿಲ್ಲದೆ ಸಂಘ ಸೇವೆ

09:21 AM Aug 19, 2019 | Suhan S |

ಹುಬ್ಬಳ್ಳಿ: ದೇಶದ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪದಂತಹ ಅವಘಡಗಳು ನಡೆದರೆ, ಸರಕಾರದ ಯಂತ್ರಾಂಗ ತಲುಪುವ ಮೊದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌)ದವರು ರಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿರುತ್ತಾರೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆಯ ಪ್ರವಾಹ ಸಂಕಷ್ಟ ಸ್ಥಿತಿಯಲ್ಲೂ ಸಾವಿರಾರು ಸಂಘ ಸೇವಕರು ಸದ್ದುಗದ್ದಲವಿಲ್ಲದೆ ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Advertisement

ಪ್ರವಾಹ ಪೀಡಿತ ಪ್ರದೇಶದ ಪ್ರತಿ ಹಳ್ಳಿ, ಪಟ್ಟಣ-ನಗರಗಳಲ್ಲೂ ಆರೆಸ್ಸೆಸ್‌ ಕಾರ್ಯಕರ್ತರು ರಕ್ಷಣೆ, ಆಹಾರ, ನೀರು, ಪರಿಹಾರ ಸಾಮಗ್ರಿ, ವೈದ್ಯಕೀಯ ಸೇವೆ, ಪಶು ಆಹಾರ ಅಷ್ಟೇ ಅಲ್ಲದೆ ಸಂಕಷ್ಟಕ್ಕೆ ಸಿಲುಕಿದ ವನ್ಯಜೀವಿಗಳಿಗೂ ಆಹಾರ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಣದ ಹಂಗು ತೊರೆದು ಅನೇಕ ಅಪಾಯಕಾರಿ ಸ್ಥಳಗಳಿಗೆ ತಲುಪುವ, ರಕ್ಷಣೆ, ಪರಿಹಾರ ಕಾರ್ಯ ಮಾಡಿದ್ದಾರೆ.

ಭಾರೀ ಮಳೆಯಿಂದ ಬೆಳಗಾವಿ ನಗರ ಬಹುತೇಕ ಜಲಾವೃತಗೊಂಡಾಗ, ಎದೆಮಟ್ಟದ ನೀರನ್ನು ಲೆಕ್ಕಿಸದೆ ಜಲಾವೃತಗೊಂಡ ಮನೆ, ಮನೆಗಳಿಗೆ ತೆರಳಿ ಆಹಾರ ಪೊಟ್ಟಣ-ಕುಡಿಯುವ ನೀರಿನ ಬಾಟಲ್ಗಳನ್ನು ನೀಡುವ ಕಾರ್ಯ ಮಾಡಿದ್ದಾರೆ.

ಹರಿದು ಬಂದ ಪರಿಹಾರ ಸಾಮಗ್ರಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಯಾದಗಿರಿ, ರಾಯಚೂರು, ಹಾವೇರಿ, ಗದಗ ಹೀಗೆ ವಿವಿಧ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮ-ನಗರಗಳಿಗೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹುಬ್ಬಳ್ಳಿಯ ಆರೆಸ್ಸೆಸ್‌ ಕಚೇರಿ ಕೇಶವಕುಂಜಕ್ಕೆ ಬಂದ ವಿವಿಧ ಪರಿಹಾರ ಸಾಮಗ್ರಿ ಒಟ್ಟುಗೂಡಿಸಿ, ಅವುಗಳನ್ನು ವಿಂಗಡಿಸಿ, ಎಲ್ಲಿಗೆ ಎಷ್ಟು ಕಳುಹಿಸಬೇಕು ಎಂಬುದನ್ನು ಸಿದ್ಧಪಡಿಸಿ ಕಳುಹಿಸಲಾಗಿತ್ತು. ಅನೇಕ ಸ್ವಯಂ ಸೇವಕರಲ್ಲದೆ, ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ವಿವಿಧ ಕಡೆಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹಿಸುವ, ಕೇಶವಕುಂಜದಲ್ಲಿ ಅವುಗಳನ್ನು ವಿಂಗಡಿಸಿ, ಪ್ಯಾಕ್‌ ಮಾಡುವ ಕಾರ್ಯದಲ್ಲಿ ಸಾಥ್‌ ನೀಡಿದ್ದರು.

Advertisement

ಅನೇಕ ವೈದ್ಯರು ಸ್ವಯಂಪ್ರೇರಿತರಾಗಿ ಸೇವೆಗೆ ಮುಂದಾಗಿದ್ದರು. ಅನೇಕ ದಾನಿಗಳು, ಕಂಪೆನಿಗಳು ಸಾಕಷ್ಟು ಪ್ರಮಾಣದ ಔಷಧಿ ನೀಡಿದ್ದು, ಕಳೆದ 10 ದಿನಗಳಿಂದ ವೈದ್ಯರ ತಂಡ ಪ್ರವಾಹ ಪೀಡಿತ ಹಳ್ಳಿ, ಪಟ್ಟಣ-ನಗರಗಳಿಗೆ ತೆರಳಿ ವೈದ್ಯಕೀಯ ಸೇವೆ ಹಾಗೂ ಉಚಿತವಾಗಿ ಔಷಧಿ ನೀಡಿಕೆ ಕಾರ್ಯ ಕೈಗೊಂಡಿದ್ದಾರೆ.

25 ಮೆಟ್ರಿಕ್‌ ಟನ್‌ ಪಶು ಆಹಾರ: ಜಾನುವಾರುಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ದಾನಿಗಳನ್ನು ಸಂಪರ್ಕಿಸಲಾಗಿದ್ದು, ಆರೆಸ್ಸೆಸ್‌ ಈಗಾಗಲೇ 25 ಮೆಟ್ರಿಕ್‌ ಟನ್‌ ಪಶು ಆಹಾರ ರವಾನಿಸಿದೆ. ಪಶು ಆಹಾರ ತಯಾರಕ ಕಂಪೆನಿಯೊಂದು ಉತ್ಪಾದನಾ ವೆಚ್ಚದ ದರದಲ್ಲೇ ಇದನ್ನು ನೀಡಿದ್ದಲ್ಲದೆ ಅದನ್ನು ಕಳುಹಿಸಿಕೊಟ್ಟಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ 20 ಮೆಟ್ರಿಕ್‌ ಟನ್‌ ಪಶುಆಹಾರ ಕಳುಹಿಸಲಾಗಿದ್ದು, 5 ಮೆಟ್ರಿಕ್‌ ಟನ್‌ ಪಶುಆಹಾರವನ್ನು ಚಿಕ್ಕೋಡಿ ತಾಲೂಕಿಗೆ ಕಳುಹಿಸಲಾಗಿದೆ. ಇದಲ್ಲದೆ, ಇತರೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಲಭ್ಯವಿದ್ದ ಪಶು ಆಹಾರ, ಮೇವು ಒದಗಿಸುವ ಕಾರ್ಯದಲ್ಲಿ ಸಂಘ ತೊಡಗಿದೆ. ಇನ್ನಷ್ಟು ಪಶು ಆಹಾರ ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಪುನರ್ವಸತಿ ಕಲ್ಪಿಸಲು ಯತ್ನ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿರುವ ಆರೆಸ್ಸೆಸ್‌ ಸ್ವಯಂ ಸೇವಕರು ಇದೀಗ ಮೂರನೇ ಹಂತವಾಗಿ ಪುನರ್ವಸತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರತಿ ಗ್ರಾಮಕ್ಕೂ ತೆರಳಿ ಅಲ್ಲಿ ಆಗಿರುವ ನಷ್ಟ, ಇರುವ ಬೇಡಿಕೆ, ಬದುಕು ಕಟ್ಟಿಕೊಳ್ಳಲು ಬೇಕಾಗುವ ಅವಶ್ಯಕತೆಗಳ ಕುರಿತು ಖುದ್ದು ಸಮೀಕ್ಷೆಯಲ್ಲಿ ತೊಡಗಿದ್ದಾರೆ.
ಮಂಗಗಳಿಗೂ ಆಹಾರ:

ಆರೆಸ್ಸೆಸ್‌ ಸ್ವಯಂಸೇವಕರು ಪ್ರವಾಹ ಪೀಡಿತ ಸ್ಥಳಗಳಲ್ಲಿ ಜನ, ಜಾನುವಾರುಗಳನ್ನಷ್ಟೇ ರಕ್ಷಿಸಿಲ್ಲ. ಅನೇಕ ವನ್ಯಜೀವಿಗಳ ರಕ್ಷಣೆಗೂ ನೆರವಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಜಂಬಗಿಯಲ್ಲಿ ಒಂದಿಷ್ಟು ಮರಗಳ ಮೇಲೆ ಮಂಗಗಳು ಇದ್ದು, ಪ್ರವಾಹದಿಂದ ಹೊರಬರಲಾಗದೆ ಸಂಕಷ್ಟ ಎದುರಿಸುತ್ತಿದ್ದವು. ಇದನ್ನು ಗಮನಿಸಿದ ಸ್ವಯಂಸೇವಕರು ತೆಪ್ಪದಲ್ಲಿ ತೆರಳಿ ತೆರೆದ ಬುಟ್ಟಿಗಳಲ್ಲಿ ಆಹಾರ ಇರಿಸಿ ಮಂಗಗಳನ್ನು ಬದುಕಿಸುವ ಮಾನವೀಯತೆ ಮೆರೆದಿದ್ದಾರೆ. ಜನರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗ್ರಾಮವೊಂದರಲ್ಲಿ ಪೊಲೀಸರಿಂದ ಲಾಠಿ ಏಟನ್ನು ಸಹ ಸ್ವಯಂಸೇವಕರು ತಿಂದಿದ್ದಾರೆ. ಆದರೂ ಅವರ ಸೇವಾ ಕಾರ್ಯದ ಉತ್ಸಾಹಕ್ಕೆ ಕಿಂಚಿತ್ತು ಕುಂದು ಬಂದಿಲ್ಲ.

 

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next