ಬಾಗಲಕೋಟೆ: ಜಿಲ್ಲೆಯ ಮೂರು ನದಿ ಪಾತ್ರದ ಜನರೇ ಈ ಬಾರಿ ಯಾರೂ ಹುಂಬತನ ಮಾಡಬೇಡಿ. ಹುಸಾರಾಗಿ ಇರಿ. ಯಾವುದೇ ಕ್ಷಣದಲ್ಲಿ ಪ್ರವಾಹ ಬರುವ ಮುನ್ಸೂಚನೆ ದೊರೆತರೂ, ಕೂಡಲೇ ಸುರಕ್ಷಿತ ಸ್ಥಳಕ್ಕೆ ಹೋಗಿ…!
ಕೆಲವರ ಹುಂಬತನ, ಇನ್ನೂ ಕೆಲವರ ನಿಷ್ಕಾಳಜಿಯಿಂದ ಕಳೆದ ತಿಂಗಳು ಬಂದಿದ್ದ ಪ್ರವಾಹದ ವೇಳೆ ಪ್ರಾಣಾಪಾಯದಲ್ಲಿ ಸಿಲುಕಿದ್ದರು. ಇನ್ನೂ ಕೆಲವರು ತಮ್ಮ ಜಾನುವಾರು ತರಲು ಹೋಗಿ, ಅಪಾಯದಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದರು.
ಇಡೀ ಜಿಲ್ಲಾಡಳಿತದ ಸಂಘಟಿತ ಪ್ರಯತ್ನದ ಜತೆಗೆ ಜನರ ಸುರಕ್ಷತೆಗಾಗಿ ಕೈಗೊಂಡ ತುರ್ತು ರಕ್ಷಣಾ ಕಾರ್ಯದಿಂದ ಹಲವರ ಪ್ರಾಣ ಉಳಿದವು. ಒಂದು ವೇಳೆ ಜಿಲ್ಲಾಡಳಿತವೂ ನಿಷ್ಕಾಳಜಿ ಮಾಡಿದ್ದರೆ, 105 ವರ್ಷಗಳ ಬಳಿಕ ಬಂದ ಭಾರಿ ಪ್ರವಾಹಕ್ಕೆ ಹಲವು ಸಾವು-ನೋವು ಸಂಭವಿಸುತ್ತಿದ್ದವು. ಅದೃಷ್ಟವಶಾತ್ ಜಿಲ್ಲೆಯ ಜನರ, ಮೂರು ನದಿಗಳ ಪ್ರವಾಹಕ್ಕೆ ಬದುಕು ಬರಡಾಯಿತೇ ಹೊರತು, ಸಾವು-ನೋವು ಸಂಭವಿಸಲಿಲ್ಲ. ಪ್ರವಾಹದ ವೇಳೆ ಮೂವರು ಮೃತಪಟ್ಟಿದ್ದರಾದರೂ, ಅವರು ಪ್ರವಾಹದ ನೀರಿನಿಂದ ಮೃತಪಟ್ಟವರಲ್ಲ. ಅನಾರೋಗ್ಯ, ಹಾವು ಕಚ್ಚಿ ಹಾಗೂ ಓರ್ವ ವ್ಯಕ್ತಿ ಮನೆಗೆ ಹೊಕ್ಕ ನೀರಿನಲ್ಲೇ ಮೃತಪಟ್ಟಿದ್ದ.
ಮತ್ತೆ ಆತಂಕ ಶುರು: ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಆತಂಕ ಶುರುವಾಗಿದೆ. ಮಲಪ್ರಭಾ ನದಿಗೆ ಗರಿಷ್ಠ 25 ಸಾವಿರ ಮೇಲ್ಪಟ್ಟು, ಘಟಪ್ರಭಾ ನದಿಗೆ ಗರಿಷ್ಠ 65 ಸಾವಿರ ಹಾಗೂ ಕೃಷ್ಣಾ ನದಿಗೆ ಗರಿಷ್ಠ 2.50 ಲಕ್ಷ ಕ್ಯೂಸೆಕ್ ನೀರು ಏಕಕಾಲಕ್ಕೆ ಹರಿದು ಬಂದರೆ ಪ್ರವಾಹ ಉಂಟಾಗುತ್ತದೆ. ಅದಕ್ಕೂ ಕಡಿಮೆ ನೀರು ಹರಿದು ಬಂದರೆ, ಹಲವು ಹಳ್ಳಿಗಳ ಸುತ್ತ ನೀರು ಆವರಿಸಲಿದೆ ಹೊರತು, ಗ್ರಾಮದೊಳಗೆ ನೀರು ನುಗ್ಗಿ ಸಮಸ್ಯೆ ಉದ್ಭವಿಸುವುದಿಲ್ಲ. ಒಂದು ವೇಳೆ, ಕಳೆದ ತಿಂಗಳು ಬಂದಂತೆ, ಮೂರು ನದಿಗಳಲ್ಲಿ ಅತಿಹೆಚ್ಚು (ಗರಿಷ್ಠ ನೀರಿನ ಹರಿವು ಮೀರಿ) ನೀರು ಹರಿದು ಬಂದರೆ ಪುನಃ ಅದೇ 195 ಹಳ್ಳಿಗಳ ಜನರು ಸಮಸ್ಯೆಗೆ ಸಿಲುಕುತ್ತಾರೆ.
ಯಾರೂ ಹುಂಬತನ ಮಾಡ್ಬೇಡಿ: ಕಳೆದ ತಿಂಗಳು ಪ್ರವಾಹ ಬಂದಾಗ, ಯಾರೂ ಜಾಗೃತರಾಗಿರಲಿಲ್ಲ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಗಳಿಂದ ನದಿಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದ ಮುನ್ನೆಚ್ಚರಿಕೆಯಿಂದ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಜನರು, ತಮ್ಮ ಮನೆ-ಜಾನುವಾರು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಬಂದಿರಲಿಲ್ಲ. ನಮ್ಮ ಹೊಲ-ಮನೆಯ ಬುಡಕ್ಕೆ ನಮ್ಮ ಜೀವನದಲ್ಲೇ ನೀರು ಬಂದಿಲ್ಲ. ಮೇಲಾಗಿ ನಮ್ಮಲ್ಲಿ ಬರ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಪ್ರವಾಹ ಬಂದರೂ, ನಮ್ಮನೆಗೆ ನೀರು ಬರಲ್ಲ ಎಂದೇ ಭಾವಿಸಿದ್ದರು. ಹೀಗಾಗಿ ಬುಡಕ್ಕೆ ನೀರು ಬಂದರೂ, ಮನೆಯ ಮೇಲೆ ನೀರು ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಘಟಪ್ರಭಾ ಮತ್ತು ಮಲಪ್ರಭಾ ಹಾಗೂ ಕೃಷ್ಣಾ ನದಿಗೆ ಆ.2ರಂದು ಭಾರಿ ಪ್ರಮಾಣದ ನೀರು ಬಂದಾಗ, ಜನರು ಸಂಕಷ್ಟಕ್ಕೆ ಒಳಗಾದರು. ಜನರನ್ನು ಸುರಕ್ಷಿತವಾಗಿ ಹೊರಗೆ ತರುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಯಾವುದೇ ಸಾವು-ನೋವು ಸಂಭವಿಸಿದಂತೆ ಎಚ್ಚರಿಕೆ ವಹಿಸಿ, ಜಿಲ್ಲಾಡಳಿತ ಪರಿಹಾರ ಕಾರ್ಯ ಕೈಗೊಂಡಿತ್ತು. ಜಮಖಂಡಿ ತಾಲೂಕಿನ ಹಳ್ಳಿಯೊಂದರ ಜನರು, ಹೆಲಿಕಾಪ್ಟರ್ ತಂದರೆ ನಾವು ಹೊರಗೆ ಬರುತ್ತೇವೆ. ಇಲ್ಲದಿದ್ದರೆ ಇಲ್ಲೇ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಎದೆಮಟ ನೀರು ಬಂದಾಗ, ವಿಧಿಯಿಲ್ಲದೇ ಬೋಟ್‌ನಲ್ಲಿ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದರು. ಇಂತಹ ಕುಚೇಷ್ಟೆಯ ಹಠ ಪುನರಾವರ್ತನೆಯಾಗದಿರಲಿ ಎಂಬುದು ಜಿಲ್ಲಾಡಳಿತದ ಆಶಯ.
•ಶ್ರೀಶೈಲ ಕೆ. ಬಿರಾದಾರ