ಬಾಗಲಕೋಟೆ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಹೌದು, ಕೃಷ್ಣಾ ಹಾಗೂ ಘಟಪ್ರಭಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಎರಡೂ ನದಿಗಳ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿ ಪಾತ್ರದಲ್ಲಿ ಸದ್ಯಕ್ಕೆ ಪ್ರವಾಹ ಉಂಟಾಗಿಲ್ಲವಾದರೂ, ನದಿ ಪಾತ್ರದ ಜನರು ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾರಿ ಮಳೆ: ಜಿಲ್ಲೆಯಲ್ಲೂ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಜತೆಗೆ ಮಹಾರಾಷ್ಟ್ರ ಮತ್ತು ಕೃಷ್ಣಾ, ಘಟಪ್ರಭಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಅಪಾರ ಮಳೆ ಸುರಿಯುತ್ತಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಬೆಳಗ್ಗೆ 72 ಸಾವಿರ ಕ್ಯೂಸೆಕ್‌ನಷ್ಟು ಕೃಷ್ಣೆಗೆ ಹರಿದು ಬರುತ್ತಿದ್ದು, ನೀರು ಸಂಜೆಯ ಹೊತ್ತಿಗೆ 1.42 ಲಕ್ಷ ಕ್ಯೂಸೆಕ್‌ಗೆ ಹೆಚ್ಚಳವಾಗಿತ್ತು. ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಒಟ್ಟು ಏಳು ಜಲಾಶಯಗಳಿದ್ದು, ಬಹುತೇಕ ಜಲಾಶಯಗಳು ಶೇ.40ಕ್ಕಿಂತ ಹೆಚ್ಚು ಭರ್ತಿಯಾಗಿವೆ. ಅಲ್ಲದೇ ಕೊಯ್ನಾ ಭಾಗದಲ್ಲಿ 142 ಎಂಎಂ, ನವಜಾ-122, ಮಹಾಬಲೇಶ್ವರ ಭಾಗದಲ್ಲಿ 126 ಎಂಎಂ ಮಳೆ ಸುರಿಯುತ್ತಿದೆ.
ಕೊಯ್ನಾ, ಧೂಮ್, ಕನ್ಹೆàರ, ತರಳಿ, ವಾರಣಾ, ರಾಧಾನಗರಿ, ಧೂದಗಂಗಾ, ರಾಜಾಪುರ ಸೇರಿದಂತೆ ಒಟ್ಟು ಏಳು ಜಲಾಶಯಗಳಿಂದ ಕೃಷ್ಣಾ ನದಿಗೆ 72,625 ಕ್ಯೂಸೆಕ್ ನೀರು ಬೆಳಗ್ಗೆ ಹರಿದು ಬರುತ್ತಿತ್ತು. ಅಲ್ಲದೇ ಬೆಳಗಾವಿ ಭಾಗದಲ್ಲೂ ಮಳೆ ಸುರಿಯುತ್ತಿದ್ದು, ಘಟಪ್ರಭಾ ನದಿಗೆ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಕೃಷ್ಣೆಯನ್ನು ಸೇರುತ್ತದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 72 ಸಾವಿರ, ಬೆಳಗಾವಿಯಿಂದ ಘಟಪ್ರಭಾ ನದಿಗೆ 23 ಸಾವಿರ ನೀರು ಹರಿದು ಬರುತ್ತಿದೆ.
ನದಿ ಪಾತ್ರದಲ್ಲಿ ಕಟ್ಟೆಚ್ಚರ: ಪ್ರತಿ ವರ್ಷ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ರಬಕವಿ-ಬನಹಟ್ಟಿ, ಜಮಖಂಡಿ, ಬೀಳಗಿ, ಬಾಗಲಕೋಟೆ, ಹುನಗುಂದ ತಾಲೂಕುಗಳು, ಘಟಪ್ರಭಾ ನದಿ ಪಾತ್ರದ ಮಹಾಲಿಂಗಪುರ ಭಾಗದ ಹಲವು ಹಳ್ಳಿಗಳು, ಮುಧೋಳ, ಬಾಗಲಕೋಟೆ, ಬೀಳಗಿ ತಾಲೂಕಿನ ಗ್ರಾಮಗಳು, ಮಲಪ್ರಭಾ ನದಿಯಿಂದ ಬಾದಾಮಿ, ಗುಳೇದಗುಡ್ಡ, ಹುನಗುಂದ ತಾಲೂಕಿನ ಹಳ್ಳಿಗಳು ಪ್ರವಾಹಕ್ಕೆ ಒಳಗಾಗುತ್ತವೆ. ಸದ್ಯಕ್ಕೆ ಮಲಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿಲ್ಲ. ಆದರೆ, ಘಟಪ್ರಭಾ ನದಿಗೆ ಸದ್ಯ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 60 ಸಾವಿರ ಕ್ಯೂಸೆಕ್ ದಾಟಿದರೆ, ಸುಮಾರು 22ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.
ಇನ್ನು ಕೃಷ್ಣಾ ನದಿಗೆ ಸದ್ಯ ಮಹಾರಾಷ್ಟ್ರದಿಂದ 72 ಸಾವಿರ, ಬೆಳಗಾವಿ ಮತ್ತು ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವೂ ಸೇರಿ 1.42 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದು 2.21 ಲಕ್ಷ ಕ್ಯೂಸೆಕ್ ದಾಟಿದರೆ, ಜಮಖಂಡಿ ತಾಲೂಕಿನ 13 (ಮುಳುಗಡೆ ಹಳ್ಳಿಗಳು) ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಮೂರು ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಪ್ರವಾಹ ನಿಯಂತ್ರಣಕ್ಕಾಗಿ ಎಲ್ಲ ತಾಲೂಕಿನ ತಹಶೀಲ್ದಾರ್‌ರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಮಳೆ ಹೆಚ್ಚಾಗಿ, ಪ್ರವಾಹ ಪರಿಸ್ಥಿತಿ ಉಂಟಾದರೆ ಎದುರಿಸಲು ಸನ್ನದ್ಧರಾಗಲು ತಿಳಿಸಲಾಗಿದೆ. ಅಲ್ಲದೇ ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ
-ಶ್ರೀಶೈಲ ಕೆ. ಬಿರಾದಾರ