Advertisement
ಕಾವೇರಿಯಲ್ಲಿ ಸಚಿವರು, ಅಧಿಕಾರಿಗಳ ಸಭೆ ನಡೆಸಿದ ಸಿಎಂ, ತತ್‌ಕ್ಷಣವೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಕೂಡಲೇ ಪರಿಹಾರವಾಗಿ ತಲಾ 25,000 ರೂ. ಬಿಡುಗಡೆಗೆ ಆದೇಶಿಸಿದರು. ರಾಜಕಾಲುವೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರಾಜಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.
ಹೊಸಕೆರೆಹಳ್ಳಿಯಲ್ಲಿ ಸಿಎಂ ಕಾರಿಗೆ ಸಂತ್ರಸ್ತ ನಿವಾಸಿಗಳು ಮುತ್ತಿಗೆ ಹಾಕಿದರು. ಪರಿಸ್ಥಿತಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳು ಹೊರಡಬೇಕೆನ್ನುವಷ್ಟರಲ್ಲಿ ಸ್ಥಳೀಯರು ಕಾರನ್ನು ಸುತ್ತುವರಿದು ನಿಂತರು. ಕಸಿವಿಸಿಕೊಂಡ ಯಡಿಯೂರಪ್ಪ ಅವರು ಕಾರಿನಿಂದಿಳಿದು ಮತ್ತೂಮ್ಮೆ ಕೆಲವು ಮನೆಯವರ ಸ್ಥಿತಿಯನ್ನು ಪರಿಶೀಲಿಸಿ ಸಂತೈಸಿದರು. ಸಚಿವ ಆರ್.ಅಶೋಕ್ ಅವರನ್ನೂ ಸ್ಥಳೀಯರು ತರಾಟೆಗೆತ್ತಿಕೊಂಡರು. ಯಡಿಯೂರಪ್ಪ ಅವರು ಶನಿವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಂಜೆ ಯೊಳಗೆ 25,000 ರೂ. ಪರಿಹಾರದ ಚೆಕ್ ವಿತರಿಸುವಂತೆ ಸೂಚಿಸಿದರು. ಜತೆಗೆ ಮತ್ತೆ ಮಳೆ ಮುಂದುವರಿದರೆ ಅವಾಂತರಗಳಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.