Advertisement

ಕಳೆದ ವರ್ಷದ ಪರಿಹಾರವೇ ಬಂದಿಲ್ಲ, ಮತ್ತೆ ಅತಿವೃಷ್ಟಿ ಹಾನಿ

06:47 PM Oct 19, 2020 | sudhir |

ಚಿಕ್ಕೋಡಿ: ಕಳೆದ ವರ್ಷದ ಭೀಕರ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ತಾಲೂಕಿನ ಬಹುತೇಕ ಕಡೆಗಳಲ್ಲಿ ಸಂತ್ರಸ್ತರು ಇನ್ನೂ ಗ್ರಾಮದ ಸಮುದಾಯ ಭವನ ಹಾಗೂ ದನದ ಕೊಟ್ಟಿಗೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಂತ್ರಸ್ತರ ಸಂಕಷ್ಟ ನೋಡದ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಕೃಷ್ಣಾ ನದಿ ತೀರದ ಸಂತ್ರಸ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

Advertisement

ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಮಳೆಯಿಂದ ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಚಿಕ್ಕೋಡಿ ಉಪವಿಭಾಗ ತತ್ತರಿಸಿ ಹೋಗಿತ್ತು. ಪ್ರವಾಹ ಬಂದ ಸಮಯದಲ್ಲಿ ಸರ್ಕಾರ ಅಲ್ಪಸ್ವಲ್ಪ ಸಹಾಯ ಮಾಡಿದ್ದನ್ನು ಬಿಟ್ಟರೆ ಮತ್ತೆ ಮರಳಿ ನೋಡಲೇ ಇಲ್ಲ ಎನ್ನುವ ಆರೋಪಗಳು ಗಂಭೀರವಾಗಿವೆ. ಕಳೆದ ವರ್ಷದ ಪ್ರವಾಹದಿಂದ
ಸುಧಾರಿಸಿಕೊಳ್ಳುತ್ತಿದ್ದ ಜನರ ಬದುಕು ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಮತ್ತೆ ಬೀಇಗೆ ಬಂದಿದೆ.

ಇದನ್ನೂ ಓದಿ :ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ಕಾಳಿ ಚರಣ್‌ ಮಹಾರಾಜ್

ಪ್ರವಾಹದಲ್ಲಿ ಸಂತ್ರಸ್ತರು ಕಳೆದುಕೊಂಡ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ, ರಾಜ್ಯ ಸರಕಾರ ಘೋಷಣೆ ಮಾಡಿರುವ ಐದು ಲಕ್ಷ ರೂ ನಂಬಿ ಹೊಸ ಮನೆ ಕಟ್ಟಿಕೊಳ್ಳಲು ಆರಂಭಿಸಿರುವ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ, ಹೊಸ ಮನೆ ಕಟ್ಟಿಕೊಳ್ಳುವ ಸಂತ್ರಸ್ತರಿಗೆ ಸರ್ಕಾರದ ಮಂಜೂರಾತಿ ದೊರೆಯದೇ ಇರುವುದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ, ಇಂಗಳಿ, ಅಂಕಲಿ, ಮಾಂಜರಿ, ಯಡೂರವಾಡಿ, ಚೆಂದೂರ, ಚೆಂದೂರ ಟೇಕ, ಯಕ್ಸಂಬಾ, ಸದಲಗಾ, ಮಲಿಕವಾಡ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಒಕ್ಕರಿಸಿಕೊಂಡ ಪ್ರವಾಹ ಇಡೀ ಗ್ರಾಮಗಳನ್ನೇ ಆವರಿಸಿಬಿಟ್ಟಿತ್ತು.

ತಾಲೂಕಿನಲ್ಲಿ ಸರ್ಕಾರ ಸರ್ವೇ ಮಾಡಿದ ಪ್ರಕಾರ ಒಟ್ಟು 4424 ಮನೆಗಳಿಗೆ ಪರಿಹಾರ ನೀಡಲು ಸರ್ಕಾರ ಸಮ್ಮತಿ ಸೂಚಿಸಿತ್ತು.
ಆದರೆ ತಾಲೂಕಿನಲ್ಲಿ ಇನ್ನೂ 1179 ಮನೆಗಳ ನಿರ್ಮಾಣವಾಗಬೇಕಿದೆ. ಎ ಕೆಟಗೆರಿಯಲ್ಲಿ 538 ಮನೆಗಳ ಪೈಕಿ 487 ಮನೆಗಳು ಪ್ರಗತಿಯಲ್ಲಿವೆ. ಬಿ ಕೆಟಗೆರಿಯಲ್ಲಿ 1227 ಮನೆಗಳ ಪೈಕಿ 796 ಮನೆಗಳು ಪ್ರಗತಿಯಲ್ಲಿವೆ. ಸಿ ಕೆಟಗೆರಿಯ 2709 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ವಸತಿ ಲಾಗಿನ್‌ ಬಂದ್‌: ಪ್ರವಾಹ ಬಂದು ಒಂದೂವರೆ ವರ್ಷ ಕಳೆದರೂ ಅರ್ಹ ಫಲಾನುಭವಿಗಳಿಗೆ ಮನೆ ಸಿಕ್ಕಿಲ್ಲ. ಸರ್ವೇ
ಮಾಡಿದ ಫಲಾನುಭವಿಗಳ ದಾಖಲಾತಿಗಳು ರಾಜ್ಯ ಸರ್ಕಾರದ ಅಂಗಳಕ್ಕೆ ಹೋಗದೇ ಸ್ಥಳೀಯ ಪಂಚಾಯತಿಯಲ್ಲಿ ಧೂಳು ತಿನ್ನುತ್ತಿವೆ. ಪ್ರವಾಹ ಬಂದ ಎರಡು ತಿಂಗಳಲ್ಲಿಯೇ ವಸತಿ ಲಾಗಿನ್‌ ಬಂದ್‌ ಆಗಿದೆ. ಹೀಗಾಗಿ ಬಹಳಷ್ಟು ಸಂತ್ರಸ್ತರಿಗೆ ಮನೆಗಳ ಪರಿಹಾರ ದೊರಕಿಲ್ಲ, ಪರಿಹಾರ ಕೊಡಿ ಎಂದು ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ಲಾಗಿನ್‌ ಬಂದ್‌ ಆಗಿದೆ. ಪುನಃ ಆರಂಭವಾದಾಗ ಮನೆಗಳಿಗೆ ಪರಿಹಾರ ಸಿಗುತ್ತದೆಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಅಳಲು
ವ್ಯಕ್ತಪಡಿಸುತ್ತಿದ್ದಾರೆ.

– ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next