ಧಾರವಾಡ: ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಜನರ ಬದುಕನ್ನು ಸಂಕಷ್ಟಕ್ಕೆ ಒಡ್ಡಿದ ಪ್ರವಾಹವು ಇದೀಗ ವಿಘ್ನವಿನಾಶಕ ಗಣೇಶನಿಗೂ ಬಿಸಿ ಮುಟ್ಟಿಸಿದೆ. ಮೂರ್ತಿ ತಯಾರಕರೇ ನೆರೆಹಾವಳಿಯಲ್ಲಿ ಸಿಲುಕಿದ್ದರಿಂದ ಧಾರವಾಡ ಸೇರಿದಂತೆ ಉಕ ಭಾಗದಲ್ಲಿ ಗಣೇಶ ಮೂರ್ತಿಗಳ ಕೊರತೆಯಾಗಿದೆ. ಅಷ್ಟೇ ಅಲ್ಲ, ಗಣೇಶ ವಿಗ್ರಹಗಳ ದರ ತೀವ್ರ ಹೆಚ್ಚಳವಾಗಿದೆ.
ಕೊಣ್ಣೂರು ಸುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೂರ್ತಿ ತಯಾರಿಕರಿದ್ದಾರೆ. ಈ ವರ್ಷ ಜೂನ್, ಜುಲೈನಲ್ಲಿಯೇ ಮೂರ್ತಿಗಳ ತಯಾರಿ ಜೋರಾಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಬಂದ ಪ್ರವಾಹಕ್ಕೆ ಮೂರ್ತಿಗಳು ಮತ್ತು ಮೂರ್ತಿ ನಿರ್ಮಿಸುವ ಮಣ್ಣು ಕೊಚ್ಚಿ ಹೋಗಿದ್ದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಗಣೇಶಮೂರ್ತಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಶೇ.25 ದರ ಏರಿಕೆ: ಗಣೇಶ ವಿಗ್ರಹಗಳ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ಏರಿಕೆಯಾಗಿದೆ. ಕಳೆದ ವರ್ಷ 400 ರೂ. ಇದ್ದ ಒಂದು ಅಡಿ ಪಡಿಯಚ್ಚಿನ ಗಣೇಶ ಮೂರ್ತಿಗೆ ಈ ವರ್ಷ 600 ರೂ. ನೀಡಬೇಕಿದೆ. 1000 ರೂ.ಗೆ ಸಿಕ್ಕುತ್ತಿದ್ದ 2-3 ಅಡಿ ಎತ್ತರದ ಗಣೇಶಮೂರ್ತಿ ಬೆಲೆ 4 ಸಾವಿರಕ್ಕೇರಿದೆ. ಇನ್ನು 10 ಸಾವಿರ ರೂ. ಇದ್ದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ 4 ಅಡಿ ಗಣೇಶ ಮೂರ್ತಿಗಳ ಬೆಲೆ ಈ ವರ್ಷ 18 ಸಾವಿರಕ್ಕೆ ಏರಿದೆ. ಅಷ್ಟೇಯಲ್ಲ, ಈ ವಿಗ್ರಹಗಳ ಪೈಕಿ ಶೇ.50ಕ್ಕಿಂತಲೂ ಹೆಚ್ಚು ಈಗಾಗಲೇ ಸಾರ್ವಜನಿಕರಿಂದ ಖರೀದಿಸಲ್ಪಟ್ಟಿವೆ. ಮೂರ್ತಿ ಕೊರತೆಯಿಂದಾಗಿ ಕಳೆದ ವರ್ಷ ಮಾರಾಟವಾಗದೇ ಉಳಿದ ಹಳೆಯ ಗಣೇಶ ಮೂರ್ತಿಗಳಿಗೆ ಮೂರ್ತಿಕಾರರು ಬಣ್ಣದ ಪಾಲಿಶ್ ಮಾಡಿ ಮಾರಾಟಕ್ಕೆ ಅಣಿಗೊಳಿಸಿದ್ದಾರೆ.
ಪಿಒಪಿ ನಿಷೇಧವೂ ಕಾರಣ: ನಿಷೇಧದ ಪರಿಣಾಮ ಪಿಒಪಿ ಗಣೇಶ ಸದ್ಯಕ್ಕೆ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಯಾವುದೇ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಬರೀ ಮಣ್ಣಿನ ಗಣೇಶ ಮೂರ್ತಿಗಳು ಮಾತ್ರ ಮಾರಾಟವಾಗುತ್ತಿದ್ದು, ಇದರ ಬೆಲೆ ಸಹಜವಾಗಿಯೇ ಪಿಒಪಿಗಿಂತಲೂ ಕೊಂಚ ಹೆಚ್ಚಾಗಿಯೇ ಇದೆ ಎನ್ನುತ್ತಿದ್ದಾರೆ ಮೂರ್ತಿ ತಯಾರಕರು.
Advertisement
ನೆರೆಯಿಂದ ಮನೆ, ಹೊಲದಲ್ಲಿನ ಬೆಳೆಗೆ ಹಾನಿಯಾಗಿ ಜನರು ಸಂಕಷ್ಟ ಅನುಭವಿಸಿದ್ದೇನೋ ಸತ್ಯ. ಆದರೆ ಜನರ ವಿಘ್ನಗಳನ್ನು ದೂರ ಮಾಡುವ ಗಣಪತಿಯ ಮಣ್ಣಿನ ಮೂರ್ತಿಗಳ ತೀವ್ರ ಕೊರತೆ ಎದುರಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಕೊಣ್ಣೂರು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸಿಗುವ ಉತ್ತಮ ಮಣ್ಣಿನಿಂದ ತಯಾರಿಸುವ ಗಣೇಶ ವಿಗ್ರಹಗಳು ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗಿದ್ದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
Related Articles
Advertisement
ಮೂರ್ತಿ ತಯಾರಕರಿಗೆ ನೆರೆ ಬಿಸಿ: ಗ್ರಾಮೀಣ ಪ್ರದೇಶದಲ್ಲಿ ಪರಂಪರಾಗತವಾಗಿ ತಮ್ಮ ಕೃಷಿ ಮನೆತನಗಳಿಗೆ ಗಣೇಶ ವಿಗ್ರಹ ಮಾಡಿ ಕೊಡುತ್ತ ಬಂದಿರುವ ಕಂಬಾರ, ಬಡಿಗ, ಪತ್ತಾರ ಮನೆತನದವರು ಈ ವರ್ಷ ತೀವ್ರ ಮಳೆಯಿಂದಾಗಿ ಸ್ಥಳೀಯವಾಗಿ ಸಿಕ್ಕುವ ಮಣ್ಣು ತರುವುದು ಕಷ್ಟವಾಗಿ ಗಣೇಶ ಮೂರ್ತಿ ಕಡಿಮೆ ಸಂಖ್ಯೆಯಲ್ಲಿ ತಯಾರಿಸಿದ್ದಾರೆ. ಅಲ್ಲದೇ ಪ್ರತಿವರ್ಷ ಅವರು ಕೂಡ ಲಾಭದ ಆಧಾರದಲ್ಲಿ ಮಾರಾಟ ಮಾಡಲು ಮಹಾರಾಷ್ಟ್ರ ಮತ್ತು ಗೋಕಾಕ ಬಳಿಯ ಕೊಣ್ಣೂರಿನ ಗಣೇಶ ವಿಗ್ರಹಗಳನ್ನೇ ಕೊಂಡು ತಂದು ತಮ್ಮ ಮನೆತನದವರಿಗೆ ಮಾರುತ್ತಿದ್ದರು. ಆದರೆ ಪ್ರವಾಹದ ಅಡಚಣೆಯಾಗಿದ್ದರಿಂದ ಕೊಣ್ಣೂರಿನಲ್ಲಿಯೇ ಗಣೇಶ ವಿಗ್ರಹಗಳ ಕೊರತೆ ಎದುರಾಗಿದ್ದರಿಂದ ಅವರು ಕಡಿಮೆ ಸಂಖ್ಯೆಯಲ್ಲಿ ಗಣೇಶ ಮೂರ್ತಿ ತಂದಿದ್ದು, ಬೆಲೆ ಹೆಚ್ಚಿಸಿದ್ದಾರೆ.
ಶೇ.60 ಮೂರ್ತಿ ಬುಕ್: ನಗರ ಪ್ರದೇಶಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಭಾದ್ರಪದ ಶುಕ್ಲ ಚೌತಿಯಂದೇ ಅತೀ ಹೆಚ್ಚು ಜನರು ನೇರವಾಗಿ ಅಂಗಡಿಗಳಿಗೆ ಬಂದು ಗಣೇಶನನ್ನು ಕೊಂಡೊಯ್ಯುತ್ತಿದ್ದರು. ಆದರೆ ಈ ವರ್ಷ ಚೌತಿ ಇನ್ನು ಮೂರು ದಿನಗಳು ಇರುವಾಗಲೇ ಶೇ.60 ಗಣೇಶ ವಿಗ್ರಹಗಳನ್ನು ಕಾಯ್ದಿರಿಸಿದ್ದಾರೆ. ಹು-ಧಾ, ಬೆಳಗಾವಿಯಲ್ಲಿ ಮನೆ ಮನೆ ಗಣೇಶಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ ಆಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣೇಶ ಮೂರ್ತಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಮಾರಾಟವಾಗಿವೆ.
ಬೆಳಗಾವಿ ಜಿಲ್ಲೆಯೊಂದರಿಂದಲೇ ಶೇ.30 ಪೂರೈಕೆ:
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 1900 ಸಾರ್ವಜನಿಕ ಗಣೇಶ ಮೂರ್ತಿಗಳು, 50 ಸಾವಿರ ಮನೆ ಮನೆ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ 2800 ಸಾರ್ವಜನಿಕ ಗಣೇಶ ಮೂರ್ತಿಗಳು ಹಾಗೂ 80 ಸಾವಿರ ಮನೆ ಮನೆ ಗಣೇಶ ಮೂರ್ತಿಗಳು, ಹಾವೇರಿ 670 ಸಾರ್ವಜನಿಕ ಹಾಗೂ 30 ಸಾವಿರ ಮನೆ ಮನೆ ಗಣೇಶ, ಗದಗ ಜಿಲ್ಲೆಯಲ್ಲಿ 540 ಸಾರ್ವಜನಿಕ ಹಾಗೂ 40 ಸಾವಿರ ಮನೆ ಮನೆ ಗಣೇಶ, ಉತ್ತರ ಕನ್ನಡ 400 ಸಾರ್ವಜನಿಕ ಹಾಗೂ 20 ಸಾವಿರ ಮನೆ ಮನೆ ಗಣೇಶ, ಬಾಗಲಕೋಟೆ 890 ಸಾರ್ವಜನಿಕ ಹಾಗೂ 29 ಸಾವಿರ ಮನೆ ಮನೆ ಗಣೇಶ, ವಿಜಯಪುರ 800 ಸಾರ್ವಜನಿಕ ಹಾಗೂ 38 ಸಾವಿರ ಮನೆ ಮನೆ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಈ ಪೈಕಿ ಶೇ.30 ಗಣೇಶ ಮೂರ್ತಿಗಳು ಬೆಳಗಾವಿ ಜಿಲ್ಲೆಯೊಂದರಿಂದಲೇ ಉಕ ಭಾಗಕ್ಕೆ ಪೂರೈಕೆಯಾಗುವುದು ವಿಶೇಷ. ಆದರೆ ಈ ವರ್ಷ ನೆರೆ ಹಾವಳಿಯಿಂದ ಪೂರೈಕೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಗಣೇಶ ಮೂರ್ತಿಗಳ ಕೊರತೆ ಮಾರಾಟ ಮಾಡುವವರಿಗೆ ಎದುರಾಗಿದ್ದು, ಕೊಣ್ಣೂರಿನಲ್ಲಿ ಗಣೇಶಮೂರ್ತಿಗಳ ಕೊರತೆ ಎದುರಾಗಿದ್ದರಿಂದ ಕಳೆದ ವರ್ಷದ ಅರ್ಧದಷ್ಟು ಮಾತ್ರ ಮೂರ್ತಿಗಳು ಸಿಕ್ಕಿವೆ.• ಚಿದಾನಂದ ಬಡಿಗೇರ, ಮೂರ್ತಿ ಮಾರಾಟಗಾರ
•ಬಸವರಾಜ ಹೊಂಗಲ್