Advertisement

ಚಿತ್ತಾಕರ್ಷಕ ಜಾನಪದ ನೃತ್ಯ

06:47 PM Jul 25, 2019 | mahesh |

ಸುಮಾರು ಹತ್ತು ವರ್ಷಗಳಿಂದ ಜಾನಪದ ರಂಗ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿರುವ ಸಂಸ್ಥೆ ಶ್ರೀ ರಾಮ್‌ ಡ್ಯಾನ್ಸ್‌ ಅಕಾಡೆಮಿ ಉಡುಪಿ ಜಾನಪದ ನೃತ್ಯವನ್ನು ದೇಶದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಿದೆ. ಮುಖ್ಯವಾಗಿ ಯುವ ಜನರನ್ನು ಕೇಂದ್ರವಾಗಿರಿಸಿಕೊಂಡು ತನ್ನ ಕೆಲಸ ಮಾಡಿದೆ. ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯ, ಜೈನ್‌ ಕಾಲೇಜು ಮೂಡಬಿದಿರೆ, ಆಳ್ವಾಸ್‌ ಮೂಡಬಿದಿರೆ, ಜೇಸೀಸ್‌ ಸ್ಕೂಲ್‌ ಕಾರ್ಕಳ, ಎಂ.ಪಿ.ಎಂ. ಕಾಲೇಜು ಕಾರ್ಕಳ ಮುಂತಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಹಂಪಿ ಉತ್ಸವ, ತುಳು ಸಾಹಿತ್ಯ ಸಮ್ಮೇಳನ, ದೆಹಲಿಯಲ್ಲಿ ಜರಗಿದ ಅಖೀಲ ಭಾರತ ಜಾನಪದ ಉತ್ಸವದಲ್ಲಿ ಭಾಗವಹಿಸಿದ ಹೆಗ್ಗಳಿಕೆ, ಶೇಕರ ಬೈಕಾಡಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ಸಂಸ್ಥೆ ಜೂ.16ರಂದು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಮೂರು ಪ್ರಕಾರದ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.

Advertisement

ಕಂಗೀಲು
ಕರಾವಳಿಯ ಮೂಲ ಜಾನಪದ ನೃತ್ಯ ಪ್ರಕಾರ ಇದು.ರೋಗರುಜಿನಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಶ್ರೀಕೃಷ್ಣ ಕೊರಗಜ್ಜನ ರೂಪದಲ್ಲಿ ಪ್ರತ್ಯಕ್ಷನಾಗಿ ಜನತೆಯ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯ ತಳಹದಿಯಲ್ಲಿ ಕುಣಿಯುವ ಜಾನಪದ ನೃತ್ಯ. ಈ ನೃತ್ಯದಲ್ಲಿ ಕೊರಗಜ್ಜ ಮುಖಕ್ಕೆ ಮಸಿ ಬಳಿದುಕೊಂಡು ಮತ್ತು ತೆಂಗಿನ ಸಿರಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಲಯಬದ್ಧವಾದ ಕಂಗೀಲಿನ ಹಾಡಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಕುಣಿತ ಲಯಬದ್ಧವಾಗಿಯೂ, ಆಕರ್ಷಕವಾಗಿಯೂ ಇರುತ್ತದೆ.

ವೀರಗಾಸೆ
ಹೆಚ್ಚಾಗಿ ಉತ್ತರ ಕರ್ನಾಟಕದವರು, ವೀರಭದ್ರ ದೇವರ ಅರಾಧಿಸಿಕೊಂಡು ಬಂದವರು ವೀರಭದ್ರನ ಕತೆಯನ್ನು ಹೇಳುತ್ತ, ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು, ರೋಷಾವೇಷದಿಂದ ವಾದ್ಯ ಮೇಳಗಳೊಂದಿಗೆ ಕುಣಿಯುತ್ತಾರೆ. ಇವರ ವೇಷಭೂಷಣಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ತಲೆಯಲ್ಲಿ ಮುಂಡಾಸು, ನಾಗನ ಹೆಡೆಯುಳ್ಳ ಕಿರೀಟವನ್ನು ತೊಡುತ್ತಾರೆ. ನೋಡಲು ಬಹಳ ಆಕರ್ಷಕವಾಗಿರುತ್ತದೆ.

ಕಂಸಾಳೆ
ಮೈಸೂರು, ಚಾಮರಾಜಪೇಟೆ, ಕೊಳ್ಳೆಗಾಲ ಮುಂತಾದ ಪ್ರದೇಶದಲ್ಲಿ ಮಲೆಮಹಾದೇಶ್ವರನನ್ನು ಆರಾಧಿಸಿಕೊಂಡು ಬಂದ ಜನರು ಕಂಸಾಳೆಯ ಹಾಡಿನೊಂದಿಗೆ ಕೈಯಲ್ಲಿ ತಾಳ, ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ಧವಾಗಿ ಕುಣಿಯುತ್ತಾರೆ. ಈ ಕುಣಿತದಲ್ಲಿ ಬೇರೆ ಬೇರೆ ಕಸರತ್ತು, ಪಿರಾಮಿಡ್ಡುಗಳನ್ನು ಕಾಣಬಹುದಾಗಿದೆ. ಆಕರ್ಷಕವಾದ ಗುಂಪು ನೃತ್ಯದಲ್ಲಿ ಮಹಿಳೆಯರು ಮತ್ತು ಪುರುಷರು ಭಾಗವಹಿಸಬಹುದು. ಈ ಮೂರು ನೃತ್ಯ ಪ್ರಕಾರಗಳ ಪ್ರದರ್ಶನ ನೀಡಿದವರು ಕಾಲೇಜು ವಿದ್ಯಾರ್ಥಿಗಳು.

ಜಯರಾಂ ನೀಲಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next