Advertisement
ಸುಬ್ರಹ್ಮಣ್ಯ ಮೀಸಲು ಅರಣ್ಯದ ಸಮೀಪದ ಐನಕಿದುವಿನಲ್ಲಿ ಅ. 10 ರಂದು ಇಲ್ಲಿನ ಸರಕಾರಿ ಶಾಲಾ ಬಳಿ 12 ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದವು. ಮಧ್ಯಾಹ್ನದ ಹೊತ್ತಲ್ಲಿ ಕಾಡಿನಿಂದ ಇಳಿದು ಬಂದ ಈ ಆನೆಗಳ ಹಿಂಡನ್ನು ಸ್ಥಳೀಯರು ಹತ್ತಿರದಿಂದಲೇ ಕಂಡಿದ್ದರು. ಬಳಿಕ ಅವುಗಳು ಪಕ್ಕದ ಕೃಷಿ ತೋಟಗಳ ಮೂಲಕ ಮರೆಯಾಗಿದ್ದವು. ಹೀಗಾಗಿ ಈ ಗುಂಪಿನಲ್ಲಿ ಮರಿಯಾನೆ ಸಹಿತ ದೊಡ್ಡ ಪ್ರಮಾಣದಲ್ಲಿ ಆನೆಗಳಿರುವುದು ಕಂಡು ಬರುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಇದಕ್ಕೆ ಹೊಂದಿಕೊಂಡ ದೇವರಗದ್ದೆ, ಮಾನಾಡು ಪರಿಸರದಲ್ಲಿ ಮರಿಯಾನೆಯೊಂದು ಪ್ರತ್ಯಕ್ಷವಾಗಿ ಭೀತಿಯನ್ನುಂಟುಮಾಡಿತ್ತು. ಈ ಭಾಗದ ಗ್ರಾಮಗಳಲ್ಲಿ ಆಗಾಗ್ಗೆ ಕೃಷಿಕರ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು.
ನೀರು, ಆಹಾರ ಸಂತಾನೋತ್ಪತ್ತಿಗಾಗಿ ಅರಣ್ಯದಿಂದ ಮತ್ತೂಂದು ಅರಣ್ಯಕ್ಕೆ ಇವುಗಳು ಸಂಚರಿಸುತ್ತವೆ. ಹವಾಮಾನ ವೈಪರೀತ್ಯ, ನೈಸರ್ಗಿಕವಾಗಿ ಕಾಡುವ ರೋಗಗಳಿಂದ ಪಾರಾಗಲು ಆನೆಗಳು ಕಾಡಿನಿಂದ ಕಾಡಿಗೆ ತೆರಳುತ್ತವೆ. ಆನೆಗಳು ಸಾಗುವ ಅರಣ್ಯ ಪ್ರದೇಶ ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿದೆ. ಸಂತ್ರಸ್ತರಿಗೆ ಪುನರ್ವಸತಿ, ಅರಣ್ಯ ನಾಶ, ಒತ್ತುವರಿ ಈ ಎಲ್ಲದರ ಪರಿಣಾಮಕ್ಕಿಂತ ಹೆಚ್ಚಾಗಿ ಆನೆಗಳು ಸಾಗುವ ಹಾದಿಯಲ್ಲಿ ಅಕ್ರಮ ಗಣಿಗಾರಿಕೆ ನಿರ್ಮಾಣವಾಗಿವೆ. ಪರಿಣಾಮ ಆನೆಗಳು ನಾಡಿಗೆ ಬರಲು ಕಾರಣವಾಗಿವೆ. ಇವುಗಳು ನಾಡಿಗೆ ಬರುತ್ತಲೇ ಕೃಷಿಕರ ಕೃಷಿ ತೋಟಗಳಿಗೆ ದಾಳಿ ಇಡುತ್ತಿವೆ. ಕೃಷಿ ಅವಲಂಬಿತ ಕುಟುಂಬಗಳು ತೋಟಗಳಲ್ಲಿ ಬೆಳೆದ ಫಸಲು ನಾಶ ಪಡಿಸುತ್ತಿವೆ. ಪ್ರಾಣ ಭೀತಿಗೂ ಕಾರಣವಾಗುತ್ತಿವೆ. ಕೊಲ್ಲಮೊಗ್ರು, ಕಡಮಕಲ್ಲು, ಬಾಳುಗೋಡು, ಹರಿಹರ, ಕಲ್ಮಕಾರು, ಮಡಪ್ಪಾಡಿ, ಸುಬ್ರಹ್ಮಣ್ಯ, ಯೇನೆಕಲ್ಲು, ಗುತ್ತಿಗಾರು, ಸಂಪಾಜೆ, ಮಡಪ್ಪಾಡಿ ಭಾಗಗಳಲ್ಲಿ ಹೆಚ್ಚು ಕಾಡಾನೆ ಹಾವಳಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದಿವೆ.
Related Articles
ಆನೆಗಳ ಕುಟುಂಬ ನೀರು ಮೇವು ಹುಡುಕಿಕೊಂಡು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಚರಿಸುತ್ತಿವೆ. ಒಂದು ವರ್ಷದಲ್ಲಿ ಆನೆಯ ಕುಟುಂಬವೊಂದು ಸಂಚರಿಸಲು 1 ಸಾವಿರ ಚ.ಕಿ.ಮೀ. ಹೆಚ್ಚು ಅರಣ್ಯ ಪ್ರದೇಶ ಬೇಕು ಎನ್ನುವುದು ಸಂಶೋಧನೆಗಳಿಂದ ತಿಳಿದು ಬರುತ್ತದೆ. ಆನೆಗಣತಿ ಪ್ರಕಾರ ಭಾರತದಲ್ಲಿ ಸುಮಾರು ಇಪ್ಪತ್ತಾರು ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ದಕ್ಷಿಣ ಭಾರತದಲ್ಲಿ ಸುಮಾರು 12 ಸಾವಿರ ಕಾಡಾನೆಗಳಿವೆ. ಕರ್ನಾಟಕದಲ್ಲಿಯೇ 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಪ್ರತಿದಿನ ಆನೆಯೊಂದಕ್ಕೆ 150ರಿಂದ 200 ಕೆಜಿಯಷ್ಟು ಮೇವಿನ ಅಗತ್ಯ ಇದ್ದು, 200 ಲೀಟರ್‌ನಷ್ಟು ನೀರು ಬೇಕಾಗಿದೆ. ಆನೆಯೊಂದು ಸಂಚರಿಸಲು 450ರಿಂದ 500 ಚ.ಕಿ.ಮೀ. ಅರಣ್ಯ ಪ್ರದೇಶ ಅವಶ್ಯಕತೆ ಇದೆ.
Advertisement
ಅರಣ್ಯಗಳ ವ್ಯಾಪ್ತಿ ಕ್ಷೀಣಕರ್ನಾಟಕದಲ್ಲಿ ಸರಕಾರದ ಅಧಿಕೃತ ದಾಖಲೆ ಪ್ರಕಾರವೇ 67 ಸಾವಿರ ಹೆಕ್ಟೇರ್ ಅರಣ್ಯ ಒತ್ತುವರಿಯಾಗಿದೆ. ತಮ್ಮ ಆವಾಸ ಸ್ಥಾನದಲ್ಲಿ ಮಾನವ ನಿರ್ಮಿತ ಒತ್ತಡಗಳಿಂದ ನೆರಳು, ಮೇವಿಗಾಗಿ ಹಾದಿ ತಪ್ಪುವ ಆನೆಗಳು ಕಾಡಿನಿಂದ ನಗರ, ಪಟ್ಟಣ, ಜನವಸತಿ ಹಳ್ಳಿಗಳತ್ತ ನುಗ್ಗುತ್ತಿವೆ. ಇದರಿಂದ ಮನುಷ್ಯ ಆನೆಗಳ ನಡುವೆ ಸಂಘರ್ಷ ಕೂಡ ನಡೆಯುತ್ತಿದೆ ಎನ್ನುವ ವಾದವಿದೆ. ಕರ್ನಾಟಕದ ಮಟ್ಟಿಗೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ವನ್ಯಜೀವಿಧಾಮ, ಬಿಳಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಬಂಡಿಪುರ ರಾಷ್ಟ್ರೀಯ ಉದ್ಯಾನ, ಮೈಸೂರು ಜಿಲ್ಲೆಗೆ ಸೇರಿರುವ ರಾಷ್ಟ್ರೀಯ ಉದ್ಯಾನವನ ಕನ್ನಡ ನಾಡಿನಲ್ಲಿರುವ ಆನೆಗಳ ಮೂಲ ನೆಲೆಯಾಗಿದೆ. ಓಡಾಟಕ್ಕೆ ಕಾರಣ
ಸದಕಾಲ ಚಲಿಸುವುದೇ ಆನೆಗಳ ವಿಶಿಷ್ಠ ಗುಣ. ಮರಿಗಳ ಪಾಲನೆ, ಲಾಲನೆ ಮಾಡುವುದು ಆನೆಯ ಚಿಕ್ಕಮ್ಮ. ಆನೆಯ ಕೆಲಸ. ಗಂಡಾನೆ ಕೊಂಚ ಪುಂಡಾಟಿಕೆ ಧೋರಣೆ ಹೊಂದಿರುತ್ತದೆ. ಗಂಡಾನೆ ಮರಿಗಳು ಮಾತೃ ಪ್ರಧಾನ ವ್ಯವಸ್ಥೆ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಸುಮಾರು 10 ವರ್ಷ ಪ್ರಾಯ ತಲುಪುವ ವೇಳೆಗೆ ಅವುಗಳು ಅಮ್ಮ, ಚಿಕ್ಕಮ್ಮನ ಅಕ್ಕರೆ ಕಳೆದುಕೊಂಡು ಗುಂಪಿನಿಂದ ಹೊರದೂಡಲ್ಪಡುತ್ತವೆ ಎನ್ನುವುದು ಸಂಶೋಧನೆಯ ಭಾಗವಾಗಿದೆ. ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ದಶಕಗಳಿಂದ ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಅವುಗಳ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಸೋಲಾರ್ ಬೇಲಿ ನಿರ್ಮಾಣ ತುಂಬಾ ತುಟ್ಟಿಯಾದ ಕಾರಣ ಸಾಮಾನ್ಯ ರೈತರಿಗೆ ಕಷ್ಟವಾಗುತ್ತಿದೆ. ಇದು 50-50 ಯೋಜನೆಯಾಗಿದೆ. ತಡೆ ವಿಧಾನಗಳು
1 ಕಾಡಿನೊಳಗೆ ಹಣ್ಣುಹಂಪಲು ಗಿಡ ನೆಡುವುದು.
2 ‘ಆನೆ ಅಗರ್’ ಆನೆ ಕಂದಕ ನಿರ್ಮಾಣ.
3 ರೈಲು ಹಳಿ ಪಟ್ಟಿ ತಡೆಗೋಡೆ ನಿರ್ಮಾಣ
4 ಸೋಲಾರ್ ಬೇಲಿ.
5 ಹೊಲದ ಅಂಚಿನಲ್ಲಿ ಮೆಣಸಿನ ಗಿಡ, ಮುಳ್ಳಿನ ಸಸಿ ನಾಟಿ
6 ಪ್ರಸ್ತಾವಿತ ಜೇನು ಪೆಟ್ಟಿಗೆ ಅಳವಡಿಕೆ
7 ಬೆಂಕಿ, ಪಟಾಕಿಗಳು ಯಾಕೆ ವಿಫಲವಾಗುತ್ತಿದೆ
ಸರಕಾರ ಯಾವುದೇ ಕ್ರಮ ಕೈಗೊಂಡರೂ ಆನೆಗಳು ನಾಡಿಗೆ ಬರುವುದು ತಪ್ಪಿಲ್ಲ. ಕೆಲವು ತಾಂತ್ರಿಕ ಕಾರಣ, ಇನ್ನೂ ಕೆಲವು ಆಡಳಿತಾತ್ಮಕ ಹಿನ್ನಡೆ. ರೈತರಿಗೆ ಆರ್ಥಿಕ ಹೊರೆಯಾಗುತ್ತಿರುವ ಕಾರಣ ಸೋಲಾರ್ ಬೇಲಿ ಯೋಜನೆ ಸಾಕಾರಗೊಳ್ಳುತ್ತಿಲ್ಲ. 1 ಕಾಟಾಚಾರಕ್ಕೆ ಹಣ್ಣು ಹಂಪಲು ಬೀಜ ಬಿತ್ತನೆ
2 ಕಾಡಿನ ಒಳ ಭಾಗಕ್ಕೆ ತೆರಳಿ ಬಿತ್ತನೆ ಕಾರ್ಯ ನಡೆಯುತ್ತಿಲ್ಲ.
3 ಆನೆಗಳಿಗೆ ಆಹಾರದ ಅಲಭ್ಯತೆ.
4 ಆನೆ ಕಂದಕ ನಿರ್ಮಾಣ ಕಾರ್ಯ ವಿಸ್ತರಣೆಯಾಗಿಲ್ಲ.
5 ಸೋಲಾರ್ ಬೇಲಿ ಆನೆಗಳಿಗೆ ತಡೆಯಾಗುತ್ತಿಲ್ಲ.
6 ರೈಲು ಹಳಿ ಪಟ್ಟಿ ತಡೆಗೋಡೆ ಎಲ್ಲ ಕಡೆ ನಿರ್ಮಾಣವಾಗಿಲ್ಲ.
7 ಆನೆಗಳ ವಂಶಾಭಿವೃದ್ಧಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆಷ್ಟು ಕಂಡು ಬಂದಿಲ್ಲ
ಆನೆ ಹಿಂಡು ಕಂಡು ಬಂದ ಕುರಿತು ಮಾಹಿತಿ ಸಿಕ್ಕಿದ ತತ್ ಕ್ಷಣ ಸಿಬಂದಿಯನ್ನು ಆ ಭಾಗಕ್ಕೆ ಕಳುಹಿಸಿದ್ದೇನೆ. ಮೂರರಿಂದ ನಾಲ್ಕು ಆನೆಗಳಿರುವ ಕುರಿತು ಮಾಹಿತಿ ಸಿಕ್ಕಿದೆ. ಎಚ್ಚರ ವಹಿಸಿದ್ದೇವೆ. ಕೃಷಿಕರು ಆತಂಕ ಪಡದೆ ಎಚ್ಚರಿಕೆ ವಹಿಸುವುದು ಅಗತ್ಯ.
– ತ್ಯಾಗರಾಜ್
ವಲಯಾರಣ್ಯಾಧಿಕಾರಿ
ಸುಬ್ರಹ್ಮಣ್ಯ ವಲಯ ವಿಶೇಷ ವರದಿ