Advertisement

ಪ್ರವಾಹದಲ್ಲಿ ತೇಲಿಬರುತ್ತಿವೆ ಮೃತದೇಹಗಳು

06:00 AM Aug 19, 2018 | Team Udayavani |

ತಿರುವನಂತಪುರ: ಶತಮಾನದ ಭೀಕರ ಪ್ರವಾಹಕ್ಕೆ ಸಿಲುಕಿರುವ ಕೇರಳ ರಾಜ್ಯ ಅಕ್ಷರಶಃ ಮುಳುಗಿಹೋಗಿದೆ. ಸಮರೋಪಾದಿಯಲ್ಲಿ ರಕ್ಷಣಾಕಾರ್ಯ ನಡೆಯುತ್ತಿದ್ದರೂ, ಮಹಾಮಳೆ, ಪ್ರವಾಹದ ಅಬ್ಬರಕ್ಕೆ ಎಷ್ಟು ಮಂದಿ ಸಿಲುಕಿಕೊಂಡಿದ್ದಾರೆ, ಎಷ್ಟು ಮಂದಿ ಪ್ರಾಣತೆತ್ತಿದ್ದಾರೆ ಎಂಬುದರ ಸರಿಯಾದ ಲೆಕ್ಕವೇ ಸಿಗುತ್ತಿಲ್ಲ. ಇದರ ಮಧ್ಯೆಯೇ, ವರುಣಾರ್ಭಟಕ್ಕೆ ತತ್ತರಿಸಿರುವ ಕೇರಳದಲ್ಲಿ ಇದೀಗ ಪ್ರವಾಹದ ನೀರಿನಲ್ಲಿ ಮೃತದೇಹಗಳು ತೇಲಿಬರಲಾರಂಭಿಸಿವೆ.

Advertisement

ಸಾವಿಗೀಡಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಶನಿವಾರ 15 ಮೃತದೇಹಗಳು ನೀರಲ್ಲಿ ತೇಲಿಬಂದಿದ್ದು, ಒಂದೇ ದಿನ 23 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕಳೆದ 10 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 200 ದಾಟಿದೆ. ಇನ್ನೊಂದೆಡೆ, ಪ್ರವಾಹದಲ್ಲಿ ಸಿಲುಕಿರುವ ಎಷ್ಟೋ ಮಂದಿ ಕುಡಿಯುವ ನೀರು, ಆಹಾರ ಸಿಗದೇ ಪರದಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಪರಿಹಾರ ಸಾಮಗ್ರಿಗಳು ಸಂತ್ರಸ್ತರಿಗೆ ತಲುಪದಿದ್ದರೆ ಜನರು ಹಸಿವಿನಿಂದ ಸಾಯುವ ಭೀತಿಯಿದೆ ಎಂದು ಶಾಸಕ ಸಾಜಿ ಚೆರಿಯನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಆಫ್ಲೈನಲ್ಲೂ ಲೊಕೇಶನ್‌ ಶೇರ್‌: ಪ್ರವಾಹಪೀಡಿತ ಕೇರಳದಲ್ಲಿ ಸಿಲುಕಿಕೊಂಡವರು ಆಫ್ಲೈನ್‌ನಲ್ಲಿದ್ದರೂ ತಾವಿರುವ ಲೊಕೇಶನ್‌ ಅನ್ನು ಶೇರ್‌ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್‌ ಕಲ್ಪಿಸಿದೆ. ಆಂಡ್ರಾಯ್ಡ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಮೂಲಕ ತಾವಿರುವ ಪ್ರದೇಶದ ಪ್ಲಸ್‌ ಕೋಡ್‌ ಅನ್ನು ಎಸ್‌ ಎಂಎಸ್‌ ಮೂಲಕ ಹಂಚುವಂಥ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಸಂತ್ರಸ್ತರನ್ನು ರಕ್ಷಿಸಲು ಸುಲಭವಾಗಲಿದೆ ಎಂದು ಗೂಗಲ್‌ ಹೇಳಿದೆ.

ನೆರವಿಗೆ ಮುಂದೆ ಬಂದ ಯುಎಇ
ಕೇರಳದ ನೈಸರ್ಗಿಕ ವಿಕೋಪಕ್ಕೆ ಮಿಡಿದಿರುವ ಕೊಲ್ಲಿ ರಾಷ್ಟ್ರಗಳ ಸರಕಾರಗಳು ನೆರವು ನೀಡಲು ಮುಂದೆ ಬಂದಿವೆ. ಇಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಯುಎಇ ಸರ್ಕಾರ, ಕೇರಳಕ್ಕೆ ಅಗತ್ಯ ನೆರವು ನೀಡಲು ತುರ್ತಾಗಿ ಪ್ರತ್ಯೇಕ ಸಮಿತಿ ರಚಿಸಲು ಆದೇಶಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಯುಎಇ ದೊರೆ ಶೇಖ್‌ ಮೊಹ ಮ್ಮದ್‌ ಬಿನ್‌ ರಶೀದ್‌ ಅಲ್‌ ಮಖೂ¤ಮ್‌, “”ಸೌದಿಯ ಯಶೋಗಾಥೆಯಲ್ಲಿ ಕೇರಳಿಗರದ್ದೂ ಪ್ರಮುಖ ಪಾತ್ರವಿದೆ. ಹಾಗಾಗಿ, ಅವರ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ” ಎಂದಿದ್ದಾರೆ. ಪರಿಹಾರ ವಿತರಣೆ ಸಂಬಂಧ ಯುಎಇಯಲ್ಲಿ ಭಾರತದ ರಾಯಭಾರಿಯಾಗಿರುವ ನವದೀಪ್‌ ಸಿಂಗ್‌ ಸುರಿ ಜತೆಗೆ ಅಲ್ಲಿನ ಸರ್ಕಾರದ ಪ್ರತಿನಿಧಿಗಳು ಭಾನುವಾರ ಮಹತ್ವದ ಸಭೆ ನಡೆಸಲಿದ್ದಾರೆ. 

ನಾನಾ ರಾಜ್ಯಗಳಿಂದ ನೆರವಿನ ಮಹಾಪೂರ: ಕೇರಳಕ್ಕೆ ಭಾರತದ ಹಲವಾರು ರಾಜ್ಯಸರಕಾರಗಳು ನೆರವಿನ ಹಸ್ತ ಚಾಚಿವೆ. ಒಡಿಶಾ, ಬಿಹಾರ, ಉತ್ತರ ಪ್ರದೇಶ, ದಿಲ್ಲಿ, ತಮಿಳು ನಾಡು, ತೆಲಂಗಾಣ, ಗುಜರಾತ್‌ ಮುಂತಾದ ರಾಜ್ಯಗಳು ಆರ್ಥಿಕ ನೆರವು ನೀಡಿವೆ. ಇದರ ಜತೆಗೆ, ಸಂಸ್ಕರಿತ ಆಹಾರ, ಔಷಧಿ, ಅಗತ್ಯ ವಸ್ತುಗಳು, ಅಗ್ನಿ ಶಾಮಕದಳ, ವೈದ್ಯರ ತಂಡ, ಬೋಟ್‌ಗಳು, ಮುಳುಗು ತಜ್ಞರ ತಂಡಗಳನ್ನು ರಾಜ್ಯಗಳು ರವಾನಿಸಿವೆ.

Advertisement

ಎನ್‌ಡಿಆರ್‌ಎಫ್ ಬೃಹತ್‌ ಕಾರ್ಯಾಚಣೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್ ) ಕೇರಳದಲ್ಲಿ ಸದ್ಯಕ್ಕೆ ಕೈಗೊಂಡಿರುವ ಪರಿಹಾರ ಕಾರ್ಯಗಳು ಈವರೆಗೆ ಆ ಸಂಸ್ಥೆ ನಡೆಸಿರುವ ಎಲ್ಲಾ ಕಾರ್ಯಾಚರಣೆಗಳಿಗೆ ಹೋಲಿಸಿದರೆ ಅತಿ ದೊಡ್ಡ ಕಾರ್ಯಾಚರಣೆ ಎಂದು ಹೇಳಲಾಗಿದೆ. ಈ ಪಡೆಯ 58 ತಂಡಗಳು  ಕೇರಳದ ಕಾರ್ಯಾಚರಣೆಗೆ ನಿಯುಕ್ತಿಯಾಗಿದ್ದು, ಸದ್ಯಕ್ಕೆ 55 ತಂಡಗಳು ಸಕ್ರಿಯವಾಗಿವೆ. ಇನ್ನೂ ಮೂರು ಹೊಸ ತಂಡಗಳು ಸದ್ಯದಲ್ಲೇ ಸೇರ್ಪಡೆಗೊಳ್ಳಲಿವೆ ಎಂದು ಎನ್‌ಡಿಆರ್‌ಎಫ್  ಹೇಳಿದೆ. ಈವರೆಗೆ 3.14 ಲಕ್ಷ ಜನರನ್ನು ಸುರ ಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಗಿದೆ ಎಂದು ಸಂಸ್ಥೆ ಹೇಳಿದೆ. 

ಡೊನೇಷನ್‌ ಚಾಲೆಂಜ್‌
ಕೇರಳಕ್ಕೆ ಆರ್ಥಿಕ ಸಹಾಯ ಕಲ್ಪಿಸಲು ತೆಲುಗು ನಟ ಸಿದ್ದಾರ್ಥ್ ಅವರು, ಟ್ವಿಟರ್‌ನಲ್ಲಿ ಆ. 17ರಂದು ಶುರು ಮಾಡಿದ್ದ #KeralaDonationChallengeಗೆ ವ್ಯಾಪಕ ಸ್ಪಂದನೆ ಸಿಕ್ಕಿದೆ. ಕೇರಳ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ತಾವು ನೀಡಿದ 10 ಲಕ್ಷ ರೂ. ದೇಣಿಗೆಯ ಬಗ್ಗೆ ಸಂಬಂಧ ಪಟ್ಟ ಬ್ಯಾಂಕ್‌ ನೀಡಿದ್ದ ಪ್ರಮಾಣ ಪತ್ರವನ್ನು ಟ್ವಿಟರ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದ ಅವರು, ಟ್ವೀಟಿಗರು ಇದೇ ರೀತಿಯ ಸಹಾಯಕ್ಕೆ ಮುಂದಾಗಬೇಕೆಂದು ಕರೆ ನೀಡಿದ್ದರು. ಇದನ್ನು ಬೆಂಬಲಿಸಿರುವ ಹಲವಾರು ಟ್ವೀಟಿಗರು, ಇತ್ತೀಚೆಗಿನ ಕೀಕಿ ಚಾಲೆಂಜ್‌, ಫಿಟ್ನೆಸ್‌ ಚಾಲೆಂಜ್‌ಗಳನ್ನು ಸದ್ಯಕ್ಕೆ ಕೈಬಿಡಿ. ತುರ್ತಾಗಿ ಕೇರಳಕ್ಕೆ ಸಹಾಯ ಮಾಡಿ ಎಂದು ಟ್ವಿಟರ್‌ ಲೋಕದ ಮಂದಿಗೆ ಕರೆ ನೀಡಿದ್ದಾರೆ. 

ಹಗಲು ದರೋಡೆಗೆ ಡಿಜಿಸಿಎ ಬ್ರೇಕ್‌
ಕೇರಳದ ಪ್ರವಾಹ ಪೀಡಿತ ಪರಿಸ್ಥಿತಿಯ ಲಾಭ ಪಡೆದು, ಪ್ರಯಾಣಿಕರ ಹಗಲು ದರೋಡೆಗೆ ಇಳಿದಿರುವ ಕೆಲ ವಿಮಾನ ಸೇವಾ ಸಂಸ್ಥೆಗಳಿಗೆ  ಖಡಕ್‌ ಸೂಚನೆ ಹೊರಡಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಕೇರಳ ಹಾಗೂ ಆ ರಾಜ್ಯದ ಗಡಿ ಭಾಗಗಳಿಗೆ ನೀಡುವ ದೇಶೀಯ ವಿಮಾನ ಸೇವೆಗಳಿಗೆ 10 ಸಾವಿರ ರೂ. ಮೇಲ್ಪಟ್ಟು ದರ ವಿಧಿಸದಂತೆ ಕಟ್ಟು ನಿಟ್ಟಾಗಿ ಸೂಚಿಸಿದೆ. 
ವಿಮಾನ ಸಂಸ್ಥೆಗಳು ಕಲ್ಲಿಕೋಟೆ, ತಿರುವನಂತಪುರ, ಕೊಯಮತ್ತೂರು, ಮಂಗಳೂರು ನಗರಗಳಿಗೆ ಟಿಕೆಟ್‌ ದರಗಳನ್ನು ಗಣನೀಯವಾಗಿ ಹೆಚ್ಚಿಸಿದ್ದವೆಂಬ ಆರೋಪ ಕೇಳಿ ಬಂದಿದ್ದರಿಂದ ಡಿಜಿ ಸಿಎ ಈ ಕ್ರಮ ಕೈಗೊಂಡಿದೆ. 

ರಾಹುಲ್‌ ಆಗ್ರಹ: ಏತನ್ಮಧ್ಯೆ, ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿ ಸುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಕೇರಳ ರಾಜ್ಯ ಕಾಂಗ್ರೆಸ್‌ ಸಮಿ ತಿಯೂ ಇದೇ ರೀತಿಯ ಆಗ್ರಹ ವನ್ನು ಮಾಡಿದೆ.

ಮತ್ತೆರಡು ದಿನ ಮಳೆ: ಕೇರಳದಲ್ಲಿ ಮಳೆಯ ಆರ್ಭಟ ಮತ್ತೆರಡು ದಿನಗಳು ಮುಂದುವರಿಯಲಿದೆ ಎಂದು ತಿರುವನಂಪುರದಲ್ಲಿರುವ ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ. ಅತಿ ಭೀಕರ ಮಳೆಯಲ್ಲದಿದ್ದರೂ, ಭರ್ಜರಿ ಮಳೆಯಂತೂ ಖಂಡಿತವಾಗಿ ಸುರಿಯಲಿದೆ ಎಂದು ಅವರು ತಿಳಿಸಿದ್ದು, ಕೊಚ್ಚಿ ಮಾತ್ರವಲ್ಲದೆ ಕೇರಳದ ಮಧ್ಯ ಭಾಗದ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ ಎಂದೂ ಹೇಳಿದ್ದಾರೆ. 

ತ.ನಾಡಿಗೂ ಹೆಚ್ಚಿದ ಆತಂಕ
ಚೆನ್ನೈ: ತಮಿಳುನಾಡಿನಲ್ಲೂ ಧಾರಾಕಾರ ಮಳೆಯಾ ಗುತ್ತಿದ್ದು, ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂ ದಾಗಿ ಭಾನುವಾರ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ. ನೀಲಗಿರೀಸ್‌, ಕೊಯಮತ್ತೂರು, ಥೇಣಿ, ದಿಂಡಿಗಲ್‌, ತಿರುನಲ್ವೇಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನನ್ನ ಶ್ವಾನಗಳ ಬಿಟ್ಟು ನಾ ಎಲ್ಲಿಗೂ ಬರೋದಿಲ್ಲ
ಸೇನಾ ಕಾರ್ಯಾಚರಣೆ ವೇಳೆ ಜಲಾವೃತಗೊಂಡಿದ್ದ ಮನೆಯ ಮೇಲಿದ್ದ ಸುನೀತಾ ಎಂಬ ಗೃಹಿ ಣಿಯು ತಾನು ಸಾಕಿರುವ 25 ನಾಯಿಗಳನ್ನು ತಮ್ಮೊಂದಿಗೆ ಕೊಂಡೊಯ್ದರೆ ಮಾತ್ರ ತಾನು, ತನ್ನ ಪತಿ ಜತೆಗೆ ಬರುವುದಾಗಿ ಪಟ್ಟು ಹಿಡಿದ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ. ಕೊನೆಗೆ ಆಕೆಯ ನಾಯಿಗಳೊಂದಿಗೆ ಆಕೆ ಹಾಗೂ ಆಕೆಯ ಪತಿಯನ್ನು ಹಾಯಿ ದೋಣಿಯಲ್ಲಿ ನಿರಾಶ್ರಿತರ ಶಿಬಿರಕ್ಕೆ ತಲುಪಿಸಲಾಗಿದೆ. 

1.5 ಲಕ್ಷ ರೂ. ನೀಡಿದ ಹನನ್‌ 
ತನ್ನ ವಿದ್ಯಾಭ್ಯಾಸ ಖರ್ಚನ್ನು ನೀಗಿಸಲು ಮೀನು ಮಾರಾಟ ಆರಂಭಿಸಿದ್ದಕ್ಕಾಗಿ ಕೇರಳದ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದ್ದರೂ, ಕೆಲವು ವರ್ಗಗಳಿಂದ ವ್ಯಾಪಕ ಟೀಕೆಗೊಳಗಾಗಿದ್ದ ತೊಡುಪ್ಪುಳದ ಬಿಎಸ್‌ಸಿ ವಿದ್ಯಾರ್ಥಿನಿ ಹನನ್‌, ಮುಖ್ಯಮಂತ್ರಿ ಪರಿಹಾರ ನಿಧಿಗೆ 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. “”ತನಗೆ ಸಹಾಯ ಮಾಡಿದ ಕೇರಳ ಜನತೆಯ ಹಣವನ್ನು ಅವರ ಕಷ್ಟಕ್ಕಾಗಿ ಸಮರ್ಪಿಸಿದ್ದೇನೆ” ಎಂದಿದ್ದಾರೆ ಅವರು.

ಕೇರಳದ ಸದ್ಯದ ಪರಿಸ್ಥಿತಿಗೆ ಮಾನವನ ಕಾಣಿಕೆಯೂ ಇದೆ. ಅನೇಕ ಕಡೆ ಕಲ್ಲು ಕ್ವಾರಿಗಳನ್ನು ನಿರ್ಮಿಸಿ ಪ್ರಕೃತಿಯನ್ನು ಲೂಟಿ ಹೊಡೆದಿದ್ದು ಹಾಗೂ ಅಲ್ಲಿನ ನದಿಗಳ ದಂಡೆಗಳ ಮೇಲೆ ಅನಿಯಮಿತವಾಗಿ ಕಟ್ಟಡಗಳನ್ನು ಕಟ್ಟಿ ನದಿ ಪಾತ್ರಗಳನ್ನು ಹಾಳುಗೆಡವಿದ್ದೂ ಹಾನಿ ಹೆಚ್ಚಾಗಲು ಕಾರಣ. 
ಮಾಧವ್‌ ಗಾಡ್ಗಿಳ್‌, ಪರಿಸರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next