ಬೆಂಗಳೂರು: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿರುವ ಈ ಅವಧಿಯಲ್ಲಿ ಸಾರ್ವಜನಿಕರಿಗೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ದೇಶದ ಪ್ರಮುಖ ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮತ್ತು ದೇಶದ ಆ್ಯಪ್ ಆಧಾರಿತ ಕ್ಯಾಬ್ ಆಪರೇಟ್ ಸಂಸ್ಥೆಯಾಗಿರುವ ಮೆರು ಪರಸ್ಪರ ಒಪ್ಪಂದ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮಹೀಂದ್ರ ಆ್ಯಂಡ್ ಮಹೀಂದ್ರ ಹೆಚ್ಚು ಪಾಲನ್ನು ಹೊಂದಿರುವ ಮೆರು ದೇಶದ ಪ್ರಮುಖ ಆ್ಯಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆಯಾಗಿದೆ. ಈ ಒಪ್ಪಂದದಿಂದಾಗಿ ಬೆಂಗಳೂರು, ದೆಹಲಿ ಎನ್ ಸಿಆರ್ ಮತ್ತು ಹೈದ್ರಾಬಾದ್ ನಗರಗಳ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸುರಕ್ಷಿತ ಮತ್ತು ಸ್ಯಾನಿಟೈಸ್ಡ್ ಚೇನ್ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಪ್ರಕಟಣೆ ವಿವರಿಸಿದೆ.
ಭಾರತ ಈ ಅನಿರೀಕ್ಷಿತವಾದ ಹೋರಾಟವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಗ್ರಾಹಕರಿಗೆ ನೆರವಾಗಲು ಬದ್ಧವಾಗಿದೆ. ನಮ್ಮ ಹೊಸ, ಆವಿಷ್ಕಾರಕ ಕ್ರಮಗಳನ್ನು ರೂಪಿಸುತ್ತಿರುವ ಯೋಜನೆಗಳ ಫಲಿತಾಂಶದಿಂದಾಗಿ ಮೆರು ಜತೆಗಿನ ಈ ಒಪ್ಪಂದ ಹೊರಹೊಮ್ಮಿದೆ. ಇದರ ಮೂಲಕ ಮಾರಾಟಗಾರರ ಇಕೋಸಿಸ್ಟಂ, ಬ್ರ್ಯಾಂಡ್ ಗಳು, ಪಾಲುದಾರರು ಮತ್ತು ಗ್ರಾಹಕರಿಗೆ ಸುರಕ್ಷಿತವಾದ ಮತ್ತು ತ್ವರಿತವಾದ ರೀತಿಯಲ್ಲಿ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನಾವು ಅತ್ಯಂತ ಭದ್ರತೆಯ ಮತ್ತು ಸುರಕ್ಷಿತವಾದ ಪೂರೈಕೆ ಜಾಲವನ್ನು ಹೊಂದಿದ್ದೇವೆ ಮತ್ತು ಎಸ್ ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವ ದೇಶದ ಜತೆಗೆ ನಾವಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಯೋಗಕ್ಷೇಮ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಒಪ್ಪಂದದ ಬಗ್ಗೆ ಮಾತನಾಡಿದ ಮೆರು ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಸಿಇಒ ನೀರಜ್ ಗುಪ್ತಾ ಅವರು, “ಫ್ಲಿಪ್ ಕಾರ್ಟ್ ನೊಂದಿಗೆ ನಾವು ಮಾಡಿಕೊಂಡಿರುವ ಒಪ್ಪಂದ ವಿನೂತನವಾಗಿದ್ದು, ಇದರಿಂದ ಗ್ರಾಹಕರಿಗೆ ಅತ್ಯುತ್ತಮವಾದ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದು ಹೇಳಿದರು.
ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಮೆರು ಫ್ಲಿಪ್ ಕಾರ್ಟ್ ವಿತರಣೆಗಳಿಗೆ ನೆರವಾಗುವ ನಿಟ್ಟಿನಲ್ಲಿ ತನ್ನ ಓಜೋನ್ ಸ್ಯಾನಿಟೈಸ್ಡ್ ಅನ್ನು ನೀಡುತ್ತಿದೆ. ಡಿಸ್ ಪ್ಯಾಚ್ ಹಬ್ ಗಳಲ್ಲಿ ಓಜೋನ್ ಏರ್ ಪ್ಯೂರಿಫೈಯರ್ ಅನ್ನು ಅಳವಡಿಸಲಾಗಿದ್ದು, ಎಲ್ಲಾ ಚಾಲಕ ಪಾಲುದಾರರಿಗೆ ತಮ್ಮ ಕ್ಯಾಬ್ ಗಳನ್ನು ಸ್ಯಾನಿಟೈಸ್ ಮಾಡುವಂತೆ ಉತ್ತೇಜನ ನೀಡುತ್ತದೆ. ಈ ಮೂಲಕ ಅತ್ಯಂತ ಹೆಚ್ಚು ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಲಾಗುತ್ತದೆ.
ಮೆರು ಚಾಲಕ ಪಾಲುದಾರರು ಫ್ಲಿಪ್ ಕಾರ್ಟ್ ನ ದಿನಸಿ ಉತ್ಪನ್ನಗಳನ್ನು ಗ್ರಾಹಕರಿಗೆ ಸುರಕ್ಷಿತವಾಗಿ ಮತ್ತು ಸಕಾಲದಲ್ಲಿ ತಲುಪಿಸುವ ಬಗೆ ಹೇಗೆಂಬುದರ ಬಗ್ಗೆ ಫ್ಲಿಪ್ ಕಾರ್ಟ್ ನಿಂದ ತರಬೇತಿ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಮೆರು ಕೋವಿಡ್ ವೈರಸ್ ಹರಡುವುದನ್ನು ತಪ್ಪಿಸಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಗಳನ್ನು ಧರಿಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತನ್ನ ಚಾಲಕರಿಗೆ ಅಗತ್ಯ ಜಾಗೃತಿಯನ್ನು ಮೂಡಿಸುತ್ತಿದೆ ಎಂದು ತಿಳಿಸಿದೆ.