ಮಣಿಪಾಲ: ಕೋವಿಡ್ ನಿಂದಾಗಿ ಇಡೀ ಜಗತ್ತು ಲಾಕ್‌ಡೌನ್‌ಗೆ ಒಳಗಾಗಿರುವ ಸಮಯದಲ್ಲಿ ಜಾಗತಿಕ ವಿಮಾನ ಯಾನ ಕ್ಷೇತ್ರಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ವಿಮಾನ ಯಾನ ಕ್ಷೇತ್ರ ಚೇತರಿಸಿಕೊಂಡಿತೇ ಎಂಬ ಆತಂಕ ಕಾಡುತ್ತಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಎಲ್ಲ ವಿಮಾನ ಯಾನ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಆದರ ಭಾಗವಾಗಿಯೇ ಹತ್ತಾರು ಮಾರ್ಗಸೂಚಿಗಳನ್ನು ರೂಪಿಸುತ್ತಿದ್ದು, ಪ್ರಯಾಣಿಕರ ಮೇಲೆ ಖಾಯಂ ಆಗಿ ಸಾಮಾಜಿಕ ಅಂತರ ನಿಯಮವನ್ನು ಹೇರಲು ಮುಂದಾಗಿದೆ. ಆ ಮೂಲಕ ಕೇವಲ ಶೇ.50ರಿಂದ ಶೇ.60ರಷ್ಟು ಆಸನಗಳನ್ನು° ಮಾತ್ರ ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗಿದ್ದು, ಈಗಾಗಲೇ ಈ ನಿಯಮವನ್ನು ಜಾರಿ ಮಾಡಲು ಎಮಿರೇಟ್ಸ್ , ಅಮೇರಿಕನ್ ಏರ್‌ಲೈನ್ಸ್, ಜಪಾನ್ ಏರ್‌ಲೈನ್ಸ್, ಯುನೈಟೆಡ್, ವಿಜ್ ಏರ್ ವಿಮಾನಯಾನ ಸಂಸ್ಥೆಗಳು ಮುಂದಾಗಿವೆ.
ಭಾರವಾಗಲಿದೆ ನಿಯಮಗಳು
ವಿಮಾನ ಯಾನ ಆರಂಭವಾದರೂ ಈ ಮರಣಾಂತಿಕ ಪಿಡುಗಿಗೆ ನಿಗದಿತ ಲಸಿಕೆ ದೊರೆಯುವವರೆಗೂ ಸುರಕ್ಷಾ ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆಯಿದೆ. ವಿಮಾನದ ಮಧ್ಯದ ಆಸನವನ್ನು ಖಾಲಿ ಬಿಡುವಂತೆ ನಿರ್ದೇಶನ ನೀಡಲಾಗಿದೆ.ಇದರಿಂದ ಆಗುವ ನಷ್ಟವನ್ನು ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವರ್ಗಾಯಿಸಿದರೆ ಟಿಕೇಟಿನ ದರ ಹೆಚ್ಚುವುದು ನಿಶ್ಚಿತ.
ಆದರೆ ಸದ್ಯ ತೈಲ ಮಾರುಕಟ್ಟೆ ಕುಸಿದಿದ್ದು, ವಿಮಾನಕ್ಕೆ ಬಳಸುವ ಇಂಧನ ದರವೂ ಇಳಿಕೆಯಾಗಿದೆ. ಈ ಒಂದು ಬೆಳವಣಿಗೆಯನ್ನು ಅವಲೋಕಿಸಿ ಹೇಳುವುದಾದರೆ ಸದ್ಯ ಪ್ರಯಾಣಕ್ಕೆ ಬೇಡಿಕೆ ಇದ್ದರೂ ತೈಲ ಬೆಲೆ ಕಡಿಮೆ ಇರುವ ಕಾರಣ ಟಿಕೆಟ್ ದರ ಸ್ಥಿರತೆ ಕಾಯ್ದುಕೊಳ್ಳಲಿದೆ.