Advertisement

ಫ್ಲೆಕ್ಸ್‌ ಕಂಡರೆ ಪೊಲೀಸರೇ ಹೊಣೆ

12:06 PM Aug 04, 2018 | Team Udayavani |

ಬೆಂಗಳೂರು: ಅನಧಿಕೃತ ಫ್ಲೆಕ್ಸ್‌ ತೆರವುಗೊಳಿಸಲು ತೆರಳಿದ ಪಾಲಿಕೆ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ನಗರ ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

Advertisement

ಫ್ಲೆಕ್ಸ್‌ ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅಥವಾ ಒಂದೇ ಒಂದು ಫ್ಲೆಕ್ಸ್‌ ಕಂಡು ಬಂದರೂ ಅದಕ್ಕೆ ನಗರ ಪೊಲೀಸ್‌ ಆಯುಕ್ತರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಹೈಕೋರ್ಟ್‌, ಬೆಂಗಳೂರು ಸಭ್ಯ ನಾಗರಿಕರ ನಗರವಾಗಿದೆ. ಇಲ್ಲಿ ಪುಂಡಾಟಿಕೆ, ಗೂಂಡಾ ಪ್ರವೃತ್ತಿ ಹೆಚ್ಚುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದೂ ಸ್ಪಷ್ಟವಾಗಿ ಹೇಳಿದೆ. 

ಫ್ಲೆಕ್ಸ್‌ ತೆರವು ಕುರಿತ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಗಾಗಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಹಾಗೂ ರಾಮಮೂರ್ತಿ ನಗರ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಆರ್‌. ಚಂದ್ರಧರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಸರ್ಕಾರಿ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಾರೆ ಎಂದರೆ ಏನರ್ಥ? ಇದೊಂದು ಗಂಭೀರ ಪ್ರಕರಣ. ಆರೋಪಿಗಳ ಹಿಂದಿರುವ “ಕುಮ್ಮಕ್ಕಿನ ಶಕಿ’¤ ಯಾವುದೆಂದು ಪತ್ತೆಹಚ್ಚಿ. ಕಾನೂನು ಸುವ್ಯವಸ್ಥೆ ಉಲ್ಲಂ ಸುವವರು ಯಾರೇ ಆಗಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ. ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಸಿಆರ್‌ಪಿಸಿ ಕಲಂ (120ಬಿ) ಅಡಿಯಲ್ಲಿ ಕೇಸು ದಾಖಲಿಸಿ ಎಂದು ಸೂಚಿಸಿತು.

ಘಟನೆಗೆ ಸಂಬಂಧಿಸಿದ ತನಿಖಾ ವರದಿ, ಫ್ಲೆಕ್ಸ್‌ ತೆರವಿಗೆ  ಕೈಗೊಂಡಿರುವ ಕ್ರಮಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ  ವೇಳೆ ಅಫಿಡವಿಟ್‌ ಸಲ್ಲಿಸುವಂತೆ ನಗರ ಪೊಲೀಸ್‌ ಆಯಕ್ತರಿಗೆ ನಿರ್ದೇಶಿಸಿರುವ ನ್ಯಾಯಪೀಠ, ಆಗಸ್ಟ್‌ 8ಕ್ಕೆ ವಿಚಾರಣೆ ಮುಂದೂಡಿತು.

Advertisement

ನ್ಯಾಯಪೀಠದ ನಿರ್ದೇಶನಗಳು
-ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳು ಎಲ್ಲಿಯೂ ಕಂಡು ಬರಬಾರದು
-ಪಾಲಿಕೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸಬೇಕು
-ಫ್ಲೆಕ್ಸ್‌ ತೆರವಿಗೆ ಹೋಗುವ ಅಧಿಕಾರಿಗಳಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು
-ಫ್ಲೆಕ್ಸ್‌ ಹಾಕುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಡಬೇಕು
-ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಿ
-ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧದ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ
-ತನಿಖೆ ಮುಗಿದ ಕೂಡಲೆ ವರದಿಯನ್ನು ಮ್ಯಾಜೀಸ್ಟ್ರೇಟ್‌ ಕೋರ್ಟ್‌ಗೆ ಸಲ್ಲಿಸಬೇಕು
-ಆರೋಪಿಗಳ ಜಾಮೀನು ಅರ್ಜಿಗಳು ನೇರವಾಗಿ ಹೈಕೋರ್ಟ್‌ಗೆ ವರ್ಗಾವಣೆಯಾಗಲಿ
-ಈ ಅರ್ಜಿಗಳನ್ನು ಹೈಕೋರ್ಟ್‌ ನ್ಯಾಯಪೀಠಗಳೇ ವಿಚಾರಣೆ ನಡೆಸಲಿವೆ

ಗುತ್ತಿಗೆದಾರರನ್ನು ಕೋರ್ಟ್‌ಗೆ ಹಾಜರುಪಡಿಸಿ!: ವಿಚಾರಣೆ ವೇಳೆ ಹಲ್ಲೆ ಘಟನೆ ಸಂಬಂಧ ಪತ್ರಿಕಾ ವರದಿಗಳನ್ನು ಉಲ್ಲೇಖೀಸಿದ ನ್ಯಾಯಮೂರ್ತಿಗಳು,  ಫ್ಲೆಕ್ಸ್‌ ತೆರವಿಗೆ ಅಡ್ಡಿ ಉಂಟು ಮಾಡುವ ಗುತ್ತಿಗೆದಾರರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ, ಜತೆಗೆ ಫ್ಲೆಕ್ಸ್‌ ತೆರವಿಗೆ ಹಿಂದೇಟು ಹಾಕುವ ಸಿಬ್ಬಂದಿಯನ್ನೂ ಕರೆತನ್ನಿ ಅವರಿಗೆ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ ಎಂದು ನ್ಯಾಯಾಧೀಶರು ಪೊಲೀಸರಿಗೆ ತಾಕೀತು ಮಾಡಿದರು.

ನಗರ ಪೊಲೀಸ್‌ ಆಯುಕ್ತರ ದೀಢೀರ್‌ ಸಭೆ!: ರಾಮಮೂರ್ತಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆ.2ರಂದು ಫ್ಲೆಕ್ಸ್‌ ತೆರವುಗೊಳಿಸುತ್ತಿದ್ದ ಪಾಲಿಕೆ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಪೊಲೀಸ್‌ ಇಲಾಖೆಯನ್ನು ತರಾಟೆ ತೆಗೆದುಕೊಂಡ ಬೆನ್ನಲ್ಲೇ, ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ಎಲ್ಲ ವಲಯಗಳ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ಗಳ ಜತೆ ತುರ್ತು ಸಭೆ ನಡೆಸಿದರು. ಈ ವೇಳೆ  ಫ್ಲೆಕ್ಸ್‌ ತೆರವು ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ತೆರವು ಕಾರ್ಯಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next