Advertisement

ಫ್ಲೆಕ್ಸ್‌ ತೆರವು ಗಡುವಿನಲ್ಲಿ ವಿನಾಯಿತಿ ಇಲ್ಲ; ಹೈಕೋರ್ಟ್‌ ತಾಕೀತು 

12:19 PM Aug 15, 2018 | Team Udayavani |

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್‌ಗಳ ತೆರವಿಗೆ ಕೊಡಲಾಗಿರುವ ಈ ತಿಂಗಳ ಅಂತ್ಯದ ಗಡುವಿನಲ್ಲಿ ಯಾವುದೇ ವಿನಾಯ್ತಿ ನೀಡುವುದಿಲ್ಲ ಎಂದು ಹೈಕೋರ್ಟ್‌ ಮಂಗಳವಾರ ಬಿಬಿಎಂಪಿಗೆ ಸ್ಪಷ್ಟವಾಗಿ ಹೇಳಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಮತ್ತು ನ್ಯಾ. ಆರ್‌.ದೇವದಾಸ್‌ ಅವರ ನೇತೃತ್ವದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ನೀಡಿರುವ ಗಡುವಿನಲ್ಲೇ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಖಡಕ್‌ ಸೂಚನೆ ಕೊಟ್ಟಿತು.

ಮಂಗಳವಾರದ ವಿಚಾರಣೆ ವೇಳೆ ಬಿಬಿಎಂಪಿ ವಕೀಲರ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಬಿಬಿಎಂಪಿಗೆ ಪ್ರತಿಯೊಂದು ಸಣ್ಣ ವಿಷಯವನ್ನೂ ನ್ಯಾಯಾಲಯವೇ ಹೇಳಬೇಕೇ? ಒಂದು ಕೌನ್ಸಿಲ್‌ ಸಭೆ ನಡೆಸಬೇಕಾದರೂ ನಾವೇ ಆದೇಶ ಮಾಡಬೇಕಾ? ಹಾಗಾದ್ರೆ ಅಧಿಕಾರಿಗಳು ಸಂಬಳ ತೆಗೆದುಕೊಳ್ಳುವುದಿಲ್ವಾ ಎಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಚಾಟಿ ಬೀಸಿತು.

200 ಚಾರ್ಜ್‌ಶೀಟ್‌ ಸಲ್ಲಿಕೆ
 ಇದೇ ವೇಳೆ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 223 ಪ್ರಕರಣಗಳಲ್ಲಿ 200 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 23 ಪ್ರಕರಣಗಳಲ್ಲಿ ಆರೋಪಿಗಳ ಫೋನ್‌ ನಂಬರ್‌ ಬಿಟ್ಟರೆ ಬೇರೆ ಮಾಹಿತಿ ಸಿಕ್ಕಿಲ್ಲ. ಆ ನಂಬರ್‌ಗಳೂ ಸಹ ಸ್ವಿಚ್‌ಆಫ್ ಆಗಿವೆ, ಹೀಗಾಗಿ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ. ಈ ಪ್ರಕರಣಗಳಿಗೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕ ಮಾಡಲಾಗಿದೆ. ಉಳಿದ ಆರೋಪಿಗಳನ್ನು ಮಂಗಳವಾರ ಸಂಜೆ ವೇಳೆಗೆ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಆ.17ಕ್ಕೆ ಮುಂದೂಡಿತು.

ಅಫಿಡವಿಟ್‌ ವಿಳಂಬಕ್ಕೆ ಗರಂ: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ಇನ್ನೂ ಎರಡು ದಿನಗಳ ಕಾಲ ಸಮಯ ಕೇಳಿತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯ ಪೀಠ, ಬಿಬಿಎಂಪಿಯ ವಿಳಂಬ ನೀತಿಯನ್ನು ಕಟುವಾಗಿ ಟೀಕಿಸಿತು.

Advertisement

ಕಟೌಟ್‌ ತೆರವಿಗೆ 2 ವಾರ ಗಡುವು
ಬೆಂಗಳೂರು:
ನಗರದಲ್ಲಿ ನಿರಂತರ ಹೋರ್ಡಿಂಗ್‌ ತೆರವು ಕಾರ್ಯಾಚರಣೆ ನಂತರ ಅವುಗಳ ಸ್ಟ್ರಕ್ಚರ್‌ (ಕಟೌಟ್‌ಗಳು)ಗಳು ಹಾಗೇ ಉಳಿದಿದ್ದು, ಅವುಗಳ ತೆರವಿಗೂ ಎರಡು ವಾರಗಳ ಗಡವು ವಿಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

ಬುಧವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳ ಅಂತರದಲ್ಲಿ ನಗರದಲ್ಲಿನ 21,400 ಫ್ಲೆಕ್ಸ್‌, ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದ್ದು, 12 ಜನರ ವಿರುದ್ಧ ಪಾಲಿಕೆಯು ಮತ್ತು 211 ಜನರ ವಿರುದ್ಧ ಪೊಲೀಸ್‌ ಇಲಾಖೆಯು 212 ಸೇರಿ ಒಟ್ಟಾರೆ 223 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ತ್ವರಿತ ಕ್ರಮಕ್ಕೆ ಚಾರ್ಜ್‌ಶೀಟ್‌ಗಳನ್ನೂ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಈ ಮಧ್ಯೆ ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದ ನಂತರ ಅವುಗಳ ಸ್ಟ್ರಕ್ಚರ್‌ಗಳಿಂದ ನಗರದ ಅಂದ ಹಾಳಾಗಲಿದೆ. ಆದರೆ, ಆ ಸ್ಟ್ರಕ್ಚರ್‌ ಗಳು ಮಳಿಗೆಗಳು, ಮನೆಗಳ ಕಾಂಪೌಂಡ್‌ಗಳು ಸೇರಿದಂತೆ ಖಾಸಗಿ ಜಾಗದಲ್ಲಿವೆ. ಹಾಗಾಗಿ, ಅವುಗಳ ತೆರವಿಗೆ ಆಯಾ ಹೋರ್ಡಿಂಗ್‌ಗಳ ಮಾಲೀಕರಿಗೆ ಎರಡು ವಾರಗಳ ಗಡವು ನೀಡಲಾಗಿದೆ ಎಂದು ಹೇಳಿದರು.

ಅದೇ ರೀತಿ, ಗೋಡೆ ಬರಹ ಮತ್ತು 66,032 ಪೋಸ್ಟರ್‌ಗಳನ್ನೂ ತೆರವುಗೊಳಿಸಿ, ಆ ಜಾಗದಲ್ಲಿ ಅಗ್ಲಿ ಇಂಡಿಯನ್ಸ್‌ ಸಂಸ್ಥೆ ಸಹಯೋಗದಲ್ಲಿ ಪೇಂಟಿಂಗ್‌ ಮಾಡಲಾಗಿದೆ. ಗೋಡೆಬರಹ ಯಾರು ಬರೆದಿದ್ದಾರೆ ಎಂಬುದನ್ನು ಫೋಟೋ ಸಹಿತ ದಾಖಲಿಸಲಾಗಿದೆ. ತೆರವು ಮತ್ತು ಪೇಂಟಿಂಗ್‌ಗೆ ತಗಲುವ ವೆಚ್ಚವನ್ನು ಗೋಡೆ ಮೇಲೆ ಬರೆದವರಿಂದ ವಸೂಲು ಮಾಡಲಾಗುವುದು ಎಂದರು.

ಇನ್ನು ನಗರದಲ್ಲಿರುವ ಅನಧಿಕೃತ ಅಳವಡಿಸಲಾಗಿದ್ದ 504 ಕಿ.ಮೀ. ಉದ್ದದ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಓಎಫ್ಸಿ)ಗಳನ್ನೂ ತೆರವುಗೊಳಿಸಲಾಗಿದೆ. ಆದರೆ, ಓಎಫ್ಸಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ “ಕರ್ನಾಟಕ ಇನ್‌ಸ್ಟಾಲೇಷನ್‌ ಆಫ್ ನ್ಯೂ ಟೆಲಿಕಮ್ಯುನಿಕೇಷನ್‌ ಇನ್‌ಫ್ರಾಸ್ಟ್ರಕ್ಚರ್‌ ಟವರ್ ರೆಗ್ಯುಲೇಷನ್‌’ ಕರಡು ಮಾತ್ರ ಪ್ರಕಟಿಸಿದೆ. ಅಂತಿಮ ನಿಯಮಾವಳಿ ಇನ್ನೂ ಹೊರಬರಬೇಕಿದೆ. ಅಲ್ಲಿಯವರೆಗೆ ಸ್ವಯಂಘೋಷಣೆ ಮಾಡಿಕೊಂಡ ಸಂಸ್ಥೆಗಳಿಗೆ ಕರಡಿನಲ್ಲಿ ಸೂಚಿಸಲಾದ ಶುಲ್ಕ 50 ಸಾವಿರ ರೂ. ವಿಧಿಸಲಾಗುತ್ತಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next