ನೆರೆಯ ಶ್ರೀಲಂಕಾ ತೀವ್ರ ಹಣಕಾಸು ಮುಗ್ಗಟ್ಟಿನಿಂದ ಕಂಗಾಲಾಗಿದ್ದು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಶ್ರೀಲಂಕಾದಲ್ಲಿಯೂ ಸಾಮೂಹಿಕವಾಗಿ ಜನರು ವಲಸೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ ಜಾಫ್ನಾ ಮತ್ತು ಮನ್ನಾರ್ ಪ್ರದೇಶದಲ್ಲಿನ 16 ಮಂದಿ ಶ್ರೀಲಂಕಾ ಪ್ರಜೆಗಳು (ಮೂಲ ತಮಿಳರು) ಮಂಗಳವಾರ ತಮಿಳುನಾಡಿಗೆ ಬಂದು ತಲುಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೈಸೂರು ವಿವಿ ಘಟಿಕೋತ್ಸವ: ಗಾರೆ ಕೆಲಸ ಮಾಡಿಕೊಂಡೇ 14 ಚಿನ್ನದ ಪದಕ ಗೆದ್ದ ಮಹದೇವಸ್ವಾಮಿ
ಮೂವರು ಮಕ್ಕಳು ಸೇರಿದಂತೆ ಆರು ಮಂದಿ ನಿರಾಶ್ರಿತರು ರಾಮೇಶ್ವರಂ ಕರಾವಳಿ ಪ್ರದೇಶದಲ್ಲಿದ್ದು, ಅವರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದ್ದು, ಎರಡನೇ ತಂಡ ಮಂಗಳವಾರ ರಾತ್ರಿ ತಮಿಳುನಾಡಿಗೆ ಆಗಮಿಸಿದೆ.
ಶ್ರೀಲಂಕಾದಲ್ಲಿ ನಿರುದ್ಯೋಗ, ಆಹಾರದ ಕೊರತೆಯ ತಾಂಡವ:
ದ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಶ್ರೀಲಂಕಾದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಆಹಾರದ ಕೊರತೆಯ ಪರಿಣಾಮ ನಿರಾಶ್ರಿತರು ಪಲಾಯನ ಮಾಡುತ್ತಿದ್ದಾರೆ. ಉತ್ತರ ಭಾಗದ ತಮಿಳು ಪ್ರಾಬಲ್ಯದ ಪ್ರದೇಶಗಳಲ್ಲಿ ಕೇವಲ ಇದೊಂದು ಆರಂಭಿಕ ಹಂತ ಎಂಬುದರ ಮುನ್ಸೂಚನೆಯಾಗಿದ್ದು, ಮುಂಬರುವ ವಾರಗಳಲ್ಲಿ ಅಂದಾಜು 2000 ನಿರಾಶ್ರಿತರು ತಮಿಳುನಾಡಿಗೆ ವಲಸೆ ಹೋಗುವ ಸಾಧ್ಯತೆ ಇದ್ದಿರುವುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಆರು ನಿರಾಶ್ರಿತರನ್ನು ಗಜೇಂದ್ರನ್ (24ವರ್ಷ), ಆತನ ಪತ್ನಿ ಮೇರಿ ಕ್ಲಾರಿನ್ (22ವರ್ಷ), ನಾಲ್ಕು ತಿಂಗಳ ಮಗು ನಿಜತ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಟಿಯೊರಿ ಅನಿಸ್ತಾನ್ (28ವರ್ಷ), ಆಕೆಯ ಮಕ್ಕಳಾದ ಮೋಸೆಸ್(6ವರ್ಷ) ಮತ್ತು ಎಸ್ತರ್ (9ವರ್ಷ) ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವಾರು ವಾರಗಳಿಂದ ಆಹಾರಕ್ಕಾಗಿ ಒದ್ದಾಡುತ್ತಿದ್ದು, ಕೊನೆಗೆ ಬಲವಂತದಿಂದ ನಾವು ಪಲಾಯನ ಮಾಡಿರುವುದಾಗಿ ಆರು ಮಂದಿ ನಿರಾಶ್ರಿತರು ತಮಿಳುನಾಡು ಪೊಲೀಸರಿಗೆ ತಿಳಿಸಿದ್ದಾರೆ. ನಿರಾಶ್ರಿತರ ಹೇಳಿಕೆ ಪ್ರಕಾರ, ಭಾರತೀಯ ಜಲಪ್ರದೇಶದ ನಾಲ್ಕನೇ ದ್ವೀಪ ಪ್ರದೇಶವಾದ ಅರಿಚಾಲ್ ಮುನಾಯ್ ನಲ್ಲಿ ಮೀನುಗಾರರು ನಮ್ಮನ್ನು ಬಿಟ್ಟಿದ್ದು, ಅವರಿಗೆ 50,000 ರೂಪಾಯಿ ಪಾವತಿಸಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ. ಆಹಾರ, ಇಂಧನ ಕೊರತೆ ಮತ್ತು ಆದಾಯ ಇಲ್ಲದ ಪರಿಣಾಮ ಇನ್ನೂ ಸಾವಿರಾರು ಮಂದಿ ಭಾರತಕ್ಕೆ ಪಲಾಯನ ಮಾಡಲು ದಾರಿಯನ್ನು ಹುಡುಕುತ್ತಿದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಎರಡನೇ ನಿರಾಶ್ರಿತರ ತಂಡ ಫೈಬರ್ ಬೋಟ್ ನಲ್ಲಿ ಕಳೆದ ರಾತ್ರಿ ಮನ್ನಾರ್ ಕರಾವಳಿ ಪ್ರದೇಶಕ್ಕೆ ಬಂದಿದ್ದು, ತಮ್ಮ ಪ್ರಯಾಣಕ್ಕಾಗಿ ಮೂರು ಲಕ್ಷ ರೂಪಾಯಿ ವ್ಯಯಿಸಿರುವುದಾಗಿ ತಿಳಿಸಿದೆ. ಸಮುದ್ರದ ಮಧ್ಯದಲ್ಲಿ ಬೋಟ್ ಅನ್ನು ರಿಪೇರಿ ಮಾಡಿ, ಮಂಗಳವಾರ ರಾತ್ರಿ 9ಗಂಟೆಗೆ ರಾಮೇಶ್ವರಂನ ಪಂಬನ್ ಸೇತುವೆ ಬಳಿ ತಲುಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೂರಾರು ಕುಟುಂಬಗಳು ಶ್ರೀಲಂಕಾ ಬಿಟ್ಟು ತೆರಳಲು ಸಿದ್ಧತೆ ನಡೆಸಿರುವುದಾಗಿ ಮನ್ನಾರ್ ಪ್ರದೇಶದ ಕಾರ್ಯಕರ್ತ ವಿ.ಎಸ್ ಶಿವಕರನ್ ತಿಳಿಸಿದ್ದು, ಇದು ದೊಡ್ಡ ಪ್ರಮಾಣದ ವಲಸೆಗೆ ಕಾರಣವಾಗಲಿದೆ ಎಂದಿದ್ದಾರೆ. ಭಾರತದಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಕೆಲವರಿಗೆ ಸಂಬಂಧಿಕರಿದ್ದಾರೆ. ಕೆಲವರು ತಮಿಳುನಾಡಿನೊಂದಿಗೆ ಸಂಪರ್ಕ ಹೊಂದಿದ್ದಾರೆ. ಶ್ರೀಲಂಕಾದಲ್ಲಿ ಮುಂದೇನಾಗಬಹುದು ಎಂಬ ಭಯ ಹೆಚ್ಚಾಗತೊಡಗಿದೆ. ಅದಕ್ಕೆ ಕಾರಣ ಮುಂದಿನ ಒಂದು ವಾರದಲ್ಲಿ ಶ್ರೀಲಂಕಾದಲ್ಲಿ ಒಂದು ಕೆಜಿ ಅಕ್ಕಿಯ ಬೆಲೆ 500 ರೂಪಾಯಿಗಗೆ ಏರಿಕೆಯಾಗಲಿದೆ. ಇಂದು ಒಂದು ಕೆಜಿ ಅಕ್ಕಿ ಬೆಲೆ 290 ರೂಪಾಯಿ, ಒಂದು ಕೆಜಿ ಸಕ್ಕರೆ ಬೆಲೆ 300 ರೂ. ಹಾಗೂ 400 ಗ್ರಾಮ್ ಹಾಲಿನ ಪುಡಿಗೆ 790 ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಶಿವಕರನ್ ವಿವರ ನೀಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶ್ರೀಲಂಕಾ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪೇಪರ್ ಖರೀದಿಸಲು ಹಣವಿಲ್ಲದೇ ಶಾಲಾ ಮಕ್ಕಳ ಪರೀಕ್ಷೆಯನ್ನೇ ಮುಂದೂಡಿದೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಾಗಿದೆ.
1989ರಲ್ಲಿ ನಾಗರಿಕ ಯುದ್ಧ ಆರಂಭವಾದ ಸಂದರ್ಭದಲ್ಲಿಯೂ ಇದೇ ರೀತಿಯಲ್ಲಿ ಜನರು ವಲಸೆ ಹೋಗಿರುವುದಕ್ಕೆ ಸಾಕ್ಷಿಯಾಗಿತ್ತು. ಸುಮಾರು 2009ರ ಹೊತ್ತಿಗೆ ಯುದ್ಧದ ಬಿಕ್ಕಟ್ಟು ಕೊನೆಗೊಂಡ ನಂತರವೇ ಜನ ವಲಸೆ ಹೋಗುವುದಕ್ಕೆ ತೆರೆಬಿದ್ದಿತ್ತು. ಅಂದಿನಿಂದ ಲಂಕಾದ ತಮಿಳರು ಮೀನುಗಾರಿಕೆ ಬೋಟ್ ಗಳಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಕೆಲವು ಪ್ರತ್ಯೇಕ ಪ್ರಕರಣಗಳು ಮಾತ್ರ ಕಂಡು ಬಂದಿದ್ದವು. ಈಗಾಗಲೇ ಭಾರತ ಶ್ರೀಲಂಕಾಕ್ಕೆ ಒಂದು ಬಿಲಿಯನ್ ಡಾಲರ್ ಆರ್ಥಿಕ ಸಹಾಯದ ನೆರವನ್ನು ನೀಡಿತ್ತು. ಅಲ್ಲದೇ ಶ್ರೀಲಂಕಾ ಸರ್ಕಾರ ಕೂಡಾ ಹಣಕಾಸು ನೆರವು ನೀಡುವಂತೆ ಐಎಂಎಫ್ ಮತ್ತು ಚೀನಾದ ಮೊರೆ ಹೋಗಿದೆ.