Advertisement

ಹಲವರಿಗೆ ಲಕ್ಷಾಂತರ ರೂ. ವಂಚನೆ

02:37 AM Jan 30, 2020 | Team Udayavani |

ಮಂಗಳೂರು: ವಿದೇಶ ಅಥವಾ ದೂರದ ಊರುಗಳಲ್ಲಿರುವ ಫ್ಲ್ಯಾಟ್‌ ಮಾಲಕರಿಂದ ಫ್ಲ್ಯಾಟ್‌ ಅನ್ನು ಬಾಡಿಗೆಗೆ ಪಡೆದು ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಲೀಸ್‌ಗೆ ಕೊಟ್ಟು ವಂಚಿಸುವ ಜಾಲವೊಂದು ಮಂಗಳೂರಿನಲ್ಲಿ ಕಾರ್ಯಾ ಚರಿಸುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು, 6ಕ್ಕೂ ಅಧಿಕ ಮಂದಿಗೆ ಇದೇ ರೀತಿ 50 ಲ.ರೂ. ಗಳಿಗೂ ಹೆಚ್ಚು ವಂಚಿಸಿರುವ ಆರೋಪ ಕೇಳಿಬಂದಿವೆ. ಈ ಸಂಬಂಧ ಅತ್ತಾವರದ ಮೊಹಮ್ಮದ್‌ ನಝೀರ್‌, ಉಳ್ಳಾಲದ ಇಮ್ತಿಯಾಜ್‌ ಮತ್ತು ಅಬ್ದುಲ್‌ ಅಝೀಜ್‌ ವಿರುದ್ಧ ಬೆಂದೂರ್‌ವೆಲ್‌ನ ಅಬ್ದುಲ್‌ ಫಾರೂಕ್‌ ಪಿ.ಎಸ್‌. ಅವರು ದೂರು ಸಲ್ಲಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಬ್ದುಲ್‌ ಫಾರೂಕ್‌ ಮತ್ತು ಯು.ಎಂ.ಸಯೀದ್‌ ಅವರು, “ನಾವು ಫ್ಲ್ಯಾಟ್‌ಗಳನ್ನು ಲೀಸ್‌ಗೆ ಪಡೆದು ವಂಚನೆಗೊಳಗಾಗಿದ್ದೇವೆ. ನಮಗೆ ಒಟ್ಟು 23 ಲ.ರೂ. ವಂಚಿಸಲಾಗಿದೆ. ಈ ಬಗ್ಗೆ 2019ರ ಜು.8ರಂದು ಕದ್ರಿ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಮಾತ್ರವಲ್ಲದೆ ಕಾರ್ತಿಕ್‌ ಮತ್ತು ಸ್ಟೀವನ್‌ ಎಂಬವರಿಗೂ ತಲಾ 8 ಲ.ರೂ. ಸಹಿತ 6ಕ್ಕೂ ಅಧಿಕ ಮಂದಿಗೆ ವಂಚಿಸಿರುವ ಮಾಹಿತಿ ದೊರೆತಿದೆ. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಬೇಕು’ಎಂದು ಆಗ್ರಹಿಸಿದರು.

ನಕಲಿ ದಾಖಲೆ ಸೃಷ್ಟಿ
ಹೆಚ್ಚಾಗಿ ವಿದೇಶದಲ್ಲಿರುವ ಫ್ಲ್ಯಾಟ್‌ ಮಾಲಕರಿಂದ ಫ್ಲ್ಯಾಟ್‌ ಅನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತದೆ. ಅನಂತರ ಲೀಸ್‌ಗೆ ಫ್ಲ್ಯಾಟ್‌ ಇದೆ ಎಂದು ಜಾಹೀರಾತು ನೀಡಲಾಗುತ್ತದೆ. ಬಳಿಕ ಮೂವರು ಆರೋಪಿಗಳ ಪೈಕಿ ಇಬ್ಬರು ಫ್ಲ್ಯಾಟ್‌ನ ಮಾಲಕರಂತೆ, ಇನ್ನೋರ್ವ ಮಧ್ಯವರ್ತಿಯಂತೆ ವರ್ತಿಸುತ್ತಾರೆ. ಅನಂತರ ಎಲ್ಲ ಕಾಗದ ಪತ್ರಗಳನ್ನು (ನಕಲಿ) ತಯಾರಿಸಿ 10ರಿಂದ 15 ಲ.ರೂ. ಪಡೆದು 3 ವರ್ಷಗಳಿಗೆ ಲೀಸ್‌ಗೆ ಕೊಡುತ್ತಾರೆ. ಕೆಲವು ಸಮಯದವರೆಗೆ ವಿದೇಶದಲ್ಲಿರುವ ಮಾಲಕರಿಗೆ ಬಾಡಿಗೆ ನೀಡುತ್ತಿರುತ್ತಾರೆ. ಬಳಿಕ ನಿಲ್ಲಿಸುತ್ತಾರೆ.

ನಿಜವಾದ ಮಾಲಕರು ಫ್ಲ್ಯಾಟ್‌ ಅನ್ನು ಬಿಡಿಸಿಕೊಳ್ಳಲು ಬರುವಾಗ ವಂಚನೆಯ ಅರಿವಾಗುತ್ತದೆ. ಇದೊಂದು ವ್ಯವಸ್ಥಿತ ವಂಚನೆಯ ಜಾಲವಾಗಿದ್ದು, ಹಂಝ ಎಂಬವರಿಗೆ ಇದೇ ರೀತಿ 28 ಲ.ರೂ. ವಂಚಿಸಲಾಗಿದೆ’ ಎಂದು ಅಬ್ದುಲ್‌ ಫಾರೂಕ್‌ ಹೇಳಿದರು. ಕಾರ್ತಿಕ್‌ ಪತ್ರಿಕಾ ಗೋಷ್ಠಿಯಲ್ಲಿದ್ದರು.

Advertisement

ದುಬಾೖಯಿಂದ ಕರೆ !
“ನಾನು ಲೀಸ್‌ಗೆ ಫ್ಲ್ಯಾಟ್‌ ಹುಡುಕುತ್ತಿದ್ದಾಗ ಮಹಮ್ಮದ್‌ ನಝೀರ್‌ ಎಂಬ ಬ್ರೋಕರ್‌ನ ಪರಿಚಯವಾಯಿತು. ಆತ “ಬೆಂದೂರ್‌ವೆಲ್‌ನಲ್ಲಿ ಫ್ಲ್ಯಾಟ್‌ ಇದ್ದು, ಅದರ ಮಾಲಕ ವಿದೇಶದಲ್ಲಿದ್ದು, ಅವರ ತಮ್ಮ ಇಮ್ತಿಯಾಜ್‌ ಊರಿನಲ್ಲಿದ್ದಾನೆ’ ಎಂದು ಇಮ್ತಿಯಾಜ್‌ನನ್ನು ಪರಿಚಯಿಸಿದ. ಇಮ್ತಿಯಾಜ್‌ ನನ್ನ ಜತೆ ಮಾತನಾಡಿ “ಲೀಸ್‌ಗೆ ನೀಡಬೇಕಾದರೆ ಅಕೌಂಟ್‌ಗೆ 11 ಲ.ರೂ. ಡಿಪಾಸಿಟ್‌ ಮಾಡಬೇಕು’ ಎಂದು ತಿಳಿಸಿದ್ದಾನೆ.

ಅನಂತರ ದುಬಾೖಯಿಂದ ಮಾಲಕ ಸಯ್ಯದ್‌ ಹುಸೈನ್‌ ಸಯ್ಯದ್‌ ಮುನೀರ್‌ ಹೆಸರಿನಲ್ಲಿ ವ್ಯಕ್ತಿ ಯೋರ್ವ ಕರೆ ಮಾಡಿ ಹಣವನ್ನು ಬ್ಯಾಂಕ್‌ ಖಾತೆಗೆ ಹಾಕಲು ತಿಳಿಸಿದ್ದಾನೆ. ಅದರಂತೆ ನಾನು ಅಕೌಂಟ್‌ಗೆ
10 ಲ.ರೂ. ಹಾಗೂ ಬ್ರೋಕರ್‌ಗೂ ಹಣ ಕೊಟ್ಟೆ. ಬಳಿಕ ವಂಚನೆ ಗಮನಕ್ಕೆ ಬಂತು ಎಂದು ಅವರು ತಿಳಿಸಿದ್ದಾರೆ.

ತನಿಖೆ ನಡೆಯುತ್ತಿದೆ: ಪೊಲೀಸರು
ಈ ಪ್ರಕರಣದ ಕುರಿತು ಕದ್ರಿ ಠಾಣಾಧಿ ಕಾರಿಯವರನ್ನು “ಉದಯವಾಣಿ’ ಸಂಪರ್ಕಿಸಿದಾಗ “ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಹರ್ಷಾ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next