Advertisement

ಬೀದಿ ನಾಯಿಗಳ ಕೊರಳಿಗೆ ಮಿನುಗುವ ರಿಫ್ಲೆಕ್ಟರ್‌ ಬೆಲ್ಟ್

05:26 AM Mar 21, 2019 | |

ಮಹಾನಗರ: ಬೀಚ್‌, ರಸ್ತೆ ಇನ್ನಿತರ ಪ್ರದೇಶಗಳಲ್ಲಿ ನೂರಾರು ಬೀದಿನಾಯಿಗಳು ಓಡಾಡುತ್ತಿದ್ದು, ಕೆಲವೊಂದು ನಾಯಿಗಳು ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತವೆ. ಇದನ್ನು ತಡೆಯುವ ಉದ್ದೇಶದಿಂದ ಮಂಗಳೂರಿನ ಯುವಕನೊಬ್ಬ ಬೀದಿ ನಾಯಿಗಳ ಕೊರಳಿಗೆ ಮಿನುಗುವ ರಿಪ್ಲೆಕ್ಟರ್‌ ಬೆಲ್ಟ್ ಅಳವಡಿಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

Advertisement

ನಗರದ ಎನಿಮಲ್‌ ಕೇರ್‌ನ ಸದಸ್ಯ ತೌಸಿಫ್‌ ಅವರು ಈ ಮಾದರಿ ಕಾರ್ಯ ನಡೆಸಲು ಮುಂದಾಗಿದ್ದು, ಅನೇಕ ವರ್ಷಗಳಿಂದ ಪ್ರಾಣಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ತತ್‌ಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ, ಬೀದಿ ನಾಯಿಗಳ ರಕ್ಷಣೆ ಮಾಡಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ನಾಯಿಗಳು ವಾಹನ ಅಪಘಾತಕ್ಕೆ ಸಿಲುಕಿ ಮರಣ ಹೊಂದುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ನೂತನ ಮಾದರಿಯನ್ನು ಪರಿಚಯಿಸಿದ್ದಾರೆ. ನಗರದಲ್ಲಿ ಓಡಾಡುವ ಸುಮಾರು 50 ಬೀದಿ ನಾಯಿಗಳಿಗೆ ಈಗಾಗಲೇ ಕೊರಳಪಟ್ಟಿಯನ್ನು ಅಳವಡಿಸಲಾಗಿದೆ.

ಸುಮಾರು 200 ಕೊರಳ ಪಟ್ಟಿಯನ್ನು ಇಂಧೋರ್‌ನಿಂದ ತರಿಸಲಾಗಿದೆ. ಅವುಗಳಲ್ಲಿ 100 ಕೊರಳಪಟ್ಟಿಗೆ ತಾವೇ ಸ್ವಂತ ಹಣ ಹಾಕಿದ್ದು, ಉಳಿದ 100 ಪಟ್ಟಿಗೆ ಪ್ರಾಯೋಜಕರು ಹಣ ನೀಡಿದ್ದಾರೆ. ಒಟ್ಟಾರೆಯಾಗಿ ನಗರದಲ್ಲಿರುವ ಸುಮಾರು 500 ಬೀದಿ ನಾಯಿಗಳಿಗೆ ಮಿನುಗುವ ರಿಪ್ಲೆಕ್ಟರ್‌ ಕೊರಳ ಪಟ್ಟಿ ಅಳವಡಿಸುವ ಯೋಜನೆ ತೌಸಿಫ್‌ ಅವರದ್ದು.

ಒಂದು ಬೆಲ್ಟ್ ಗೆ  40 ರೂ.
ಬೀದಿ ನಾಯಿಗಳು ಹೆಚ್ಚಾಗಿ ಇರುವ ಮತ್ತು ಅವುಗಳಿಂದ ಅಪಘಾತಗಳು ನಡೆಯುವ ಪ್ರದೇಶಗಳಾದ ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್‌ಗೇಟ್‌ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಿನ ನಾಯಿಗಳ ಕೊರಳಿಗೆ ರಿಫ್ಲೆಕ್ಟರ್‌ ಬೆಲ್ಟ್‌ಗಳನ್ನು ಹಾಕಲಾಗಿದೆ. 
ಅಂದಹಾಗೆ, ಈ ಒಂದು ಬೆಲ್ಟ್ಗೆ ಸುಮಾರು 40 ರೂ. ವೆಚ್ಚ ತಗುಲುತ್ತಿದ್ದು, ತೌಸಿಫ್‌ ಅವರ ಈ ಮಾದರಿಯನ್ನು ಮೆಚ್ಚಿ ಪ್ರಾಣಿ ಪ್ರಿಯರೊಬ್ಬರು ಇದೇ ವಿಧಾನವನ್ನು ಉಡುಪಿ ಸುತ್ತಮುತ್ತಲೂ ಅಳವಡಿಸಲು ಮುಂದಾಗಿದ್ದಾರೆ.

Advertisement

ಅಪಘಾತ ತಡೆಯಲು ಸಹಕಾರಿ
ನಾಯಿಗಳ ಕೊರಳಿಗೆ ರಿಪ್ಲೆಕ್ಟರ್‌ ಬೆಲ್ಟ್ಅಳವಡಿಸುವುದರಿಂದ ನಾಯಿಯ ಜೀವ ಉಳಿಯುವ ಜತೆ ವಾಹನ ಸವಾರರ ಜೀವವೂ ಉಳಿಯುತ್ತದೆ. ಅನೇಕ ಬಾರಿ ವಾಹನಗಳು ನಾಯಿಗಳಿಗೆ ಢಿಕ್ಕಿ ಹೊಡೆದು ಸವಾರರಿಗೂ ಅವಘಡ ಸಂಭವಿಸಿದ ಉದಾಹರಣೆಗಳಿವೆ. ಇದನ್ನು ತಡೆಯಲು ರಿಪ್ಲೆಕ್ಟರ್‌ ಬೆಲ್ಟ್ ನೆರವಾಗುತ್ತದೆ.
 - ತೌಸಿಫ್‌, ಪ್ರಾಣಿಪ್ರಿಯ

ರಿಫ್ಲೆಕರ್‌ ಬೆಲ್ಟ್  ಉಪಯೋಗ
ನಗರದ ರಸ್ತೆಗಳಲ್ಲಿ ಅಪಘಾತ ತಪ್ಪಿಸುವ ಉದ್ದೇಶದಿಂದ ರಸ್ತೆ ಬದಿಯ ಕಂಬಗಳಿಗೆ ಹಾಕುವಂತಹ ರೀತಿಯ ಬೆಲ್ಟ್ ಮಾದರಿಯನ್ನು ನಾಯಿಗಳಿಗೂ ಹಾಕಲಾಗುತ್ತದೆ. ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುಗುತ್ತದೆ. ಈ ಸಮಯದಲ್ಲಿ ನಾಯಿಯ ಚಲನವಲನ ಬೈಕ್‌ ಸವಾರನಿಗೆ ದೂರದಿಂದಲೇ ತಿಳಿಯುತ್ತದೆ. ಇದರಿಂದಾಗಿ ವಾಹನ ಸವಾರರ ಮುನ್ನೆಚ್ಚರಿಕೆಗೆ ಸಹಕಾರಿಯಾಗುತ್ತದೆ.

ದನಗಳ ಕೊರಳಿಗೂ ಅಳವಡಿಕೆ 
ಸುರತ್ಕಲ್‌, ಪಣಂಬೂರು ಸಹಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಅಪಘಾತಕ್ಕೆ ದನಗಳು ಸಾವನ್ನಪ್ಪುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ದನಗಳ ಕೊರಳಿಗೂ ರಿಪ್ಲೆಕ್ಟರ್‌ ಪಟ್ಟಿ ಅಳವಡಿಸುವ ಚಿಂತನೆಯನ್ನು ತೌಸಿಫ್‌ ಅವರು ಮಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಿಪ್ಲೆಕ್ಟರ್‌ ಉತ್ಪಾದನ ಸಂಸ್ಥೆಯ ಜತೆ ಮಾತುಕತೆ ನಡೆಸಲಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next