Advertisement

ಉಪಸಮರದಲ್ಲಿ ಅಬ್ಬರದ ಪ್ರಚಾರ

04:33 PM Nov 19, 2019 | Team Udayavani |

ಹಾವೇರಿ: ಜಿಲ್ಲೆಯ ವಿಧಾನಸಭೆ ಉಪಚುನಾವಣೆ ನಡೆಯುವ ಹಿರೇಕೆರೂರು ಹಾಗೂ ರಾಣಿಬೆನ್ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿರುಸಿನ ಮತ ಪ್ರಚಾರ ಶುರುವಾಗಿದೆ.

Advertisement

ನಾಮಪತ್ರ ಸಲ್ಲಿಕೆ ವೇಳೆಯಲ್ಲಿಯೇ ಘಟಾನುಘಟಿ ಅಭ್ಯರ್ಥಿಗಳು ತಮ್ಮ ಜನಶಕ್ತಿ ಪ್ರದರ್ಶಿಸಿದ್ದು, ಆಯಾ ಪಕ್ಷದ ರಾಜ್ಯ ಮಟ್ಟದ ಮುಖಂಡರು ಸಹ ಕ್ಷೇತ್ರಕ್ಕೆ ಕಾಲಿಟ್ಟು ಪ್ರಚಾರ, ಗೆಲ್ಲುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ತಮ್ಮ ಅಭ್ಯರ್ಥಿಯ ಗೆಲುವಿಗೆ ಅಗತ್ಯ ತಂತ್ರಗಾರಿಕೆ ಹೆಣೆಯುತ್ತಿರುವ ಮುಖಂಡರಿಂದ ಮತ ಸೆಳೆಯುವ ತಂತ್ರ, ಪ್ರತಿಸ್ಪಧಿ ì ಹಾಗೂ ಅವರ ಪಕ್ಷಗಳ ವಿರುದ್ಧ ಆರೋಪ, ಪ್ರತ್ಯಾರೋಪಗಳ

ಸುರಿಮಳೆ ಶುರುವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ ಸೆಳೆಯಲು ಹತ್ತು ಹಲವು ರೀತಿಯ ತಂತ್ರಗಾರಿಕೆಯನ್ನು ರೂಪಿಸಿಕೊಂಡಿದ್ದರೆ, ಇತ್ತ ಪ್ರಾದೇಶಿಕ ಪಕ್ಷಗಳಿಂದ ಸ್ಪರ್ಧೆಗಿಳಿದವರು, ಪಕ್ಷೇತರ ಅಭ್ಯರ್ಥಿಗಳು ಹೆಚ್ಚು ಮತ ಸೆಳೆಯಲು ತಂತ್ರರೂಪಿಸಿಕೊಂಡಿದ್ದಾರೆ.

ಹಿರೇಕೆರೂರು ಹಿನ್ನೋಟ: ಹಿರೇಕೆರೂರ ಹಾಗೂ ನೂತನ ರಟ್ಟಿಹಳ್ಳಿ ತಾಲೂಕು ವ್ಯಾಪ್ತಿ ಹೊಂದಿರುವ ಕವಿ ಸರ್ವಜ್ಞನ ನೆಲೆವೀಡಾದ ಹಿರೇಕೆರೂರ ವಿಧಾನಸಭೆ ಕ್ಷೇತ್ರವು ಅಘೋಷಿತ ಸಾಧರ ಲಿಂಗಾಯತ ಮೀಸಲು ಕ್ಷೇತ್ರವೆಂದೇ ಹೆಸರು ಪಡೆದಿದೆ. ಈ ಕ್ಷೇತ್ರದಲ್ಲಿ ಈವರೆಗೂ ಸಾಧರ ಲಿಂಗಾಯತ ಸಮುದಾಯದವರನ್ನು ಬಿಟ್ಟರೆ ಬೇರೆಯವರು ಆಯ್ಕೆಯಾಗಿಲ್ಲ. 1957ರಿಂದ ಮೂರು ಬಾರಿ ಶಂಕರರಾವ್‌ ಗುಬ್ಬಿ ಸತತವಾಗಿ ಆಯ್ಕೆಯಾಗಿ ಹ್ಯಾಟ್ರಿಕ್‌ ಬಾರಿಸಿದ್ದಾರೆ.

1972ರಲ್ಲಿ ಬಿ.ಜಿ. ಬಣಕಾರ ನಂತರ 1978ರಲ್ಲಿ ಶಂಕರರಾವ್‌ ಗುಬ್ಬಿ ಆಯ್ಕೆಯಾಗಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಬಿ.ಜಿ. ಬಣಕಾರ ಅವರು 1978ರ ನಂತರ 1983, 1985ರಲ್ಲಿ ಆಯ್ಕೆಯಾಗಿ ಒಟ್ಟು ಮೂರು ಬಾರಿ ಶಾಸಕರಾಗಿದ್ದಾರೆ. ಇವರ ನಂತರ 1989ರಲ್ಲಿ ಬಿ.ಎಚ್‌. ಬನ್ನಿಕೋಡ, 1994ರಲ್ಲಿ ಬಿ.ಜಿ. ಬಣಕಾರ ಪುತ್ರ ಯು.ಬಿ. ಬಣಕಾರ, 1999ರಲ್ಲಿ 2ನೇ ಬಾರಿಗೆ ಬಿ.ಎಚ್‌. ಬನ್ನಿಕೋಡ, 2004 ಹಾಗೂ 2008ರಲ್ಲಿ ಚಿತ್ರನಟ ಬಿ.ಸಿ. ಪಾಟೀಲ, 2013ರಲ್ಲಿ ಯು.ಬಿ. ಬಣಕಾರ, 2018ರಲ್ಲಿ ಬಿ.ಸಿ. ಪಾಟೀಲ ಆಯ್ಕೆಯಾಗಿದ್ದಾರೆ. ಇವರೆಲ್ಲ ಸಾಧರ ಲಿಂಗಾಯತ ಸಮುದಾಯದವರು. ಇವರನ್ನು ಹೊರತುಪಡಿಸಿದರೆ ಎಸ್‌ಟಿ ವರ್ಗದ ಡಿ.ಎಂ. ಸಾಲಿಯವರು ಅನೇಕ ಬಾರಿ ಅಖಾಡಕ್ಕಿಳಿದ್ದಾರಾದರೂ ಗೆಲುವು ಲಭಿಸಿಲ್ಲ.

Advertisement

ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಸಾಧರ ಸಮುದಾಯದ ಮತದಾರರೇ ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬೇರೆ ಸಮುದಾಯದವರಿಗೆ ಇಲ್ಲಿ ಇದುವರೆಗೆ ಗೆಲುವು ಲಭಿಸಿಲ್ಲ. ಪ್ರಮುಖ ರಾಜಕೀಯ ಪಕ್ಷಗಳೂ ಸಹ ಇಲ್ಲಿ ಸಾಧರ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುತ್ತ ಬಂದಿವೆ. ಈ ಬಾರಿಯ ಉಪಸಮರದ ಆಖಾಡದಲ್ಲಿಯೂ ಸಾಧರ ಲಿಂಗಾಯತರಾದ ಬನ್ನಿಕೋಡ ಹಾಗೂ ಬಿ.ಸಿ. ಪಾಟೀಲ ನಡುವೆಯೇ ಸೆಣಸಾಟ ನಡೆಯುತ್ತಿದೆ.

ರಾಣಿಬೆನ್ನೂರು ರಣಾಂಗಣ: ವಾಣಿಜ್ಯ ಕೇಂದ್ರ ಹಾಗೂ ಬೀಜೋತ್ಪಾದನೆಗೆ ರಾಷ್ಟ್ರದಲ್ಲಿ ಹೆಸರುವಾಸಿಯಾದ ರಾಣಿಬೆನ್ನೂರು ತಾಲೂಕು ರಾಜ್ಯ ರಾಜಕಾರಣದಲ್ಲಿ ಅಷ್ಟೊಂದು ಹೆಸರು ಮಾಡದ್ದಿದರೂ, ಜಿಲ್ಲೆಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸ್ವಾತಂತ್ರ ನಂತರ 14 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿರುವ ರಾಣಿಬೆನ್ನೂರ ಕ್ಷೇತ್ರದಲ್ಲಿ ಎಂಟು ಬಾರಿ

ಕಾಂಗ್ರೆಸ್‌ ವಿಜಯಿಶಾಲಿಯಾಗಿದರೆ, ಆರು ಬಾರಿ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಜಯದ ನಗೆ ಬೀರಿವೆ. ಕೆ.ಎಫ್‌. ಪಾಟೀಲರಂತಹ ಸಹಕಾರಿ ಧುರೀಣರನ್ನು ರಾಜಕೀಯಕ್ಕೆ ಪರಿಚಯ ಮಾಡಿರುವ ಕ್ಷೇತ್ರವು ಬಹುತೇಕ ಚುನಾವಣೆಗಳಲ್ಲಿ ವ್ಯಕ್ತಿ ಮಾನ್ಯತೆ ನೀಡುತ್ತ ಬಂದಿದೆ.

ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಕೆ.ಎಫ್‌. ಪಾಟೀಲ (1957), ಎನ್‌.ಎಲ್‌. ಬೆಲ್ಲದ (1967), ಬಿ.ಜಿ. ಪಾಟೀಲ (1983), ವಿ.ಎಸ್‌.ಕರ್ಜಗಿ (1994) ಹಾಗೂ ಜಿ.ಶಿವಣ್ಣ (2004, 2008), ಆರ್‌. ಶಂಕರ್‌ 2018 ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಕೆ.ಬಿ.ಕೊಳಿವಾಡ 1972, 1985, 1994, 1999, 2013ರಲ್ಲಿ ಹೀಗೆ ಐದು ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದು ಈಗ ನಡೆಯುತ್ತಿರುವ ಉಪಸಮರದ ಆಖಾಡಕ್ಕೆ ಮತ್ತೆ ಇಳಿದ್ದಾರೆ. ಈ ಉಪಸಮರದಲ್ಲಿ ಬಿಜೆಪಿ ಪಂಚಸಾಲಿ ಸಮುದಾಯದ ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್‌ ನೀಡಿದ್ದು, ರಡ್ಡಿ ಲಿಂಗಾಯತ ಸಮುದಾಯದ ಕೆ.ಬಿ. ಕೋಳಿವಾಡ ಕಣದಲ್ಲಿದ್ದಾರೆ. ಹೀಗಾಗಿ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರಲ್ಲೇ ಸ್ಪರ್ಧೆ ಏರ್ಪಡಲಿದೆ.

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next