Advertisement

ಕಮಲದ ಮೇಲೆ ಉರಿ ಹಸ್ತ

12:37 PM Nov 29, 2017 | Team Udayavani |

ಧಾರವಾಡ: ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಹೆಸರು ಬಳಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್‌ ರ್ಯಾಲಿ ನಡೆಸಿದರು.

Advertisement

ಸೋಮವಾರವಷ್ಟೇ ಸಂಸದ ಪ್ರಹ್ಲಾದ ಜೋಷಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿಗೆ ಈ ಮೂಲಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಕಲಾಭವನ ಮೈದಾನದಿಂದ ಡಿಸಿ ಕಚೇರಿವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಬಿಜೆಪಿ ನಾಯಕರಾದ ಪ್ರಹ್ಲಾದ ಜೋಷಿ, ಜಗದೀಶ ಶೆಟ್ಟರ, ಅಮೃತ ದೇಸಾಯಿ, ಸೀಮಾ ಮಸೂತಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು,

ಜ್ಯುಬಿಲಿ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಸಂಸದ ಪ್ರಹ್ಲಾದ ಜೋಶಿ ಭಾವಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರೆ, ಅಮೃತ ದೇಸಾಯಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಯೋಗೀಶಗೌಡ ಸಹೋದರ ಗುರುನಾಥಗೌಡ ವಿರುದ್ಧವೂ ಘೋಷಣೆ ಕೂಗಿದರು

ಬೆಳವಣಿಗೆ ಸಹಿಸದ ಬಿಜೆಪಿ: ವಿನಯ ಕುಲಕರ್ಣಿ ಸಚಿವರಾದ ಬಳಿಕ ಬಿಜೆಪಿ ಕೆಲ ಮುಖಂಡರ ಬಣ್ಣ ಬಯಲಾಗುತ್ತಿರುವುದು, ಜನತೆಗೆ ಕಾಂಗ್ರೆಸ್‌ ಬಗ್ಗೆ ಹೆಚ್ಚಿನ ಒಲವು ಬರುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಮುಂಬರುವ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಸಚಿವರ ವಿರುದ್ಧ ಷಡ್ಯಂತ್ರ ಮಾಡಿ ಇಲ್ಲ ಸಲ್ಲದ ಆರೋಪವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ದೂರಿದರು. ಸಚಿವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಹಲವಾರು ಕೊಲೆ ಪ್ರಕರಣ ಎದುರಿಸುತ್ತಿರುವ ರೌಡಿಶೀಟರ್‌ ಗುರುನಾಥಗೌಡ ಗೌಡರ,

Advertisement

ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಬಿಜೆಪಿಯ ರಾಜೀವ ಚಂದ್ರಶೇಖರ್‌ ಅವರ ಮಾಲೀಕತ್ವದ ಖಾಸಗಿ ವಾಹಿನಿ ಹಾಗೂ ಜಿಲ್ಲೆಯಲ್ಲಿ ಪ್ರತಿಭಟನೆಯ ಸೋಗಿನಲ್ಲಿ ಸುಳ್ಳು ಆರೋಪ ಮಾಡಿ ಸಚಿವರ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. 

ಮಾಜಿ ಸಚಿವ ಎಸ್‌.ಆರ್‌.ಮೋರೆ, ಶಾಸಕ ಅಬ್ಬಯ್ಯ ಪ್ರಸಾದ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಪಾಲಿಕೆ ಸದಸ್ಯರಾದ ದೀಪಕ್‌ ಚಿಂಚೋರೆ,ಯಾಸೀನ ಹಾವೇರಿಪೇಟ, ಸದಾನಂದ ಡಂಗನವರ, ಇಸ್ಮಾಯಿಲ್‌ ತಮಟಗಾರ, ನಾಗರಾಜ ಛಬ್ಬಿ, ಜಿ.ಪಂ.ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ,

ಚನ್ನಬಸಪ್ಪ ಮಟ್ಟಿ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ್‌ಹುಸೇನ ಹಳ್ಳೂರ, ಆನಂದ ಸಿಂಗನಾಥ್‌, ವಸಂತ ಅರ್ಕಾಚಾರಿ, ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಸೇರಿದಂತೆ ಪಕ್ಷದ ವಿವಿಧ ಘಟಕಗಳು ಹಾಗೂ ಸಚಿವರ ಅಭಿಮಾನಿ ಬಳಗ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. 

ಬಸವ ಸೇನೆ ಫಲಕ: ರಾಷ್ಟ್ರೀಯ ಬಸವ ಸೇನೆ ಸದಸ್ಯರು ಸಚಿವ ವಿನಯ ಪರ ಘೋಷಣೆಯಿರುವ ಫಲಕಗಳನ್ನು ಪ್ರದರ್ಶಿಸಿದರು. ಲಿಂಗಾಯತ ಸಮುದಾಯವನ್ನು ಒಗ್ಗೂಡಿಸುತ್ತಿರುವ ವಿನಯ ವಿರುದ್ಧ ಆರೆಸ್ಸೆಸ್‌ ಮತ್ತು ಸಂಸದ ಪ್ರಹ್ಲಾದ ಜೋಷಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. 

Advertisement

Udayavani is now on Telegram. Click here to join our channel and stay updated with the latest news.

Next