Advertisement

ಶಂಕಿತ ಅಗ್ರ 9 ಮಂದಿ ಕ್ರಿಕೆಟಿಗರ ವಿರುದ್ಧ ಫಿಕ್ಸಿಂಗ್‌ ವಿಚಾರಣೆ?

06:00 AM Nov 03, 2018 | |

ನವದೆಹಲಿ: ಭಾರತ ಕ್ರಿಕೆಟ್‌ನಲ್ಲಿ ಮತ್ತೂಮ್ಮೆ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದುವರೆಗೆ ಬೂದಿ ಮುಚ್ಚಿದ ಕೆಂಡದಂತಿರುವ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣ ಮತ್ತೆ ಮುನ್ನೆಲೆಗೆ ಬರುವ ಪರಿಸ್ಥಿತಿಯೊಂದು ತೆರೆದುಕೊಂಡಿದೆ. 2013ರ ಐಪಿಎಲ್‌ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣದ ತನಿಖೆ ನಡೆಸಿದ್ದ ಮುಕುಲ್‌ ಮುದ್ಗಲ್‌ ಸಮಿತಿ 2014ರಲ್ಲಿ ವರದಿ ನೀಡಿತ್ತು. ಅದರಲ್ಲಿ ದೇಶದ 9 ಕ್ರಿಕೆಟಿಗರ
ಹೆಸರೂ ಇದೆ. ಇದುವರೆಗೆ ರಹಸ್ಯವಾಗಿರುವ ಆ ಹೆಸರನ್ನು ನಮಗೆ ನೀಡಿ, ನಾವು ವಿಚಾರಣೆ ನಡೆಸುತ್ತೇವೆಂದು ಬಿಸಿಸಿಐ ಆಡಳಿತಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಒಂದು ವೇಳೆ ನ್ಯಾಯಾಲಯ ಈ ಮನವಿಗೆ
ಒಪ್ಪಿಗೆಯಿತ್ತರೆ ವಿಶ್ವಾದ್ಯಂತ ಭಾರೀ ಸುದ್ದಿಯಾಗುವ ಸಾಧ್ಯತೆಯಿದೆ.

Advertisement

2014ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ್ದ ವರದಿಯಲ್ಲಿ ಒಟ್ಟು 13 ಮಂದಿಯ ಹೆಸರಿತ್ತು. ಅದರಲ್ಲಿ 4 ಮಂದಿ ಅಧಿಕಾರಿಗಳು ಸ್ಥಾನ ಪಡೆದಿದ್ದರು. ನ್ಯಾಯಾಲಯ ನಾಲ್ವರ ಹೆಸರನ್ನು ಬಹಿರಂಗ ಮಾಡಿ, ಕ್ರಿಕೆಟಿಗರ ಹೆಸರನ್ನು ಮಾತ್ರ ಬಚ್ಚಿಟ್ಟಿತ್ತು. ಸಾಕ್ಷ್ಯಾಧಾರದ ಕೊರತೆಯಿರುವುದರಿಂದ ಕ್ರಿಕೆಟಿಗರ ಜೀವನ ಹಾಳು ಮಾಡಬಾರದೆನ್ನುವ ದೃಷ್ಟಿಯಿಂದ ನ್ಯಾಯಪೀಠ ಈ ಕ್ರಮ ಕೈಗೊಂಡಿತ್ತು.
ಆದರೆ 2015ರಲ್ಲಿ ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಮಾಡಲು ನೇಮಿಸಲ್ಪಟ್ಟಿದ್ದ ಲೋಧಾ ಸಮಿತಿಗೆ ಆಸಕ್ತಿಯಿದ್ದರೆ ಈ ಬಗ್ಗೆ ಗಮನಹರಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಇದೇ ವಿಚಾರವನ್ನು ನ್ಯಾಯಪೀಠಕ್ಕೆ ತಿಳಿಸಿರುವ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌, ಮುದ್ಗಲ್‌ ಸಮಿತಿಯಲ್ಲಿ ಹೆಸರಿಸಲ್ಪಟ್ಟಿರುವ ಕ್ರಿಕೆಟಿಗರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯ ಮುದ್ಗಲ್‌ ವರದಿಯ ಉಳಿದ ಭಾಗಗಳನ್ನು ಬಿಸಿಸಿಐ
ಭ್ರಷ್ಟಾಚಾರ ನಿಗ್ರಹದಳಕ್ಕೆ ನೀಡಬೇಕು ಎಂದು ಹೇಳಿದ್ದಾರೆ.

ಈಗ ಪ್ರಕರಣ ಸುದ್ದಿಯಾಗಲು ಕಾರಣ?: ಕೆಲ ದಿನಗಳ ಹಿಂದೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ ಸಂದರ್ಶನ ನೀಡಿದ್ದ ಮಾಜಿ ಐಪಿಎಸ್‌ ಅಧಿಕಾರಿ, ಮುದ್ಗಲ್‌ ಸಮಿತಿಯ ಮುಖ್ಯ ವಿಚಾರಣಾಧಿಕಾರಿ ಬಿ.ಬಿ.ಮಿಶ್ರಾ ಭಾರತದ ಅಗ್ರ ಕ್ರಿಕೆಟಿಗರೊಬ್ಬರಿಗೆ ಬುಕಿಯ ಸಂಪರ್ಕವಿತ್ತು. ಸಮಯಾವಕಾಶ ಕಡಿಮೆಯಿದ್ದಿದ್ದರಿಂದ ಆ ವಿಚಾರಣೆಯನ್ನು ಮುಗಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ನಾವು 13 ಮಂದಿಯನ್ನು ಶಂಕಿತರ ಪಟ್ಟಿಗೆ ಸೇರಿಸಿದ್ದೆವು. ಈ ಪೈಕಿ 9 ಕ್ರಿಕೆಟಿಗರ ಹೆಸರನ್ನು ಬಿಟ್ಟು ಉಳಿದ ನಾಲ್ವರು ಅಧಿಕಾರಿಗಳ ಹೆಸರನ್ನು ಮಾತ್ರ ಬಹಿರಂಗಗೊಳಿಸಲಾಗಿದೆ. ನಾವು ನೀಡಿದ ಪಟ್ಟಿಯಲ್ಲಿರುವುದು ಒಬ್ಬಿಬ್ಬರು ಕ್ರಿಕೆಟಿಗರಲ್ಲ, 9 ಮಂದಿ. ಆದ್ದರಿಂದ ಅವರನ್ನು ವಿಚಾರಣೆ ನಡೆಸಲೇಬೇಕು ಎಂದು ಮಿಶ್ರಾ ಹೇಳಿದ್ದರು. ಇದಾದ ಬಳಿಕ ಮತ್ತೂಮ್ಮೆ ಈ ಪ್ರಕರಣ ಮಹತ್ವ
ಪಡೆದುಕೊಂಡಿದೆ.

2014ರಲ್ಲಿ ಮುದ್ಗಲ್‌ ಸಮಿತಿ ವರದಿ ಸಲ್ಲಿಸಿದ್ದಾಗ, ಬಿಸಿಸಿಐ ಅಂದಿನ ಅಧ್ಯಕ್ಷ ಎನ್‌.ಶ್ರೀನಿವಾಸನ್‌, ಅಂದಿನ ಐಪಿಎಲ್‌ ಸಿಒಒ ಸುಂದರ್‌ ರಾಮನ್‌, ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಜಿ ಸಹ ಮುಖ್ಯಸ್ಥ ರಾಜ್‌ ಕುಂದ್ರಾ, ಚೆನ್ನೈ ಕಿಂಗ್ಸ್‌ ಮಾಜಿ ಮುಖ್ಯಸ್ಥ ಗುರುನಾಥ್‌ ಮೈಯಪ್ಪನ್‌ರನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆಗೊಳಪಡಿಸಿತ್ತು. ಈ ಪೈಕಿ ಶ್ರೀನಿವಾಸನ್‌, ಸುಂದರ್‌ ರಾಮನ್‌ ನಿರ್ದೋಷಿಗಳೆಂದು ಹೇಳಲಾಗಿದ್ದರೆ, ರಾಜ್‌ ಕುಂದ್ರಾ ಮತ್ತು ಗುರುನಾಥ್‌ ತಪ್ಪಿತಸ್ಥರು ಎಂದು ಸಾಬೀತಾಗಿತ್ತು. ಕುಂದ್ರಾ ಮತ್ತು ಮೈಯಪ್ಪನ್‌ರನ್ನು ಕ್ರಿಕೆಟ್‌ ಚಟುವಟಿಕೆಗಳಿಂದ ಆಜೀವ ನಿಷೇಧಿಸಲಾಗಿದೆ. ಗಲಾಟೆಯೆಬ್ಬಿಸಿದ್ದ 2013ರ ಐಪಿಎಲ್‌ ಫಿಕ್ಸಿಂಗ್‌ 2013ರ ಐಪಿಎಲ್‌ ಆವೃತ್ತಿಯಲ್ಲಿ ಸ್ಪಾಟ್‌ಫಿಕ್ಸಿಂಗ್‌ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಸ್ಥಾನ್‌ ರಾಯಲ್ಸ್‌ 
ಆಟಗಾರರಾದ ಎಸ್‌.ಶ್ರೀಶಾಂತ್‌, ಅಂಕಿತ್‌ ಚವಾಣ್‌, ಅಜಿತ್‌ ಚಂಡೀಲಾರನ್ನು ಪೊಲೀಸರು ಬಂಧಿಸಿದ್ದರು. ನಂತರ ವಿಚಾರಣೆ ನಡೆಸಿದ್ದ ದೆಹಲಿ ವಿಶೇಷ ನ್ಯಾಯಾಲಯ, ಸಾಕ್ಷ್ಯಾಧಾರದ ಕೊರತೆಯಿಂದ ಎಲ್ಲ ಆರೋಪಿಗಳನ್ನು ನಿರ್ದೋಷಿಗಳೆಂದು ಹೇಳಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮುದ್ಗಲ್‌ ಸಮಿತಿಯನ್ನು ನೇಮಿಸಿ ವಿಚಾರಣೆ ನಡೆಸಲು ಆದೇಶ ನೀಡಿತ್ತು. ಈ ವರದಿ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಹಲವು ಪ್ರಮುಖ ವ್ಯಕ್ತಿಗಳು ತಮ್ಮ ಸ್ಥಾನ ಕಳೆದುಕೊಳ್ಳಲು
ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next