ಬೆಂಗಳೂರು: ವೈದ್ಯಕೀಯ ಸಂಸ್ಥೆಯ ವರ್ಗೀಕರಣಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕದ ಅಳತೆ ಮಾನದಂಡವನ್ನು ಸಡಿಲಗೊಳಿಸಿದ ಆರೋಗ್ಯ ಇಲಾಖೆ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ.
ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ, ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ನೋಂದಣಿ ಸಂಖ್ಯಾ ಫಲಕವನ್ನು ಜು. 31ರೊಳಗೆ ಅಳವಡಿಸುವುದು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಜು. 6ರಂದು ಆದೇಶ ಹೊರಡಿಸಿತ್ತು. ಆದರೆ ಸುತ್ತೋಲೆಯಲ್ಲಿ ನಿಗದಿಪಡಿಸಿದ ಅಳತೆಯ ಫಲಕವನ್ನು ಸಣ್ಣ ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಅಳವಡಿಸುವುದು ಕಷ್ಟ ಸಾಧ್ಯ.
ವೈದ್ಯಕೀಯ ಸಂಸ್ಥೆಯ ವರ್ಗೀಕರಣಕ್ಕೆ ಅನುಗುಣವಾಗಿ ಫಲಕ ಅಳವಡಿಕೆಗೆ ಸಡಿಲಿಕೆ ನೀಡುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಆರೋಗ್ಯ ಇಲಾಖೆಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಸುತ್ತೋಲೆ ಹೊರಬಿದ್ದಿದೆ.
ಆಯುಷ್ ಥೆರಪಿ ಸೆಂಟರ್, ಪಾಲಿ ಕ್ಲಿನಿಕ್ – ಸಮಾಲೋಚನೆ ಕೇಂದ್ರ, ವೈದ್ಯಕೀಯ ರೋಗನಿರ್ಣಯ ಕೇಂದ್ರ, ಡೆಂಟಲ್ ಲ್ಯಾಬ್ ಸೇರಿ ಒಟ್ಟು 16 ವೈದ್ಯಕೀಯ ಸಂಸ್ಥೆಗಳ ನಾಮಫಲಕದ ಅಳತೆಯನ್ನು ಸಡಿಲ ಮಾಡಿದೆ. ಸುತ್ತೋಲೆಯಲ್ಲಿ ಉಲ್ಲೇಖೀಸಿದಂತೆ ಆಸ್ಪತ್ರೆ ಅಥವಾ ಕ್ಲಿನಿಕ್ ಬೋರ್ಡ್‌ನ ಒಟ್ಟಾರೆ ಕನಿಷ್ಠ ಅಳತೆ 5 ಅಡಿ ಅಗಲ, 2.5 ಅಡಿ ಎತ್ತರ ಇರಬೇಕು. ಫಲಕದ ಮೊದಲ ಸಾಲಿನಲ್ಲಿ ಕೆಪಿಎಂಇ ನೋಂದಣಿ ಸಂಖ್ಯೆ, 2ನೇ ಸಾಲಿನಲ್ಲಿ ಆಸ್ಪತ್ರೆಯ ಹೆಸರು, 3ನೇ ಸಾಲಿನಲ್ಲಿ ಮಾಲಕ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕನ ಹೆಸರು ಕಡ್ಡಾಯವಾಗಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ನಾಮಫಲಕ ಅಳವಡಿಸಬೇಕು.
ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ತಿಳಿಹಸಿರು ಬಣ್ಣದ ಬೋರ್ಡ್ ಬಳಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಕಠಿನ ಕಾನೂನು ಕ್ರಮ ಜರಗಿಸುವಂತೆ ಆದೇಶಿಸಿದ್ದಾರೆ.