ಕುಮಟಾ: ತಾಲೂಕಿನ ಹೆಗಡೆ ಗ್ರಾ.ಪಂ ವ್ಯಾಪ್ತಿಯ ಗಾಂಧಿನಗರದ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸ್ಥಳೀಯರು ಹೆಗಡೆ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಒಂದು ವರ್ಷದ ಹಿಂದೆ ಗಾಂಧಿನಗರದ ಸಾರ್ವಜನಿಕ ಬಾವಿಯ ಪಕ್ಕ ಕೆಆರ್‌ಐಡಿ ಯೋಜನೆ ಅಡಿಯಲ್ಲಿ ನಾಣ್ಯವನ್ನು ಹಾಕಿ ಶುದ್ಧ ಕುಡಿಯುವ ನೀರು ಪಡೆಯುವ ಘಟಕವನ್ನು ಸ್ಥಾಪಿಸಲಾಗಿತ್ತು. ಸ್ಥಳೀಯರು ಒಂದೆರಡು ಬಾರಿ ಅದರ ಪ್ರಯೋಜನ ಪಡೆದಿದ್ದಾರೆ. ಈ ವರ್ಷ ನೀರಿನ ಅಭಾವ ಹೆಚ್ಚಾಗಿರುವುದರಿಂದ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸ್ಥಗಿತಗೊಂಡ ಕುಡಿಯುವ ನೀರಿನ ಘಟಕವನ್ನು ಪುನಃ ಪ್ರಾರಂಭಿಸಬೇಕೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಜೋಷಿ ಅವರ ಬಳಿ ಸ್ಥಳೀಯರು ಪಟ್ಟು ಹಿಡಿದರು.
ಅವರಿಂದ ಸಮರ್ಪಕ ಉತ್ತರ ಲಭಿಸದ ಕಾರಣ ನಮಗೆ ಪಂಚಾಯತ ಅಧ್ಯಕ್ಷರು ಕೂಡಲೇ ಇಲ್ಲಿಗೆ ಬರಬೇಕು. ಅವರನ್ನು ಕರೆಸಿ ಎಂದು ಕೇಳಿಕೊಂಡರು. ಸ್ಥಳಕ್ಕೆ ಕೂಡಲೇ ಆಗಮಿಸಿದ ಹೆಗಡೆ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ ಜನರನ್ನು ಸಮಾಧಾನ ಪಡಿಸಿ, ಈಗಾಗಲೇ ನಿಮಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಘಟಕ ಒಂದು ವರ್ಷದ ಹಿಂದೆಯೇ ಉದ್ಘಾಟನೆ ಆಗಿದ್ದರೂ ಕೂಡ ಅದರ ಹಣ ಬಂದಿರಲಿಲ್ಲ. ಅದಕ್ಕೆ ಮೀಸಲಿಟ್ಟ ಹಣ ಜನೆವರಿಯಲ್ಲಿ ಕ್ರಿಯಾ ಯೋಜನೆ ಮಾಡಿ ಕಳುಹಿಸಲಾಗಿದೆ. ಪೈಪ್‌ಲೈನ್, ಪಂಪು ಅಳವಡಿಸುವುದು ಹಾಗೂ ಇತರ ಕೆಲಸಗಳಿಗೆ ಒಂದೂವರೆ ಲಕ್ಷ ಮೀಸಲಿಡಲಾಗಿದೆ. ಆದರೆ ಮಧ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಇದರ ಉಪಯೋಗ ಲಭಿಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ರವಿ ಮುಕ್ರಿ, ಮಹೇಶ, ಚಂದನ ನಾಯ್ಕ ಹಾಗೂ ಇತರರು ಮಾತನಾಡಿ ನಿಮ್ಮ ಮಾತಿಗೆ ಬೆಲೆ ಕೊಟ್ಟು ತೆರಳುತ್ತೇವೆ. ಆದರೆ ಇದೇ ತರಹದ ಸಮಸ್ಯೆ ಮತ್ತೆ ಉದ್ಭವವಾದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ. ನಮಗೆ ಪಂಚಾಯತದಿಂದ ಬಿಡುವ ನೀರನ್ನು ಪಡೆಯಲು ಪ್ರತಿಯೊಂದು ಮನೆಗಳಿಗೂ ನಲ್ಲಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಅಧ್ಯಕ್ಷರು ಪ್ರಯತ್ನಿಸುವುದಾಗಿ ತಿಳಿಸಿದರು.
ಪಂಚಾಯತ ಸದಸ್ಯೆ ನಾಗವೇಣಿ ಮುಕ್ರಿ, ಕವಿತಾ ಶೆಟ್ಟಿ, ದೇವಿ ಮುಕ್ರಿ ಸೇರಿದಂತೆ ಹಲವರಿದ್ದರು.