Advertisement

ಕಂದಾಯ ಸಿಬಂದಿ ಕೊರತೆ ಬಗೆಹರಿಸಿ : ಕುಂದಾಪುರ ತಾ.ಪಂ. ಸಾಮಾನ್ಯ ಸಭೆ

03:24 AM Apr 22, 2021 | Team Udayavani |

ಕುಂದಾಪುರ: ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆಯಿದ್ದು ಶೀಘ್ರ ಬಗೆಹರಿಸಬೇಕು. ವಂಡ್ಸೆ ಹೋಬಳಿಯಲ್ಲಿ 39 ಗ್ರಾಮಗಳಿಗೆ ಕೇವಲ 12 ಜನ ಗ್ರಾಮ ಕರಣಿಕ ರಿದ್ದಾರೆ. ಇದರಿಂದ ಸಾರ್ವಜನಿಕರ ಕಂದಾಯ ಕೆಲಸಗಳಿಗೆ ವಿಳಂಬವಾಗುತ್ತಿದೆ ಎಂದು ತಾ.ಪಂ. ಸದಸ್ಯ ಉದಯ್‌ ಪೂಜಾರಿ ಹೇಳಿದರು.

Advertisement

ಬುಧವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಈ ಅವಧಿಯ ಕೊನೆ ಸಭೆಯಲ್ಲಿ ಅವರು ಮಾತನಾಡಿದರು.

ಹಕ್ಕುಪತ್ರ
ತಲ್ಲೂರಿನಲ್ಲಿ 125 ಕುಟುಂಬಗಳ ಪೈಕಿ 100 ಕುಟುಂಬಗಳಿಗೆ ಹಕ್ಕುಪತ್ರ ದೊರೆತಿದ್ದು ಉಳಿಕೆ 25 ಕುಟುಂಬಗಳಿಗೆ ಡೀಮ್ಡ್ ಅರಣ್ಯ ನೆಪದಲ್ಲಿ ನಿರಾಕರಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಕುರಿತು ಹೇಳುತ್ತಾ ಬಂದಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಕರಣ್‌ ಕುಮಾರ್‌ ಪೂಜಾರಿ ಹೇಳಿದರು. ಡೀಮ್ಡ್ ಅರಣ್ಯ ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದು ಮಂಜೂರಾತಿ ಸಾಧ್ಯ ವಿಲ್ಲ, ಮನೆಗಳಿದ್ದರೂ ಅರಣ್ಯ ಭೂಮಿಗೆ ಹೇಗೆ ಮೀಸಲಿಟ್ಟರು ಎಂದು ಅರಣ್ಯ ಇಲಾಖೆಯನ್ನು ಪ್ರಶ್ನಿಸಬೇಕು ಎಂದು ಪ್ರೊಬೇಷನರಿ ಇಒ ಪ್ರತಿಭಾ ಹೇಳಿದರು. ಕಂದಾಯ ಇಲಾಖೆಯ ವಿಎ, ಆರ್‌ಐ, ತಹಶೀಲ್ದಾರರಿದ್ದೇ ಜಾಗ ನಿಗದಿಯಾಗಿದ್ದು ಜಿಲ್ಲಾಧಿಕಾರಿಗಳು ಅಫಿದವಿತ್‌ ಹಾಕಿದ್ದು. ಅನಂತರವಷ್ಟೇ ರಕ್ಷಣೆಯ ಹೊಣೆ ಇಲಾಖೆಗೆ ಬಂದಿದ್ದು, ಅರಣ್ಯ ಇಲಾಖೆಯ ಏಕಪಕ್ಷೀಯ ತೀರ್ಮಾನ ಅಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದರು. ಡೀಮ್ಡ್ ಅರಣ್ಯ ಕಾಯ್ದೆ ಜಾರಿಯಾಗುವ ಮುನ್ನವೇ ಜಾಗ ಮಂಜೂರಾಗಿದೆ ಎಂದು ಕರಣ್‌ ಹೇಳಿದರು. ತಾಲೂಕಿನ ಅನೇಕ ಕಡೆ ಈ ಸಮಸ್ಯೆ ಇದೆ ಎಂದು ವಾಸುದೇವ ಪೈ, ಜ್ಯೋತಿ ಪುತ್ರನ್‌ ಹೇಳಿದರು.

ಆರೋಗ್ಯಾಧಿಕಾರಿಗೆ ಬುಲಾವ್‌
ವಿಭಾಗೀಯ ಸರಕಾರಿ ಆಸ್ಪತ್ರೆ ಕುರಿತು ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಹಾಜರಾಗುತ್ತಲೇ ಇಲ್ಲ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರಣ್‌ ಒತ್ತಾಯಿಸಿದರು. ಕೋವಿಡ್‌ ನಿರ್ವಹಣೆ ಸಲುವಾಗಿ ಬಂದಿಲ್ಲ ಎಂದು ಇಒ ಕೇಶವ ಶೆಟ್ಟಿಗಾರ್‌ ಉತ್ತರಿಸಿದರು. ರಾತ್ರಿ ಹಗಲು ಕೊರೊನಾ ನಿರ್ವಹಣೆ ಮಾಡಲು ಇರುವುದಿಲ್ಲ. ಸಭೆಗೆ ಬಾರದ ಅವರ ಮೇಲೆ ಪಂಚಾಯತ್‌ರಾಜ್‌ ಕಾಯ್ದೆ ಪ್ರಕಾರ ಕಾನೂನು ಕ್ರಮ ನಡೆಯಬೇಕು ಎಂದು ಕರಣ್‌ ಹೇಳಿದರು.
ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ರೂಪಾ ಪೈ ಉಪಸ್ಥಿತರಿದ್ದರು.

ಕೆರೆ ಒತ್ತುವರಿ
ಗಂಗೊಳ್ಳಿಯ ಮಡಿವಾಳಕೆರೆ, ಚೋಳನಕೆರೆ ಒತ್ತುವರಿ ಕುರಿತು ಕೇಳಿದ ಪ್ರಶ್ನೆಗೆ ತಹಶೀಲ್ದಾರರು ಒತ್ತುವರಿ ನಡೆದಿಲ್ಲ ಎಂದು ನೀಡಿದ ಮಾಹಿತಿ ಸುಳ್ಳು ಎಂದು ಸುರೇಂದ್ರ ಖಾರ್ವಿ ಹೇಳಿದರು. ಒತ್ತುವರಿ ತೆರವಿಗೆ ನೋಟಿಸ್‌ ನೀಡಲಾಗಿದೆ ಎಂದೂ, ಒತ್ತುವರಿಯೇ ಆಗಿಲ್ಲ ಎಂದೂ, ಪರಿಶೀಲನೆ ಮಾಡುವುದಾಗಿಯೂ ಮೂರು ಬಾರಿ ಮೂರು ಉತ್ತರ ನೀಡಲಾಗಿದೆ ಎಂದು ವಾಸುದೇವ ಪೈ ಹೇಳಿದರು. ಖುದ್ದು ತಹಶೀಲ್ದಾರರೇ ಇದ್ದು ಮೋಜಣಿದಾರರ ಮೂಲಕ ಸರ್ವೆ ನಡೆಸಲಾಗಿದ್ದು ಒತ್ತುವರಿ ಕಂಡುಬಂದಿಲ್ಲ. ಈ ಮಾಹಿತಿಯನ್ನು ಸದಸ್ಯರು ನಿರಾಕರಿಸಿದ ಕಾರಣ ಸರ್ವೆ ಇಲಾಖೆ ಮೂಲಕ ಸರ್ವೆ ನಡೆಸಲು ಪತ್ರ ಬರೆಯಲಾಗಿದೆ ಎಂದು ವಿನಯ್‌ ಹೇಳಿದರು. ಕೆರೆಯ ಮಧ್ಯೆಯೇ ರಸ್ತೆ ನಿರ್ಮಿಸಲಾಗಿದ್ದು ಒತ್ತುವರಿ ತೆರವುಗೊಳಿಸದಿದ್ದರೆ ಧರಣಿ ಕೂರುವುದಾಗಿ ಸುರೇಂದ್ರ ಖಾರ್ವಿ ಎಚ್ಚರಿಸಿದರು.

Advertisement

ಜಾಗ ಮೀಸಲು
ಕೊರ್ಗಿಯಲ್ಲಿ 4 ಎಕರೆ ಜಾಗವನ್ನು ಶ್ಮಶಾನಕ್ಕೆ ಮೀಸಲಿಟ್ಟಿದ್ದು ಒತ್ತುವರಿ ಯಾಗುತ್ತಿದೆ. ಇದರಲ್ಲಿ 1 ಎಕರೆಯಾದರೂ ಗಡಿಗುರುತು ಮಾಡಿಕೊಡಿ ಎಂದು ಅನೇಕ ಬಾರಿ ಹೇಳಿ ತಹಶೀಲ್ದಾರರಿಂದ ಭರವಸೆ ಸಿಕ್ಕಿದ್ದರೂ ಈಡೇರಿಲ್ಲ ಎಂದು ಶೈಲಶ್ರೀ ಶೆಟ್ಟಿ ಹೇಳಿದರು. ಡಿಸಿಗೆ ಬರೆಯಲಾಗಿದೆ ಎಂದು ಉಪ ತಹಶೀಲ್ದಾರ್‌ ವಿನಯ್‌ ಹೇಳಿದರು. ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರಯತ್ನಿಸಿದರೂ ತಹಶೀಲ್ದಾರರು ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ವಾಸುದೇವ ಪೈ ಹೇಳಿದರು. ಅಧ್ಯಕ್ಷರು ಮತ್ತು ಇತರ ಸದಸ್ಯರು ಹೌದೆಂದು ಒಪ್ಪಿಗೆ ಸೂಚಿಸಿದರು.

ಹಕ್ಲಾಡಿಗೆ ನೀರು
ಹಕ್ಲಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ ಎಂದು ಖುದ್ದು ತಹಶೀಲ್ದಾರ್‌ ಕೊಠಡಿಗೆ ಹೋಗಿ ಹೇಳಿ ಬಂದು ವಾರ ಕಳೆದಿದ್ದರೂ ನೀರು ಬಂದಿಲ್ಲ ಎಂದು ಅಧ್ಯಕ್ಷೆ ಇಂದಿರಾ ಶೆಡ್ತಿ ಹೇಳಿದರು. ವಂಡ್ಸೆ ಹೋಬಳಿಯಲ್ಲಿ ಹಕ್ಲಾಡಿ, ಕರ್ಕುಂಜೆ ಸೇರಿ 4 ಗ್ರಾಮಗಳಲ್ಲಿ ಸಮಸ್ಯೆಯಿದ್ದು ತತ್‌ಕ್ಷಣವೇ ಟೆಂಡರ್‌ ಕರೆಯಲಾಗಿದೆ. ಎ. 22 ಟೆಂಡರ್‌ ಅವಧಿ ಮುಗಿದ ಕೂಡಲೇ ಎರಡು ದಿನಗಳಲ್ಲಿ ನೀರು ವಿತರಿಸಲಾಗುವುದು ಎಂದು ವಿನಯ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next