ಚಿತ್ರದುರ್ಗ: ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿಂತಿದ್ದ ಲಾರಿಗೆ ಕ್ವಾಲಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು,ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಗಾಯಾಳು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತರು ಗೋವಾ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದವರಾಗಿದ್ದು, ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರು ಗ್ರಾಮದವರು ಎಂದು ತಿಳಿದು ಬಂದಿದೆ. ಮೃತರನ್ನು ಸದ್ಧಾಂ ಹುಸೇನ್(22), ಸದ್ಧಾಂ(21), ತೌಸಿಫ್ ಅಹಮ್ಮದ್(24), ಶಾರೂಕ್ (20) ಮತ್ತು ಆಸಿಫ್ ಮಹಮ್ಮದ್ (21) ಎಂದು ಗುರುತಿಸಲಾಗಿದೆ.
ಉಳಿದ ನಾಲ್ವರು ಗಾಯಾಳುಗಳು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.