Advertisement

ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ನೆಲದಡಿ ಕೇಬಲ್ ಅಳವಡಿಕೆ

07:17 AM May 28, 2019 | Suhan S |

ಬೆಂಗಳೂರು: ಮರಗಳು ಉರುಳಿ ವಿದ್ಯುತ್‌ ಕೇಬಲ್ ಕಡಿತಗೊಂಡು ಆಗುತ್ತಿರುವ ಅನಾಹುತಗಳ ತಡೆಗೆ ಮುಂದಾಗಿರುವ ಸರ್ಕಾರ, ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ನೆಲದಡಿ ವಿದ್ಯುತ್‌ ಅಳವಡಿಸುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.

Advertisement

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಪರಿಣಾಮ ಬೃಹದಾಕಾರದ ಮರಗಳು ವಿದ್ಯುತ್‌ ಕಂಬ, ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದು, ತಂತಿ ತುಂಡಾಗಿ ರಸ್ತೆಗೆ ಬಿದ್ದು ಸಾವು-ನೋವುಗಳು ಸಂಭವಿಸಿವೆ. ಆ ಹಿನ್ನೆಲೆಯಲ್ಲಿ ವಿದ್ಯುತ್‌ ಕೇಬಲ್ಗಳನ್ನು ನೆಲದಡಿ ಅಳವಡಿಸುವ ಯೋಜನೆ ಸರ್ಕಾರ ಕೈಗೆತ್ತಿಕೊಂಡಿದೆ.

ಎರಡು ದಿನಗಳಿಂದ ನಗರದಲ್ಲಿ ಸುರಿದ ಮಳೆಯಿಂದ ವಿಜಯನಗರದ ಆರ್‌ಪಿಸಿ ಬಡಾವಣೆ ಹಾಗೂ ಮಲ್ಲೇಶ್ವರದ ಸಂಪಿಗೆ ರಸ್ತೆ, 14ನೇ ಅಡ್ಡರಸ್ತೆ, ಪಶ್ಚಿಮ ಕಾರ್ಡ್‌ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉಂಟಾಗಿರುವ ಅನಾಹುತಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌, ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಬಿಬಿಎಂಪಿ, ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಕಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಜತೆಗೆ ಉರುಳಿದ ಮರಗಳನ್ನು ಶೀಘ್ರ ತೆರವುಗೊಳಿಸಬೇಕು ಹಾಗೂ ಮುರಿದ ವಿದ್ಯುತ್‌ ಕಂಬಗಳನ್ನು ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೆಸ್ಕಾಂ ಹಾಗೂ ಬಿಬಿಎಂಪಿ ಸಿಬ್ಬಂದಿ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಗಳು ಬಿದ್ದ ಸಂದರ್ಭದಲ್ಲಿ ಹೆಚ್ಚಾಗಿ ವಿದ್ಯುತ್‌ ಕೇಬಲ್ಗಳು ತುಂಡಾಗಿ, ವಿದ್ಯುತ್‌ ಸಂಪರ್ಕ ಕಡಿತಗೊಂಡು ಸಮಸ್ಯೆಯಾಗುತ್ತದೆ. ಭವಿಷ್ಯದಲ್ಲಿ ಅಂತಹ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೆಲದಡಿ ವಿದ್ಯುತ್‌ ಕೇಬಲ್ ಅಳವಡಿಕೆ ಕಾಮಗಾರಿ ಆರಂಭಿಸಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಬೆಸ್ಕಾಂನ 11 ವಿಭಾಗಗಳಲ್ಲಿ ಮೊದಲ ಹಂತದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Advertisement

ಬೆಸ್ಕಾಂ ಸಹಾಯವಾಣಿ ಕೇಂದ್ರ ಸಮರ್ಪಕವಾಗಿ: ಕಾರ್ಯನಿರ್ವಹಿಸದಿರುವ ಬಗ್ಗೆ ಕೇಳಿಬಂದಿರುವ ದೂರುಗಳ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಈ ಬಗ್ಗೆ ಪರಿಶೀಲಿಸಲಾಗುವುದು. ಜತೆಗೆ ಪರಿಹಾರ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿ ಅವಶ್ಯಕವಾಗಿದ್ದರೆ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪರಿಶೀಲನೆ ವೇಳೆ ಮೇಯರ್‌ ಗಂಗಾಂಬಿಕೆ, ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ಶಾಸಕ ಎಂ.ಕೃಷ್ಣಪ್ಪ, ಸಚಿವ ಡಿ.ಸಿ.ತಮ್ಮಣ್ಣ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹಾಜರಿದ್ದರು.

ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ: ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ಪರಿಣಾಮ ಹಲವಾರು ವಾಹನಗಳು ಜಖಂಗೊಂಡಿದ್ದು, ವಿದ್ಯುತ್‌ ಕಂಬಗಳು ಮುರಿದಿವೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳು 61 ತಂಡಗಳನ್ನು ರಚಿಸಿಕೊಂಡು ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದು, ಪಾಲಿಕೆಯ ಸಹಾಯವಾಣಿ ಇರುವುದರಿಂದ ಸಮಸ್ಯೆ ಬಂದ ಕೂಡಲೇ ಪರಿಹಾರ ಕಾರ್ಯ ನಡೆಸಲಾಗುತ್ತಿದೆ ಎಂದು ಪರಮೇಶ್ವರ್‌ ಹೇಳಿದರು.

ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಮುಂಗಾರು ಮಳೆಗೆ ಬಿಬಿಎಂಪಿ ಸಿದ್ಧವಾಗಿದ್ದು, ತಿಂಗಳ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದರ ಪರಿಣಾಮ ನಗರದಲ್ಲಿ ಮಳೆಯಾದರೂ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next