ಬೆಂಗಳೂರು: ಸಂಜಯ್‌ನಗರದಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದ್ದು, ಮಹಿಳೆಯರ ಕುತ್ತಿಗೆ ಮೇಲೆ ಚಾಕು ಇಟ್ಟು ಸರ ದೋಚುವ ತಂಡ ಪುನ: ಸಕ್ರಿಯಗೊಂಡಿದೆ. ಬುಧವಾರ ಸಂಜೆ 45 ನಿಮಿಷಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬೆದರಿಸಿ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರಗಳ್ಳರನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸರಕಳೆದುಕೊಂಡ ವತ್ಸಲ ಪೊದ್ದಾರ್ ಹಾಗೂ ಮಂಜುಳಾ ಎಂಬುವವರು ನೀಡಿರುವ ಪ್ರತ್ಯೇಕ ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಸಂಜಯ್‌ನಗರ ಠಾಣೆ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಎನ್‌ಜಿಇಎಫ್ ಲೇಔಟ್ ಸುತ್ತಮುತ್ತಲ ಸರಗಳ್ಳರ ಹಾವಳಿ ಹೆಚ್ಚಿದ್ದು, ಪದೇ ಪದೆ ದುಷ್ಕರ್ಮಿಗಳು ಕೃತ್ಯ ಎಸಗುತ್ತಿದ್ದರೂ ಸರಗಳ್ಳರ ಹಾವಳಿಗೆ ಕಡಿವಾಣ ಬಿದ್ದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎಇಸಿಎಸ್ ಲೇಔಟ್‌ನಲ್ಲಿ ವತ್ಸಲ ಪೊದ್ದಾರ್ (64) ಎಂಬುವರು ಬುಧವಾರ ಸಂಜೆ 6.45ರ ಸುಮಾರಿಗೆ ತಮ್ಮ ಮನೆ ಮುಂದೆ ಮೊಮ್ಮಕ್ಕಳ ಜೊತೆ ವಾಕಿಂಗ್ ಮಾಡುತ್ತಿದ್ದರು. ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ವತ್ಸಲ ಅವರ ಕೊರಳಿನಲ್ಲಿದ್ದ 35 ಗ್ರಾಂ ಹಾಗೂ 12 ಗ್ರಾಂ ತೂಕದ 2 ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಳಿಕ 7.30ರ ಸುಮಾರಿಗೆ ಎನ್‌ಜಿಇಎಫ್ ಲೇಔಟ್ 2ನೇ ಕ್ರಾಸ್‌ನಲ್ಲಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಮಂಜುಳಾ (49) ಎಂಬುವವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ 60 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಇನ್ನೊಂದು ಚಿನ್ನದ ಸರವನ್ನು ದೋಚಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
1ಗಂಟೆ ಅವಧಿಯಲ್ಲಿ ಐದನೇ ಕೇಸ್!: ಜ.11ರಂದು ಬೆಳಗ್ಗೆ 1 ಗಂಟೆ ಅವಧಿಯಲ್ಲಿ ದುಷ್ಕರ್ಮಿಗಳು ಮೂವರು ಮಹಿಳೆಯರ ಸರಕಿತ್ತುಕೊಂಡು ಪರಾರಿಯಾಗಿದ್ದರು. 10.20ರ ಸುಮಾರಿಗೆ ಡಾಲರ್ ಕಾಲೋನಿಯ ಸಮೀಪದ 5ನೇ ಮುಖ್ಯರಸ್ತೆಯಲ್ಲಿ ಬಸಮ್ಮ,10.30ರ ಸುಮಾರಿಗೆ ಎಂ.ಎಸ್ ರಾಮಯ್ಯ ನಗರದ 4ನೇ ಮುಖ್ಯರಸ್ತೆಯಲ್ಲಿ ಸೊಸೆಯ ಜತೆ ದೇವಸ್ಥಾನಕ್ಕೆ ಶ್ಯಾಮಲಾ (63), ಎನ್‌ಜಿಎಫ್ ಲೇಔಟ್‌ನ ರಾಘವೇಂದ್ರ ಸ್ವಾಮಿ ದೇವಾಲಯದ ಸಮೀಪ 10.55ರ ಸುಮಾರಿಗೆ ಯಶೋಧ ಎಂಬುವವರಿಗೆ ಚಾಕು ತೋರಿಸಿ ದುಷ್ಕರ್ಮಿಗಳು ಸರಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.