Advertisement

ಮೂರು ತಿಂಗಳಲ್ಲಿ ಐದು ಟಿಬಿಎಂ

12:04 PM Aug 17, 2020 | Suhan S |

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕೆ ಬರಲಿರುವ ಐದು ಟನಲ್‌ ಬೋರಿಂಗ್‌ ಯಂತ್ರ (ಟಿಬಿಎಂ)ಗಳ ಪೈಕಿ ಮೂರು ಯಂತ್ರಗಳು ನೆರೆಯ ಚೆನ್ನೈನಲ್ಲೇ ಸಿದ್ಧಗೊಳ್ಳುತ್ತಿದ್ದು, ಅಕ್ಟೋಬರ್‌ನಿಂದ ಪೂರೈಕೆ ಆರಂಭವಾಗಲಿದೆ.

Advertisement

ಸುರಂಗ ಮಾರ್ಗದ ಪ್ಯಾಕೇಜ್‌ 2-3ರಲ್ಲಿ ಈಗಾಗಲೇ ನಾಲ್ಕು ಟಿಬಿಎಂಗಳು ಬಂದಿವೆ. ಉಳಿದ 1 ಮತ್ತು 4ನೇ ಪ್ಯಾಕೇಜ್‌ಗಳಿಗೆ ಒಟ್ಟಾರೆ ಐದು ಟಿಬಿಎಂಗಳನ್ನು ಭೂಮಿಯ ಆಳದಲ್ಲಿ ಇಳಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಮೂರು ಜರ್ಮನಿ ಹಾಗೂ ಎರಡು ಚೀನಾದಿಂದ ಪೂರೈಸಲು ನಿರ್ಧರಿಸಲಾಗಿತ್ತು. ಈಗ ಚೆನ್ನೈನಲ್ಲಿಯೇ ಸಿದ್ಧಗೊಳ್ಳುತ್ತಿದ್ದು, ಸಕಾಲದಲ್ಲಿ ಪೂರೈಕೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಎರಡು ಯಂತ್ರಗಳನ್ನು ದೆಹಲಿ ಮೆಟ್ರೋ ಕಾಮಗಾರಿಯಲ್ಲಿ ಬಳಸಲಾಗಿತ್ತು. ಮತ್ತೆ ದುರಸ್ತಿಗೊಳಿಸಿ ನಮ್ಮ ಮೆಟ್ರೋ ಕಾರ್ಯಕ್ಕೆ ಅಣಿಗೊಳಿಸಲಾಗುತ್ತಿದೆ ಎನ್ನಲಾಗಿದೆ. ಮತ್ತೂಂದನ್ನು ಚೆನ್ನೈನಲ್ಲಿಯೇ ತಯಾರಿಸಲಾಗುತ್ತಿದೆ. ಇವೆಲ್ಲವೂ ಪ್ಯಾಕೇಜ್‌- 4ರಲ್ಲಿ ಅಂದರೆ ಟ್ಯಾನರಿ ರಸ್ತೆ-ನಾಗವಾರ ಮಧ್ಯೆ ಸುರಂಗ ಕೊರೆಯಲಿವೆ. ಇಲ್ಲಿ ಮಣ್ಣು ಮೃದುವಾಗಿರುವುದರಿಂದ ಯಂತ್ರಗಳ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಬಳಕೆಯಾದ ಯಂತ್ರಗಳ ಪ್ರಯೋಗಕ್ಕೆ ಇದು ಒಂದು ಕಾರಣ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಪ್ಯಾಕೇಜ್‌- 1ರ ಡೈರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ ನಡುವಿನ ಮಾರ್ಗಕ್ಕೆ ಚೆನ್ನೆç ಮೂಲದಿಂದ ಯಂತ್ರಗಳು ಪೂರೈಕೆ ಆಗಲಿವೆ. ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಒಟ್ಟಾರೆ ಐದು ಯಂತ್ರಗಳು ನಗರಕ್ಕೆ ಬರಲಿವೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಎಂಜಿನಿಯರೊಬ್ಬರು ಉದಯವಾಣಿಗೆ ತಿಳಿಸಿದರು.

ಏನು ಉಪಯೋಗ?: ಯಂತ್ರಗಳು ನೆರೆಯ ಚೆನ್ನೈ ಯಿಂದ ಪೂರೈಕೆ ಆಗುವುದರಿಂದ ಯೋಜನೆ ಪ್ರಗತಿ ದೃಷ್ಟಿಯಿಂದ ಕೋವಿಡ್ ಹಾವಳಿ ಸಂದರ್ಭದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ಯಂತ್ರದ ಯಾವುದೇ ಭಾಗ ಹಾಳಾದರೂ ದೂರ ಯೂರೋಪಿಗೆ ಅಥವಾ ಚೀನಾಕ್ಕೆ ಹೋಗುವುದು ತಪ್ಪಲಿದೆ. ತಂತ್ರಜ್ಞರು ಸುಲಭವಾಗಿ ಲಭ್ಯವಾಗುತ್ತಾರೆ. ಇದರಿಂದ ಸಮಯ ಉಳಿತಾಯ ಆಗಲಿದೆ. ಮಾರ್ಗಮಧ್ಯೆ ಯಂತ್ರ ಕೆಟ್ಟುನಿಂತರೆ, ತಕ್ಷಣಕ್ಕೆ ತಜ್ಞರ ತಂಡವನ್ನು ಕರೆತಂದು, ದುರಸ್ತಿಗೊಳಿಸಬಹುದು. ಇದಲ್ಲದೆ, ಹೊರದೇಶದಿಂದ ಬರಬೇಕಾದರೆ, ಹಡಗಿನಲ್ಲೇ ಒಂದೂವರೆಯಿಂದ ಎರಡು ತಿಂಗಳು ಬರಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಹೆಚ್ಚು ಅನುಕೂಲ ಆಗಲಿದೆ ಎಂಬುದು ನಿಗಮದ ತಜ್ಞರ ಲೆಕ್ಕಾಚಾರ.

1.5 ಕಿ.ಮೀ.ಗೊಂದು ಯಂತ್ರ!: ಡಿಸೆಂಬರ್‌ ನಂತರ ಒಟ್ಟಾರೆ 13.87 ಕಿ.ಮೀ. ಉದ್ದದ ಸುರಂಗ ಮಾರ್ಗಕ್ಕೆ 9 ಯಂತ್ರಗಳು ನಿಯೋಜನೆಗೊಳ್ಳಲಿವೆ. ಅಂದರೆ ಪ್ರತಿ ಒಂದೂವರೆ ಕಿ.ಮೀ.ಗೆ ಒಂದು ಟಿಬಿಎಂ ಸುರಂಗ ಕೊರೆಯಲಿದೆ. ಜೋಡಿ ಸುರಂಗವನ್ನು ಲೆಕ್ಕಹಾಕಿದರೆ, ಮೂರು ಕಿ.ಮೀ.ಗೆ ಒಂದು ಯಂತ್ರ ಆಗಲಿದೆ. ಇದರಿಂದ ಸುರಂಗ ನಿರ್ಮಾಣ ತ್ವರಿತಗತಿಯಲ್ಲಿ ಸಾಗಲಿದೆ ಎಂಬ ವಿಶ್ವಾಸ ಎಂಜಿನಿಯರ್‌ಗಳದ್ದಾಗಿದೆ.

Advertisement

ಲೆಕ್ಕಾಚಾರ ಹೀಗೂ ಉಂಟು :  ಈ ಹಿಂದೆ ಟಿಬಿಎಂಗಳು ಚೀನಾದಿಂದ ಪೂರೈಕೆ ಆಗುತ್ತಿದ್ದವು (ಈಗಲೂ ಆಗುತ್ತಿವೆ). ಆಗ, 80 ಕೋಟಿ ಮೌಲ್ಯದ ಈ ದೈತ್ಯ ಯಂತ್ರಗಳ ಮೇಲಿನ ಆಮದು ಸುಂಕ ತೆಗೆದು ಹಾಕಲಾಗಿತ್ತು. ಇದರ ಹಿಂದೆ ಚೀನಾದಿಂದಲೇ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಲಾಬಿಯೂ ಕೆಲಸ ಮಾಡುತ್ತಿತ್ತು ಎನ್ನಲಾಗಿದೆ. ಆಮದು ಸುಂಕ ತೆಗೆದು ಹಾಕಿದಾಗ, ಮೆಟ್ರೋ ಯೋಜನೆಗಳ ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳಿಗೆ 10-15 ಕೋಟಿ ರೂ. ಆಗುತ್ತಿತ್ತು. 1,500 ಕೋಟಿ ಮೊತ್ತದ ಸುರಂಗ ಕಾಮಗಾರಿಗೆ ಸಂಬಂಧಿಸಿದಂತೆ ಎರಡು-ಮೂರು ಕಂಪನಿಗಳು ಕೋಟ್‌ ಮಾಡುವ ಬಿಡ್‌ ಮೊತ್ತ ಕೂಡ ಹೆಚ್ಚು-ಕಡಿಮೆ ಕೇವಲ 10-15 ಕೋಟಿ ರೂ. ಮಾತ್ರ ವ್ಯತ್ಯಾಸ ಇರುತ್ತದೆ. ಸುಂಕ ಶೂನ್ಯದ ರೂಪದಲ್ಲಿ ಇದನ್ನು ಆ ಕಂಪನಿಗಳು ಸರಿದೂಗಿಸಿಕೊಳ್ಳುತ್ತಿದ್ದವು.

 

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next