Advertisement

ಅಗ್ನಿಪರೀಕ್ಷೆಯ ಪಂಚ ಮೆಟ್ಟಿಲುಗಳು

11:52 PM Oct 15, 2023 | Team Udayavani |

ಬಹುನಿರೀಕ್ಷೆಯ ಐದು ರಾಜ್ಯಗಳ ವಿಧಾನಸಭೆ ವೇಳಾಪಟ್ಟಿ ಪ್ರಕಟವಾಗುವುದರೊಂದಿಗೆ ಮುಂದಿನ ಏಳು ತಿಂಗಳ ವರೆಗೆ ದೇಶದಲ್ಲಿ ಚುನಾವಣೆಯ ಮನಃಸ್ಥಿತಿಯನ್ನು ಸಹಜವಾಗಿಯೇ ರಾಜಕೀಯ ಪಕ್ಷಗಳಲ್ಲಿ, ದೇಶವಾಸಿಗಳಲ್ಲಿ ತಂದಿಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ ಗಢ, ಮಿಜೋರಾಂ ಚುನಾವಣೆಗಳು ಹಲವು ಹಿರಿಯ ನಾಯಕರಿಗೆ ಅಗ್ನಿ ಪರೀಕ್ಷೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಲಿದೆ.

Advertisement

ಹೀಗೆಂದು ಉಲ್ಲೇಖೀಸಲು ಕಾರಣಗಳಿವೆ. ಒಂದು ಅವರ ವರ ವಯಸ್ಸು ಮತ್ತು ಕಾಲ ಸಹಜವಾಗಿ ಉಂಟಾಗಲಿರುವ ಪರಿವರ್ತನೆಗೆ ಒಂದು ನೆಪ ಮಾತ್ರದ ಕಾರಣೀಭೂತವಾಗಿ ಪಂಚರಾಜ್ಯ ಮತ್ತು ಮುಂದಿನ ಲೋಕಸಭೆಯ ಚುನಾವಣೆಗಳು ದಾರಿ ಮಾಡಿಕೊಡಲಿರುವುದು ಸತ್ಯವೇ ಆಗಲಿದೆ. ಬಿಜೆಪಿಯ ದೃಷ್ಟಿಯಿಂದ ನೋಡುವುದಿದ್ದರೆ ಮಧ್ಯಪ್ರದೇಶದ ಚುನಾವಣೆ ಸತ್ವ ಪರೀಕ್ಷೆಯೇ ಆಗಿರಲಿದೆ. ಇದುವರೆಗೆ 4 ಪಟ್ಟಿಗಳು ಪ್ರಕಟವಾಗಿವೆ. ಐದನೇ ಪಟ್ಟಿಯಲ್ಲಿ ಹಾಲಿ ವಿಧಾನಸಭೆಯಲ್ಲಿ ಇರುವ ಶಾಸಕರ ಪೈಕಿ 25ರಿಂದ 30 ಮಂದಿ ಶಾಸಕರಿಗೆ ಹಲವು ಕಾರಣಗಳಿಂದ ಟಿಕೆಟ್‌ ನಿರಾಕರಿಸುವ ಸಾಧ್ಯತೆಗಳು ಅಧಿಕವಾಗಿವೆ. ಇದುವರೆಗಿನ ಪಟ್ಟಿಯಲ್ಲಿ ಮೂವರು ಕೇಂದ್ರ ಸಚಿವರನ್ನು ಕಣಕ್ಕೆ ಇಳಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಟಿಕೆಟ್‌ ಕೊಡಲಾಗುವುದಿಲ್ಲ ಎಂಬ ಬಗ್ಗೆ ವದಂತಿಗಳು ಇದ್ದದ್ದು ಸುಳ್ಳಾಗಿವೆ.

ಇದೆಲ್ಲದರ ನಡುವೆಯೇ ಬಿಜೆಪಿಗೆ ಕಾಂಗ್ರೆಸ್‌ನಿಂದ ಬಂದಿದ್ದ ಹಲವು ನಾಯಕರು ಮತ್ತು ಅವರ ಬೆಂಬಲಿಗರು ಮತ್ತೆ ಕಾಂಗ್ರೆಸ್‌ಗೆ ವಾಪಸಾಗಿದ್ದಾರೆ. ಕರ್ನಾಟಕದಲ್ಲಿ ಘೋಷಣೆ ಮಾಡಿರುವಂತೆ ಐದು ಘೋಷಣೆಗಳನ್ನು ಕಾಂಗ್ರೆಸ್‌ ಆ ರಾಜ್ಯದಲ್ಲಿಯೂ ಮಾಡಿದೆ.

ಬಿಹಾರದಲ್ಲಿನ ಜಾತಿ ಗಣತಿ ವರದಿಯ ಬಳಿಕ ಮಧ್ಯಪ್ರದೇಶದಲ್ಲಿ ಅದನ್ನು ನಡೆಸುತ್ತೇವೆ ಎಂಬ ವಾಗ್ಧಾನ ಕಾಂಗ್ರೆಸ್‌ ವತಿಯಿಂದ ಹೊರ ಬಿದ್ದಿದೆ. ಇದರ ಜತೆಗೆ ಹೆಚ್ಚುತ್ತಿರುವ ನಿರುದ್ಯೋಗ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸವಾಲಿನದ್ದೇ ಆಗಿರಲಿದೆ. ಶಿವರಾಜ್‌ ಸಿಂಗ್‌ ಚೌಹಾಣ್‌ ತಾವು ಅಧಿಕಾರದಲ್ಲಿ ಮುಂದುವರಿದರೆ ಪ್ರತೀ ಮನೆಗೊಂದು ಸರಕಾರಿ ಉದ್ಯೋಗ ಎಂಬ ಭರವಸೆಯನ್ನೂ ನೀಡಿದ್ದಾರೆ.

ಇದರ ಜತೆ ಕಮಲ್‌ ನಾಥ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಪತನಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಹಾಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳಿವೆ. ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಸಿಂಧಿಯಾ ಅವರೇ ಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳೂ ನಡೆದಿವೆ. ಏಕೆಂದರೆ ಸದ್ಯ ಅವರು ಹೊಂದಿರುವ ನಾಗರಿಕ ವಿಮಾನಯಾನ ಖಾತೆಗೆ ಈಗ ಏನೂ ಮಹತ್ವವಿಲ್ಲ.

Advertisement

ಇನ್ನು ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಲ್ಲೂ ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟ ಇದೆ, ಕಾಂಗ್ರೆಸ್‌ನಲ್ಲಿ ಸಿಎಂ ಅಶೋಕ್‌ ಗೆಹೊÉàಟ್‌ ಯಾವುದೇ ಕಾರಣಕ್ಕೂ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ಗೆ ಅವಕಾಶ ಬಿಟ್ಟುಕೊಡುವುದಿಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ. ಇನ್ನು ಬಿಜೆಪಿಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಬದಲಾಗಿ ಹೊಸ ಮುಖ ತರುವ ಪ್ರಯತ್ನ ನಡೆದಿದೆ. ಏಕೆಂದರೆ 20 ವರ್ಷಗಳ ಕಾಲ ಅವರೇ ಪ್ರಧಾನವಾಗಿದ್ದವರು. 2003 ಮತ್ತು 2013ರಲ್ಲಿ ಸರಕಾರದ ನೇತೃತ್ವ ವಹಿಸಿದ್ದವರು.

ಬಿಜೆಪಿಯ ಹಾಲಿ ವರಿಷ್ಠ ಮಂಡಳಿ ಜತೆಗೆ ವಸುಂಧರಾ ರಾಜೇ ಸಂಬಂಧ ಅಷ್ಟಕ್ಕಷ್ಟೇ ಎಂಬ ಮಾತುಗಳು ಇವೆ. ಹಾಗೆಂದು ಸದ್ಯಕ್ಕೆ ಅವರೇ ಪ್ರಮುಖ ನಾಯಕಿಯೂ ಹೌದು. ಆ ರಾಜ್ಯಕ್ಕಾಗಿ ಪ್ರಕಟಿಸಲಾಗಿರುವ 41 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಏಳು ಮಂದಿ ಸಂಸದರೇ ಇದ್ದಾರೆ ಮತ್ತು ವಸುಂಧರಾ ಹೆಸರು ಇಲ್ಲ. ಕಣಕ್ಕೆ ಇಳಿಸಲಾಗಿರುವ ಸಂಸದರ ಪೈಕಿ ಈ ಪೈಕಿ ಮಾಜಿ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌, ರಾಜವಂಶಸ್ಥೆ ದಿಯಾ ಕುಮಾರಿ ಪ್ರಮುಖರು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಚೌಹಾಣ್‌ ಕೂಡ ಅವಕಾಶ ಸಿಕ್ಕಿದರೆ ಸ್ಪರ್ಧಿಸುವ ಇರಾದೆಯನ್ನು ಹೊಂದಿದ್ದಾರಂತೆ. ದಿಯಾ ಕುಮಾರಿ ಅವರನ್ನು ವಸುಂಧರಾಗೆ ಪರ್ಯಾಯವಾಗಿ ಬೆಳೆಸುವ ಇರಾದೆ ಮೋದಿ- ಶಾಗೆ ಇದೆ. ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯದ್ದು ಮೊದಲ ಪಟ್ಟಯಷ್ಟೇ ಬಿಡುಗಡೆಯಾಗಿದೆ. ಹೀಗಾಗಿ ಇನ್ನೂ ಕಾದು ನೋಡುವುದಿದೆ. ಮಧ್ಯಪ್ರದೇಶದಂತೆ ಇಲ್ಲಿಯೂ ಕೂಡ ಜಾತಿ ಗಣತಿ ಬಲುದೊಡ್ಡ ಸದ್ದು ಮಾಡುತ್ತಿದೆ

ಛತ್ತೀಸ್‌ಗಢದಲ್ಲಿ ಹದಿನೈದು ವರ್ಷಗಳ ಕಾಲ ಡಾ| ರಮಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರಕಾರದ 2018ರ ಚುನಾವಣೆಯಲ್ಲಿ ಸೋಲು ಅನುಭವಿಸಿ ಭೂಪೇಶ್‌ ಭಗೇಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದೆ. ಒಟ್ಟು 90 ಕ್ಷೇತ್ರಗಳ ಈ ರಾಜ್ಯದಲ್ಲಿ 13 ಕ್ಷೇತ್ರಗಳಲ್ಲಿ ಪ್ರಧಾನವಾಗಿ ತುರುಸಿನ ಸ್ಪರ್ಧೆ ಉಂಟಾಗಲಿದೆ. ಭೂಪೇಶ್‌ ಭಗೇಲ್‌ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತವನ್ನೇ ನೀಡಿದ್ದಾರೆ ಎಂಬ ಮಾತುಗಳಿವೆ. ಅದಕ್ಕೆ ಪೂರಕವಾಗಿ ನಡೆದಿದ್ದ ಐದು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕೃಷಿಯೇ ಪ್ರಧಾನವಾಗಿರುವ ಈ ರಾಜ್ಯದಲ್ಲಿ ರಾಜೀವ್‌ ಗಾಂಧಿ ಕಿಸಾನ್‌ ನ್ಯಾಯ ಯೋಜನೆ, ಪ್ರತೀ ಕ್ವಿಂಟಾಲ್‌ ಭತ್ತಕ್ಕೆ 2,500 ರೂ. ನೀಡಿ ಖರೀದಿಸುವ ಯೋಜನೆ 2ನೇ ಅವಧಿಗೆ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ,

ಬಿಜೆಪಿ ಕೂಡ ರಾಜ್ಯದಲ್ಲಿ ಪ್ರತಿ ಹೋರಾಟವನ್ನು ನೀಡುವ ನಿಟ್ಟಿನಲ್ಲಿಯೇ ಸಿದ್ಧತೆ ನಡೆಸಿದೆ. ಒಬಿಸಿ ಸಮುದಾಯದಲ್ಲಿ ಪ್ರಮುಖ ವರ್ಗವಾಗಿರುವ ಸಾಹು ಸಮುದಾಯದತ್ತ ಕೇಂದ್ರೀಕರಿಸಿದೆ. ಒಂದು ಪಟ್ಟಿ ಬಿಡುಗಡೆಯಾ ಗಿದ್ದು, ಮಾಜಿ ಸಿಎಂ ರಮಣ್‌ ಸಿಂಗ್‌ ಕೂಡ ಸ್ಥಾನ ಪಡೆದಿದ್ದಾರೆ. ಈಗಾಗಲೇ ಮೂವರು ಸಂಸದರನ್ನು ಕಣ ಕ್ಕಿಳಿಸಲಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಕುಮ್ರಿ, ಯಾದವ್‌, ಮಾರಾರ್‌, ಅಘರಾರಿಯಾ ಪಟೇಲ್‌, ಕೇವಟ್‌ ಸಮುದಾಯದ ಮತಗಳನ್ನು ನೆಚ್ಚಿಕೊಂಡಿದೆ. ಇದಲ್ಲದೆ ಕಾಂಗ್ರೆಸ್‌ ಅನುಸರಿಸುವ ಮೃದು ಹಿಂದುತ್ವ ಕೂಡ ಬಿಜೆಪಿಗೆ ಸವಾಲು ತಂದೊಡ್ಡಲಿದೆ. ನಗರ ಪ್ರದೇಶಗಳಲ್ಲಿ ಹಾಲಿ ಕಾಂಗ್ರೆಸ್‌ ಸರಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂಬ ವಾದಗಳೂ ಇವೆ.

ದಕ್ಷಿಣ ಭಾರತದ ಹೊಸ ರಾಜ್ಯ ತೆಲಂಗಾಣಕ್ಕೆ ಈ ಬಾರಿ ಮೂರನೇ ವಿಧಾನಸಭೆ ಚುನಾವಣೆ. ಅಲ್ಲಿ ಬಿಆರ್‌ಎಸ್‌, ಕಾಂಗ್ರೆಸ್‌, ವೈ.ಎಸ್‌. ಶರ್ಮಿಳಾರ ವೈಆರ್‌ಎಸ್‌ಆರ್‌ಪಿ ತೆಲಂಗಾಣ, ಬಿಜೆಪಿ ಪ್ರಧಾನ ಪಕ್ಷಗಳು. ಪ್ರತ್ಯೇಕ ರಾಜ್ಯ ರಚನೆಗೆ ಕಾರಣಕರ್ತರು ಎಂಬ ಹೆಗ್ಗಳಿಕೆಯಲ್ಲಿರುವ ಕೆ.ಚಂದ್ರಶೇಖರ ರಾವ್‌ ಅವರಿಗೆ 3ನೇ ಬಾರಿಗೆ ಪದವಿ ಉಳಿಸಿಕೊಳ್ಳುವ ಬಗ್ಗೆ ಹಲವು ಸವಾಲುಗಳಿವೆ. ಹಲವು ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣ ರಾಗಿರುವುದರ ಜತೆಗೆ ತೆಲಂಗಾಣ ಹೊಂದಿರುವ ತಲಾ ಆದಾಯ ದೇಶದಲ್ಲಿಯೇ ಮೂರನೇ ಅತ್ಯಧಿಕದ್ದಾಗಿದೆ. ಹಾಲಿ ಇರುವ ಶಾಸಕರ ಪೈಕಿ ಹೆಚ್ಚಿನವರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಜತೆಗೆ ವಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.

ಜತೆಗೆ ಹಲವರು ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಖುದ್ದು ಸಿಎಂ ಚಂದ್ರ ಶೇಖರ ರಾವ್‌ ಅವರೇ 2 ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿ ದ್ದಾರೆ. ಬಿಆರ್‌ಎಸ್‌ನಲ್ಲಿ ಇತರ ಹಿಂದುಳಿದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ ಎಂಬ ಆರೋಪಗಳೂ ಹೆಚ್ಚಾಗಿವೆ. ಆ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗದವರ ಪ್ರಮಾಣವೇ ಶೇ.52. ಈ ನಿಟ್ಟಿನಲ್ಲಿ ಕಾಂಗ್ರೆಸ್‌, ಬಿಜೆಪಿ ಹೆಚ್ಚಿನ ಆದ್ಯತೆ ನೀಡಿದರೆ ಅದು ಬಿಆರ್‌ ಎಸ್‌ ಗೆ ಪ್ರತಿಕೂಲವಾಗಲಿದೆ ಎಂಬ ಮಾತುಗಳಿವೆ.

40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈಶಾನ್ಯ ಭಾಗದ ಪುಟ್ಟ ರಾಜ್ಯ ಮಿಜೋ ರಾಂನ ಲ್ಲಿ 1998ರ ಬಳಿಕ ಸ್ಥಿರ ಸರಕಾರಗಳು ಬಂದಿವೆ ಎಂದರೆ ತಪ್ಪಾಗಲಾರದು. ಸದ್ಯ ಅಧಿಕಾರದಲ್ಲಿರುವ ಮಿಜೋ ನ್ಯಾಶನಲ್‌ ಫ್ರಂಟ್‌ ಝೋರಾಮ್‌ ತಾಂಗಾ ನೇತೃತ್ವದಲ್ಲಿ 1998ರಿಂದ 2003ರ ವರೆಗೆ ಮತ್ತು ಲಾಲ್ತನ್‌ ಹಾವ್ಲಾ ನೇತೃತ್ವದ ಕಾಂಗ್ರೆಸ್‌ ಸರಕಾರ 2008ರಿಂದ 2013ರ ವರೆಗೆ ಅಧಿಕಾರ ನಡೆಸಿತ್ತು.

ಈ ಬಾರಿಯ ವಿಶೇಷತೆ ಏನೆಂದರೆ ಲಾಲುªಹೋಮಾ ಅವರ ಝೋರಾಂ ಪೀಪಲ್ಸ… ಮೂವ್‌ ಮೆಂಟ್‌ ಪ್ರಬಲವಾಗಿ ರುವಂತೆ ಗೋಚರಿಸುತ್ತಿದೆ. ಹಾಲಿ ಇರುವ ವಿಧಾನಸಭೆಯಲ್ಲಿ 6 ಮಂದಿ ಶಾಸಕರನ್ನು ಹೊಂದಿದೆ. ಕಾಂಗ್ರೆಸ್‌ ನೇತೃತ್ವದ ಹಿಂದಿನ ಯುಪಿಎ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಹಾಲಿ ಚುನಾವಣೆಯಲ್ಲಿ ಎಲ್ಲ 40 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಕಾಂಗ್ರೆಸ್‌ ಕೂಡ ಎಲ್ಲ ಕ್ಷೇತ್ರಗಳಿಗೆ ಸ್ಪರ್ಧೆ ಮಾಡಿದೆ. ಹೀಗಾಗಿ ಮಿಜೋರಾಂನಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ. ಶೇ.87 ಕ್ರಿಶ್ಚಿಯನ್‌ ಸಮುದಾಯವೇ ಪ್ರಧಾನವಾಗಿರುವ ಈ ರಾಜ್ಯದಲ್ಲಿ ಮಿಜೋ, ಕುಕಿ, ಚಿನ್‌- ಜೋ ಸಮುದಾಯದವರು ಕೂಡ ಇದ್ದಾರೆ. ನಗರ ಪ್ರದೇಶದಲ್ಲಿ ನೋಡುವುದಿದ್ದರೆ ಝೋರಾಂ ಪೀಪಲ್ಸ… ಮೂವ್‌ಮೆಂಟ್‌ ಇತ್ತೀಚೆಗೆ ನಡೆದ ಕೆಲವೊಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಲವೊಂದು ವಾರ್ಡ್‌ಗಳಲ್ಲಿ ಗೆದ್ದಿದೆ.

 ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next