ಬೆಂಗಳೂರು: ರಾಜಧಾನಿಯ ಮತ್ತೆ ಹತ್ತು ಮಂದಿ ಪೊಲೀಸರು ಮತ್ತು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿ-ಸಿಬ್ಬಂದಿ ಹಾಗೂ ವಿಚಾರಣಾಧೀನ ಕೈದಿಗಳಿಗೆ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.
ಸುದ್ದಗುಂಟೆಪಾಳ್ಯ ಠಾಣೆ, ಕುಮಾರಸ್ವಾಮಿ ಲೇಔಟ್, ಸಿಟಿ ಮಾರುಕಟ್ಟೆ, ಅನ್ನಪೂರ್ಣೇಶ್ವರಿನಗರ, ಸದಾಶಿವನಗರ ಮತ್ತು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೋವಿಡ್ 19 ಕಾಣಿಸಿಕೊಂಡಿದ್ದು, ಒಂದೇ ದಿನದಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸುದ್ದಗುಂಟೆ ಪಾಳ್ಯ, ಕುಮಾರಸ್ವಾಮಿ ಲೇಔಟ್ ಮತ್ತು ಸಿಟಿ ಮಾರು ಕಟ್ಟೆ ಪೊಲೀಸ್ ಠಾಣೆಯ ಅಧಿಕಾರಿ-ಸಿಬ್ಬಂದಿಗೆ ಕರ್ತವ್ಯದ ವೇಳೆ ಕೋವಿಡ್ 19 ದಾಳಿ ಮಾಡಿದ್ದು,
ಈ ಹಿಂದೆ ಸೋಂಕಿಗೊಳಗಾಗಿದ್ದ ಸಿಬ್ಬಂದಿಯಿಂದ ಈ ಸಿಬ್ಬಂದಿಗೆ ಬಂದಿದೆ. ಸುಮಾರು 60 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ, ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆ ಪ್ರಕರಣದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಆರೋಪಿಗಳಿಗೆ ಕೋವಿಡ್ 19 ಪರೀಕ್ಷೆಗೊಳಪಡಿಸಿದಾಗ ಇದೀಗ ಮೂವರಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ.
ಅಲ್ಲದೆ, ಅವರ ಸಂಪರ್ಕ ದಲ್ಲಿದ್ದ ಒಬ್ಬ ಸಿಬ್ಬಂದಿಗೂ ಸೋಂಕು ತಗುಲಿದೆ. ಆದ್ದರಿಂದ ಅವರ ಸಂಪರ್ಕದಲ್ಲಿದ್ದ ಎಲ್ಲ ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೂ 10 ಠಾಣೆ ಸೀಲ್ ಡೌನ್ ಮಾಡಲಾಗಿದೆ. ನಗರದಲ್ಲಿ 200ಕ್ಕೂ ಅಧಿಕ ಮಂದಿ ಪೊಲೀಸರಲ್ಲಿ ಸೋಂಕು ಪತ್ತೆಯಾಗಿದ್ದು, 70 ಮಂದಿ ಗುಣಮುಖರಾಗಿದ್ದಾರೆ. 600 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
ಆರೋಪಿಯೊಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದ್ದು 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಠಾಣೆಗೆ ಔಷಧಿ ಸಿಂಪಡಿಸಲಾಗಿದೆ.