Advertisement

Five state elections: ಜಾತಿಗಣತಿಯಿಂದ ಮೀಸಲಾತಿವರೆಗೆ…

12:35 AM Nov 22, 2023 | Team Udayavani |

ಈಗಾಗಲೇ ಮಧ್ಯಪ್ರದೇಶ, ಛತ್ತೀಸ್‌ಗಢ‌ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದಿದ್ದು, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಮಾತ್ರ ಬಾಕಿ ಇದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆಯೂ ಇರುವ ಹಿನ್ನೆಲೆಯಲ್ಲಿ ಈ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಜಾತಿಗಣತಿ, ಹಿಂದುತ್ವ, ಗ್ಯಾರಂಟಿ, ಮೀಸಲಾತಿಯಂಥ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಿದೆ.

Advertisement

ಮಧ್ಯಪ್ರದೇಶ

ಇಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರಕಾರವಿದ್ದು, ಆಡಳಿತ ವಿರೋಧಿ ಅಲೆಯೂ ಕೆಲಸ ಮಾಡುತ್ತಿದೆ. 2018ರಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡೆದು, ಕಮಲ್‌ನಾಥ್‌ ಅವರು ಸಿಎಂ ಆಗಿದ್ದರು. ಆಗ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮುನಿಸಿಕೊಂಡಿದ್ದರು. ಸಿಂಧಿಯಾ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಹೋದ ಕಾರಣ, ಕಮಲ್‌ನಾಥ್‌ ಸಿಎಂ ಸ್ಥಾನ ಕಳೆದುಕೊಂಡರು. ಹೀಗಾಗಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತೆ ಸಿಎಂ ಆಗಿದ್ದಾರೆ. ಇಲ್ಲಿಯೂ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಜತೆಗೆ 50 ಪರ್ಸೆಂಟ್‌ ಕಮಿಷನ್‌ ಸರಕಾರ ಎಂದು ಬಿಜೆಪಿ ಸರಕಾರದ ಬಗ್ಗೆ ಆರೋಪಿಸುತ್ತಿದೆ. ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳ ಬಗ್ಗೆ ಘೋಷಣೆ ಮಾಡಿದೆ.

ರಾಜಸ್ಥಾನ

ಸದ್ಯ ಇಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇಲ್ಲಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವುದು ವಾಡಿಕೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಸದ್ಯ ಈ ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಆಡಳಿತ ವಿರೋಧಿ ಅಲೆ ಮತ್ತು ಆಂತರಿಕ ಕಚ್ಚಾಟದ ವಿಚಾರಗಳು. ಕಾಂಗ್ರೆಸ್‌ ಯಥಾ ಪ್ರಕಾರ, ತನ್ನ ಗ್ಯಾರಂಟಿಗಳ ಜತೆ ಚುನಾವಣೆಗೆ ಧುಮುಕಿದೆ. ಇದರ ಜತೆಯಲ್ಲಿ ಜಾತಿಗಣತಿ ಮಾಡುವ ಭರವಸೆ ನೀಡುತ್ತಿದೆ.

Advertisement

ತೆಲಂಗಾಣ

ದಕ್ಷಿಣ ಭಾರತದ ರಾಜ್ಯವಾಗಿರುವ ತೆಲಂಗಾಣದಲ್ಲಿ ಈ ಬಾರಿ ಬಿಆರ್‌ಎಸ್‌ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಸಡ್ಡು ಹೊಡೆದಿವೆ. ಕಳೆದ 10 ವರ್ಷಗಳಿಂದ ಬಿಆರ್‌ಎಸ್‌ನ ಕೆ.ಚಂದ್ರಶೇಖರ ರಾವ್‌ ಅವರು ಸಿಎಂ ಆಗಿದ್ದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆ ಕಾಂಗ್ರೆಸ್‌ನಿಂದ ಬಿಆರ್‌ಎಸ್‌ ಮತ್ತು ಬಿಜೆಪಿಗೆ ಹೋಗಿದ್ದ ಬಹುತೇಕ ಮಂದಿ ಈಗ ವಾಪಸ್‌ ಹೋಗಿದ್ದಾರೆ. ಹೀಗಾಗಿ ಪಕ್ಷಕ್ಕೆ ಬಲ ಬಂದಂತಾಗಿದೆ. ಕಾಂಗ್ರೆಸ್‌ ಆರು ಗ್ಯಾರಂಟಿಗಳನ್ನು ಘೋಷಿಸಿದೆ. ಬಿಜೆಪಿ ಒಬಿಸಿ ಸಿಎಂ, ಮುಸ್ಲಿಂ ಮೀಸಲಾತಿ ರದ್ದು ಸೇರಿದಂತೆ ವಿವಿಧ ಭರವಸೆ ನೀಡಿದೆ. ಬಿಆರ್‌ಎಸ್‌ ತನ್ನ ಹಿಂದಿನ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ.

ಮಿಜೋರಾಂ

ಮಿಜೋರಾಂನಲ್ಲಿ ಮಿಜೋ ನ್ಯಾಶನಲ್‌ ಫ್ರಂಟ್‌(ಎಂಎನ್‌ಎಫ್) ಸರಕಾರ ಇದ್ದು, ಆಡಳಿತ ವಿರೋಧಿ ಅಲೆ ಇದೆ. ಇಲ್ಲಿ ರಾಷ್ಟ್ರೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಸ್ಥಳೀಯ ಸಮಸ್ಯೆಗಳೇ ಕಾಡುತ್ತಿವೆ. ನೆರೆಯ ಮಣಿಪುರದ ಸಂಘರ್ಷವೂ ಚುನಾವಣೆ ಮೇಲೆ ಅಡ್ಡಪರಿಣಾಮ ಬೀರಿದೆ. ಇಲ್ಲಿ ಮಿಜೋ ನ್ಯಾಶನಲ್‌ ಫ್ರಂಟ್‌ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಎಂಎನ್‌ಎಫ್ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೂ, ರಾಜ್ಯದಲ್ಲಿ ಯಾವುದೇ ಮೈತ್ರಿ ಇಲ್ಲ.

ಛತ್ತೀಸ್‌ಗಢ

ಸದ್ಯ ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರವಿದ್ದು, ಅಷ್ಟೇನೂ ಆಡಳಿತ ವಿರೋಧಿ ಅಲೆ ಕಾಣಿಸುತ್ತಿಲ್ಲ. ಹೀಗಾಗಿ ಸಮೀಕ್ಷೆಗಳು ಮತ್ತೆ ಕಾಂಗ್ರೆಸ್‌ ಸರಕಾರವೇ ಬರುವ ಬಗ್ಗೆ ಭವಿಷ್ಯ ನುಡಿದಿವೆ. ಇಲ್ಲಿ ರೈತರ ಸಮಸ್ಯೆಗಳು, ಸಾಮಾಜಿಕ ಸಂಘರ್ಷ, ಒಬಿಸಿ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಅಲ್ಲದೆ ಉಳಿದ ರಾಜ್ಯಗಳಂತೆ ಕಾಂಗ್ರೆಸ್‌, ಭೂಪೇಶ್‌ ಬಘೇಲ್‌ ಅವರ ಜನಪ್ರಿಯತೆ ಮತ್ತು ಗ್ಯಾರಂಟಿಗಳ ಜತೆ ಚುನಾವಣೆಗೆ ಸಜ್ಜಾಗಿದೆ. ಬಿಜೆಪಿ, ಮೀಸಲಾತಿ ನಿರುದ್ಯೋಗ ಸೇರಿದಂತೆ ಇತರ ವಿಚಾರಗಳೊಂದಿಗೆ ಸೆಣಸಾಡುತ್ತಿದೆ.

ಪ್ರಮುಖ ವಿಷಯಗಳು

ಜಾತಿ ಗಣತಿ

ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಬಳಿಕ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಪಂಚ ರಾಜ್ಯಗಳ ಚುನಾವಣೆ ಪ್ರಚಾರ ಸಭೆಗಳಲ್ಲಿ ಜಾತಿಗಣತಿ ಬಗ್ಗೆ ಹೆಚ್ಚು ಪ್ರಸ್ತಾವ ಮಾಡುತ್ತಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದರೆ ನಾವು ಜಾತಿಗಣತಿ ಮಾಡಿ, ಒಬಿಸಿ ವರ್ಗದವರಿಗೆ ಸರಿಯಾದ ಮೀಸಲಾತಿ ಪಾಲು ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಮೀಸಲಾತಿ ಹಂಚಿಕೆಗೆ ಜಾತಿಗಣತಿಯೊಂದೇ ಪರಿಹಾರ ಎಂಬುದು ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಮಾತುಗಳು. ಈ ಸಂಬಂಧ ಅವರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲೂ ನಿರ್ಣಯ ಅಂಗೀಕಾರ ಮಾಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನ ಜಾತಿಗಣತಿ ಪ್ರಸ್ತಾವವನ್ನು ಬಿಜೆಪಿ ವಿರೋಧಿಸಿದೆ. ಕಾಂಗ್ರೆಸ್‌ ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆಯಲು ನೋಡುತ್ತಿದೆ ಎಂದು ಆರೋಪಿಸುತ್ತಿದೆ. ಆದರೂ ಇದು ಈ ಬಾರಿಯ ಚುನಾವಣೆಯ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ.

ಮೃದು ಹಿಂದುತ್ವ  ಹಿಂದುತ್ವ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವೇ ಬಿಜೆಪಿ ಪಾಲಿನ ಪ್ರಮುಖ ಚುನಾವಣ ವಿಚಾರ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಪ್ರಮುಖರೆಲ್ಲರೂ ಹಿಂದುತ್ವದ ಬಗ್ಗೆ ಪ್ರಸ್ತಾವ ಮಾಡುತ್ತಲೇ ಇದ್ದಾರೆ. ಅಲ್ಲದೆ ತೆಲಂಗಾಣ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅಯೋಧ್ಯೆಗೆ ತೀರ್ಥಯಾತ್ರೆ ಕಳುಹಿಸುವ ಬಗ್ಗೆ ಭರವಸೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕಮಲ್‌ನಾಥ್‌ ಮತ್ತು ಭೂಪೇಶ್‌ ಬಘೇಲ್‌ ಅವರ ಕಡೆಯಿಂದ ಮೃದು ಹಿಂದುತ್ವದ ದಾಳ ಹೊರಡಿಸಿದೆ. ಛತ್ತೀಸ್‌ಗಢದಲ್ಲಿ ಸೆಗಣಿ ಖರೀದಿ ಬಗ್ಗೆ ಗ್ಯಾರಂಟಿ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಅವರು ದೇಗುಲಗಳಿಗೆ ಭೇಟಿ ನೀಡುತ್ತಾ, ತಾವೂ ಹಿಂದುತ್ವದ ಪ್ರತಿಪಾದಕರು ಎಂಬುದನ್ನು ಬಿಂಬಿಸಿಕೊಳ್ಳುತ್ತಿದ್ದಾರೆ.

ಆಡಳಿತ ವಿರೋಧಿ ಅಲೆ

ಬಹುತೇಕ ಪಂಚ ರಾಜ್ಯಗಳಲ್ಲಿಯೂ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಆದರೆ ಒಂದೊಂದು ರಾಜ್ಯದಲ್ಲಿಯೂ ಒಂದೊಂದು ರೀತಿಯ ಸಮಸ್ಯೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿದ್ದು, ಸ್ವಪಕ್ಷೀಯರ ವಿರೋಧವನ್ನೇ ಅವರು ಎದುರಿಸಬೇಕಾಗಿದೆ. ಸಚಿನ್‌ ಪೈಲಟ್‌ ಅವರ ಜತೆಗೆ ಎಲ್ಲವೂ ಸರಿಯಾಗಿದೆ ಎಂಬುದು ಹೊರನೋಟಕ್ಕೆ ಕಾಣಿಸುತ್ತಿದ್ದರೂ, ಒಳಗೊಳಗೇ ಇಬ್ಬರೂ ನಾಯಕರ ನಡುವೆ ಬೇಗುದಿ ಇದೆ ಎಂದೇ ಹೇಳಲಾಗುತ್ತಿದೆ. ಜತೆಗೆ ಇಲ್ಲಿ ಐದು ವರ್ಷಕ್ಕೊಮ್ಮೆ ಸರಕಾರಗಳೂ ಬದಲಾಗುತ್ತಲೇ ಇರುತ್ತವೆ.

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಬಿಜೆಪಿ, ಚೌಹಾಣ್‌ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಲ್ಲ ಎಂದೇ ವಿಶ್ಲೇಷಿಸಲಾಗಿದೆ. ಅಲ್ಲದೆ ಕಾಂಗ್ರೆಸ್‌ನ ಕಮಲ್‌ನಾಥ್‌ ಅವರ ಬಗ್ಗೆ ಅನುಕಂಪವೂ ಇದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಮೊದಲ ಬಾರಿಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ ಸರಕಾರ ಬರುವ ಬಗ್ಗೆ ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್‌ ಕೂಡ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ ಭೂಪೇಶ್‌ ಬಘೇಲ್‌ ಅವರು ಕೊಂಚ ಸಮಾಧಾನದಿಂದ ಇದ್ದಾರೆ. ಇಲ್ಲಿ ಇವರಿಗೆ ಅಷ್ಟೇನೂ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿಲ್ಲ.

ಮೀಸಲಾತಿ

ಜಾತಿಗಣತಿಯಂತೆಯೇ ಮೀಸಲಾತಿ ಕೂಡ ಪಂಚ ರಾಜ್ಯ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. ತೆಲಂಗಾಣದಲ್ಲಿ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಪ್ರಧಾನಿ ಮೋದಿಯವರೇ ಘೋಷಣೆ ಮಾಡಿದ್ದಾರೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರಕಾರ, ಜಾತಿಗಳ ಮೀಸಲಾತಿ ಹೆಚ್ಚಳ ಮಾಡಿದೆ. ಅಂದರೆ ಪರಿಶಿಷ್ಟ ಜನಾಂಗಕ್ಕೆ ಶೇ.32, ಒಬಿಸಿಗೆ ಶೇ.27, ಪರಿಶಿಷ್ಟ ಜಾತಿಗೆ ಶೇ.13, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.4ರಷ್ಟು ಮೀಸಲಾತಿ ಘೋಷಣೆ ಮಾಡಲಾಗಿದೆ. ಹೀಗಾಗಿ  ಒಟ್ಟಾರೆ ಮೀಸಲಾತಿ ಶೇ.52ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ ಜಾತಿ ಗಣತಿ ಮೂಲಕವೇ ಒಬಿಸಿ ಮೀÓ‌ ಲಾತಿ ಹೆಚ್ಚಳ ಮಾಡುವ ಬಗ್ಗೆ ಘೋಷಣೆ ಮಾಡಿದೆ.

ಗ್ಯಾರಂಟಿ  ಭರವಸೆ

ಪಂಚರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಮಧ್ಯಪ್ರದೇಶದಲ್ಲಿ 12ನೇ ತರಗತಿ ವರೆಗೆ ಉಚಿತ ಶಿಕ್ಷಣ, ಮಹಿಳೆಯರಿಗೆ 1,500 ರೂ. ಸಹಾಯಧನ, 500 ರೂ.ಗೆ ಎಲ್‌ಪಿಜಿ, ಹಳೆ ಪಿಂಚಣಿ ಸೇವೆ ಮರು ಜಾರಿ ಗ್ಯಾರಂಟಿ ನೀಡಿದೆ. ರಾಜಸ್ಥಾನದಲ್ಲಿ ಕನಿಷ್ಠ ಆದಾಯ ಭರವಸೆ, ಏಳು ಕಲ್ಯಾಣ ಯೋಜನೆ, ಗ್ಯಾರಂಟಿ ಕಾರ್ಡ್‌, ಹಳೆ ಪಿಂಚಣಿ ಜಾರಿ ಭರವಸೆ ನೀಡಲಾಗಿದೆ. ಛತ್ತೀಸ್‌ಗಢದಲ್ಲಿ ಮಹಿಳೆಯರಿಗಾಗಿ ನ್ಯಾಯ ಯೋಜನೆ, 500ರೂ.ಗೆ ಎಲ್‌ಪಿಜಿ, ಸಾಲ ಮನ್ನಾ, ಜಾತಿಗಣತಿ ಗ್ಯಾರಂಟಿ ನೀಡಲಾಗಿದೆ. ಇನ್ನು ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್‌, ರೈತ ಭರವಸೆ ಯೋಜನೆ, ಗೃಹ ಜ್ಯೋತಿ, 500 ರೂ.ಗೆ ಎಲ್‌ಪಿಜಿ, ಇಂದಿರಾ ನಿವಾಸ ಯೋಜನೆಗಳ ಭರವಸೆ ನೀಡಲಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿ ಬದಲಿಗೆ ಬಿಜೆಪಿ, ಮಧ್ಯ ಪ್ರದೇಶದಲ್ಲಿ ಸಣ್ಣ ರೈತರಿಗೆ ಬೋನಸ್‌, ಉದ್ಯೋಗ ಸೃಜನೆ, ಅಟಲ್‌ ಆಹಾರ ಕೇಂದ್ರ, ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿ ರದ್ದು, 450 ರೂ.ಗೆ ಉಜ್ವಲ ಸಿಲಿಂಡರ್‌, ಸಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹೆಚ್ಚಳ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next