Advertisement

ಪಂಚ್‌ ಫೈಟ್‌ : ಗೋವಾದಲ್ಲಿ ಆಣೆ ಪ್ರಮಾಣ ಬಿರುಸು

11:02 PM Feb 03, 2022 | Team Udayavani |

ಪಂಚ ರಾಜ್ಯಗಳ ಚುನಾವಣೆ ರಂಗು ಪಡೆದುಕೊಂಡಿದ್ದು, ಅದರಲ್ಲೂ ಕರ್ನಾಟಕದ ನೆರೆಯ ರಾಜ್ಯವಾಗಿರುವ ಗೋವಾದಲ್ಲಿ ಇನ್ನಿಲ್ಲದ ಚಟುವಟಿಕೆ ಕಂಡು ಬಂದಿದೆ. ಈ ಬಾರಿಯ ಗೋವಾ ಚುನಾವಣೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆಯಾಗುತ್ತಿರುವುದು ಆಣೆ ಪ್ರಮಾಣದ ಸಂಗತಿ. ಇದುವರೆಗೆ ಗರಿಷ್ಠ ಪ್ರಮಾಣದ ಪಕ್ಷಾಂತರಕ್ಕೆ ಕಾರಣವಾಗಿರುವ ಗೋವಾದಲ್ಲಿ ಚುನಾವಣೆಗೆ ಮೊದಲೇ ಕಾಂಗ್ರೆಸ್‌ ಮತ್ತು ಆಪ್‌ ಪಕ್ಷದ ಅಭ್ಯರ್ಥಿಗಳಿಂದ ವರಿಷ್ಠರು ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದೆ ನಾವೇನಾದರೂ ಚುನಾವಣೆಯಲ್ಲಿ ಗೆದ್ದರೆ, ಪಕ್ಷ ಬಿಡುವುದಿಲ್ಲ ಎಂದು ಆಣೆ ಮಾಡುತ್ತಿದ್ದಾರೆ.

Advertisement

ಇಂಥ ಬೆಳವಣಿಗೆಗಳಿಗೆ ಕಾರಣವೂ ಇದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ 17 ಸ್ಥಾನಗಳಲ್ಲಿ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತು. ಆಗ ಆಡಳಿತದಲ್ಲಿದ್ದ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನ ಪಡೆದಿತ್ತು. ಆದರೂ ಮನೋಹರ್‌ ಪರಿಕ್ಕರ್‌ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಿದ್ದು, ವಿಧಾನಸಭೆಯಲ್ಲಿ ಬಹುಮತ ಪಡೆಯಲು ಕಾಂಗ್ರೆಸ್‌ ಹಿರಿಯ ನಾಯಕ ವಿಶ್ವಜಿತ್‌ ರಾಣೆ ಅವರೇ ನೆರವಾದರು. ಜತೆಗೆ ಸಣ್ಣಪುಟ್ಟ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಬಿಜೆಪಿ ಬಹುಮತ ಗಳಿಸಿಕೊಂಡಿತು.

2017ರಿಂದ 2022ರ ವರೆಗೆ ಗೋವಾದ 40 ಶಾಸಕರಲ್ಲಿ 24 ಮಂದಿ ಪಕ್ಷ ಬದಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನವರೇ ಹೆಚ್ಚಿನವರಿದ್ದಾರೆ. ಹಾಗೆಯೇ ಮಹಾ ಗೋಮಂತಕ್‌ ಪಾರ್ಟಿಯ ಇಬ್ಬರು ಶಾಸಕರೂ ಬಿಜೆಪಿ ಸೇರಿದ್ದಾರೆ. 2017ರಲ್ಲಿ ಕೇವಲ 13ರಲ್ಲಿ ಗೆದ್ದಿದ್ದ ಬಿಜೆಪಿ ಈಗ 27 ಶಾಸಕರ ಬಲ ಹೊಂದಿದೆ. ಅಂದರೆ ಇತರ ಪಕ್ಷಗಳ 14 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಈಗ ಘೋಷಣೆಯಾಗಿರುವ ಚುನಾವಣೆಯ  ಮುನ್ನವೂ ಗೋವಾದ ಬಹಳಷ್ಟು ಶಾಸಕರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿದ್ದಾರೆ. ಜತೆಗೆ ಕೇಜ್ರಿವಾಲ್‌ ಅವರ ಆಪ್‌ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೂ ಕೆಲವರು ಸೇರಿದ್ದಾರೆ.

ಕಾಂಗ್ರೆಸ್‌ನಿಂದ ಆಣೆ :

Advertisement

ಶುಕ್ರವಾರ ಗೋವಾಕ್ಕೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ಅಭ್ಯರ್ಥಿಗಳು ರಾಹುಲ್‌ ಗಾಂಧಿಯವರ ಮುಂದೆ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಪ್ರಮಾಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮಾರಂಭದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ರಾಹುಲ್‌ ಗಾಂಧಿ ಅವರೇ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜತೆಗೆ ಪಕ್ಷದ ಇತರ ನಾಯಕರಿಗೂ ಇದೇ ರೀತಿಯ ಪ್ರಮಾಣ ಬೋಧಿಸಲಾಗುತ್ತದೆ.

ಆಮ್‌ ಆದ್ಮಿ ಪಕ್ಷದಿಂದ  ಅಫಿಡವಿಟ್‌ :

ಕಾಂಗ್ರೆಸ್‌ ಬಳಿಕ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ  ಕೂಡ, ತನ್ನ ಅಭ್ಯರ್ಥಿಗಳಿಂದ ಅಫಿಡವಿಟ್‌ಗೆ ಸಹಿ ಪಡೆದಿದೆ. ಇತ್ತೀಚೆಗಷ್ಟೇ ಕೇಜ್ರಿವಾಲ್‌ ಅವರ ಗೋವಾ ಭೇಟಿ ವೇಳೆ ಎಲ್ಲರಿಂದ ಇದಕ್ಕೆ ಸಹಿ ಪಡೆಯಲಾಗಿದೆ. ಒಂದು ವೇಳೆ ಇವರೇನಾದರೂ ಪಕ್ಷ ತ್ಯಜಿಸಿದರೆ ಜನರೇ ಕೋರ್ಟ್‌ಗೆ ಹೋಗಬಹುದು ಎಂದು ಆಪ್‌ ಹೇಳಿಕೊಂಡಿದೆ.

ಒಟ್ಟಾರೆಯಾಗಿ ಈ ಬಾರಿಯ ಗೋವಾ ಚುನಾವಣೆ ಆಣೆ ಪ್ರಮಾಣಗಳಿಂದಾಗಿ ಹೆಚ್ಚಿನ ಚರ್ಚೆಯಾಗುತ್ತಿದೆ. ಆಪ್‌ ಭ್ರಷ್ಟಾಚಾರದ ಹೆಸರೆತ್ತಿಕೊಂಡು ಹೋಗಿದ್ದರೆ, ಬಿಜೆಪಿ ತನ್ನ ಸರಕಾರದ ಸಾಧನೆಗಳೊಂದಿಗೆ ಹೋಗಿದೆ. ಕಾಂಗ್ರೆಸ್‌, ಆಡಳಿತ ವಿರೋಧಿ ಅಲೆಯನ್ನೇ ನೆಚ್ಚಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next