ನವದೆಹಲಿ: ಬಾಲಿವುಡ್ ನಟ ರಾಹುಲ್ ಬೋಸ್ ಅವರಿಗೆ 2 ಬಾಳೆಹಣ್ಣಿಗೆ 442 ರೂಪಾಯಿಗಳ ದುಬಾರಿ ದರ ವಿಧಿಸಿದ್ದ ಚಂಢೀಗಢದ ಪಂಚತಾರಾ ಹೊಟೇಲ್ ಜೆ.ಡಬ್ಲ್ಯು. ಮ್ಯಾರಿಯಟ್ ತನ್ನ ಈ ಯಡವಟ್ಟಿಗೆ ದುಬಾರಿ ದಂಡ ತೆರುವಂತಾಗಿದೆ.
ಮಾರುಕ್ಟಟ್ಟೆಯಲ್ಲಿ ಸಾಧಾರಣ ಬೆಲೆಗೆ ಲಭ್ಯವಾಗುವ ಬಾಳೆಹಣ್ಣಿಗೆ ಅತೀ ದುಬಾರಿ ಬಲೆ ನಮೂದಿಸಿದ್ದ ಈ ಬಿಲ್ ಅನ್ನು ರಾಹುಲ್ ಬೋಸ್ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕುತ್ತಿದ್ದಂತೆ ದೇಶಾದ್ಯಂತ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಪಂಚತಾರಾ ಹೊಟೇಲಿನ ಸುಲಿಗೆಯನ್ನು ನೆಟ್ಟಿಗರು ಸರ್ವತ್ರ ಖಂಡಿಸಿದ್ದರು.
ಇದೀಗ ಅಬಕಾರಿ ಮತ್ತು ತೆರಿಗೆ ಇಲಾಖೆಯು ಜೆ.ಡಬ್ಲ್ಯು ಮ್ಯಾರಿಯೆಟ್ ಹೊಟೇಲಿಗೆ 25 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. CGST ಸೆಕ್ಷನ್ 11ರ ಉಲ್ಲಂಘನೆಗಾಗಿ ಈ ದಂಡವನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ವಸ್ತುವಿಗೆ ಕಾನೂನು ಬಾಹಿರವಾಗಿ ತೆರಿಗೆ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 11ರ ನಿಯಮಾವಳಿಗಳನ್ನು ರೂಪಿಸಲಾಗಿದೆ. ಹೊಟೇಲಿಗೆ ಭಾರೀ ದಂಡ ವಿಧಿಸಿರುವ ವಿಚಾರವನ್ನು ಎ.ಎನ್.ಐ. ಸುದ್ದಿಸಂಸ್ಥೆ ಹೊರಹಾಕಿದೆ.
ರಾಹುಲ್ ಬೋಸ್ ಅವರು ಖರೀದಿಸಿದ್ದ ಬಾಳೆಹಣ್ಣಿಗೆ ಜೆ.ಡಬ್ಲ್ಯು ಮ್ಯಾರಿಯೆಟ್ ತನ್ನ ಬಿಲ್ ನಲ್ಲಿ 442 ರೂಪಾಯಿ ದರ ವಿಧಿಸಿತ್ತು ಮಾತ್ರವಲ್ಲದೇ ಬಾಳೆಹಣ್ಣಿಗೆ ‘ಫ್ರೂಟ್ ಪ್ಲೇಟರ್’ ಎಂಬ ಹೆಸರನ್ನು ತನ್ನ ಬಿಲ್ ನಲ್ಲಿ ನಮೂದಿಸಿತ್ತು. ಈ ವಿಷಯವನ್ನು ಹೊಟೇಲ್ ಬಿಲ್ ಸಹಿತ ರಾಹುಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿ ಹೊಟೇಲಿನ ಹಗಲು ದರೋಡೆಯ ಕುರಿತಾಗಿ ಬೋಸ್ ಕಿಡಿ ಕಾರಿದ್ದರು.