ಸುರತ್ಕಲ್: ಸುರತ್ಕಲ್ ತಡಂಬೈಲ್‌ನಲ್ಲಿ ರವಿವಾರ ಮುಂಜಾನೆ ಮಂಗಳೂರು ಕಡೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸರ್ವೀಸ್ ರಸ್ತೆ ದಾಟಿ ಕಟ್ಟಡಕ್ಕೆ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಟ್ಟಡದ ಬಳಿ ಮಲಗಿದ್ದ ಇಬ್ಬರ ಸಹಿತ ಐವರು ಪವಾಡಸದೃಶರಾಗಿ ಪಾರಾಗಿದ್ದಾರೆ.
ಯುವಕರು ಮತ್ತು ಯುವತಿ ಸಹಿತ ಮೂವರಿದ್ದ ಕಾರು ಉಡುಪಿಯಿಂದ ಮಂಗಳೂರು ಕೆಂಜಾರು ಕಡೆ ಬರುತ್ತಿದ್ದಾಗ ತಡಂಬೈಲ್ ಮಾರಿಗುಡಿ ಬಳಿ ನಿಯಂತ್ರಣ ಕಳೆದುಕೊಂಡು ಚರಂಡಿ, ಸರ್ವಿಸ್ ರಸ್ತೆಯನ್ನು ದಾಟಿ ಕಟ್ಟಡಕ್ಕೆ ಢಿಕ್ಕಿ ಹೊಡೆದು ಸಮೀಪದಲ್ಲಿದ್ದ ಕೆಂಪು ಕಲ್ಲಿನ ರಾಶಿಯ ನಡುವೆ ಸಿಲುಕಿಕೊಂಡಿತು.
ಅಪಘಾತದ ರಭಸಕ್ಕೆ ಹಿಂಬದಿ ಟೈಯರ್ ದೂರ ಸಿಡಿದಿದ್ದರೆ, ಮ್ಯಾಗ್ ವೀಲ್ ತುಂಡಾಗಿ ಬಿದ್ದಿತ್ತು. ಎರಡೂ ಸುರಕ್ಷಾ ಕವಚ ತೆರೆದುಕೊಂಡಿದ್ದರಿಂದ ಚಾಲಕ ಸಹಿತ ಇತರ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಸೆಕೆ ತಾಳಲಾರದೆ ಸಮೀಪದ ಬಾಡಿಗೆ ಮನೆಯಲ್ಲಿದ್ದ ತಂದೆ ಮತ್ತು ಮಗ,ಇದೇ ಕಟ್ಟಡದ ಬಳಿ ಮಲಗಿದ್ದು, ಕೂದಲೆಯ ಅಂತರದಲ್ಲಿ ಕಾರು ಮುಂದೆ ಸಾಗಿದೆ. ಅಪಘಾತದ ರಭಸಕ್ಕೆ ಸಮೀಪದ ವೆಂಕಟರಮಣ ರಾವ್ ಅವರ ಮಾಲಕತ್ವದ ಕಟ್ಟಡಕ್ಕೆ ಹಾನಿಯಾಗಿದೆ. ಕಟ್ಟಡದ ಶಟರ್, ಮೇಲ್ಛಾವಣಿ ಹಾನಿಗೊಂಡಿದ್ದು ಎರಡು ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.
ಕಾರು ದುರಸ್ತಿ ಮಾಡಲಾಗದಷ್ಟು ಸಂಪೂರ್ಣ ನಜ್ಜುಗುಜ್ಜಾಗಿದ್ದು ಏರ್ ಬಲೂನ್ ತೆರೆದ ಕಾರಣ ಜೀವ ಹಾನಿಆಗಿಲ್ಲ. ಗಾಯಾಳುಗಳನ್ನು ಇನ್ನೊಂದುಕಾರಿನಲ್ಲಿದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಾರಿನ ಒಂದು ಟೈಯರ್ ಸ್ಫೋಟಗೊಂಡಿದ್ದರಿಂದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.