ಉಡುಪಿ: ಕಡಲತಡಿಯ ಊರು ಉಡುಪಿಯಲ್ಲಿ ಕೋವಿಡ್-19 ಸೋಂಕಿನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದು ಮತ್ತೆ ಐದು ಹೊಸ ಸೋಂಕು ಪ್ರಕರಣ ವರದಿಯಾಗಿದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಐವರು ಸೋಂಕಿತರ ಪೈಕಿ ಮೂವರು ಗಂಡಸರು, ಇಬ್ಬರು ಮಹಿಳೆಯರು ಎಂದು ತಿಳಿದು ಬಂದಿದೆ. ಇದರಲ್ಲಿ ನಾಲ್ವರು ಮುಂಬೈನಿಂದ ಬಂದವರು, ಒಬ್ಬರು ದುಬೈನಿಂದ ಬಂದವರು ಆಗಿದ್ದಾರೆ. ದುಬ್ಯೆನಿಂದ ಬಂದ 37 ವರ್ಷದ ಯುವಕ, ಮುಂಬೈನಿಂದ ಆಗಮಿಸಿದ 55 ವರ್ಷ, 31 ವರ್ಷ ಪ್ರಾಯದ ಯುವಕನಿಗೆ ಸೋಂಕು ದೃಢಪಟ್ಟಿದೆ. ಇವರ ಜತೆಗೆ 47, 34 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ
ಸುಮಾರು ಒಂದು ತಿಂಗಳ ಕಾಲ ಹೊಸ ಪ್ರಕರಣವಿಲ್ಲದೆ ನಿರಾಳವಾಗಿದ್ದ ಉಡುಪಿಯ ಜನತೆಗೆ ಮಹಾರಾಷ್ಟ್ರದಿಂದ ಸೋಂಕು ವಲಸೆಯಾಗುತ್ತಿದ್ದು ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಗುರುವಾರ 26 ಹೊಸ ಸೋಂಕು ಪ್ರಕರಣಗಳು ದೃಢಪಟ್ಟ ಕಾರಣ ಜನತೆ ಒಮ್ಮೆ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಂಡು ಬರುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಮೂರು ಪ್ರಕರಣಗಳು ದೃಢವಾಗಿತ್ತು. ಇಂದು ಮತ್ತೆ ಐದು ಹೊಸ ಕೋವಿಡ್-19 ಸೋಂಕು ಪ್ರಕರಣ ದೃಢಪಟ್ಟಿದೆ.
ಹೊರ ರಾಜ್ಯದಿಂದ ಜಿಲ್ಲೆಗೆ 8010 ಜನ ಬಂದಿದ್ದಾರೆ. ಮುಂಬೈಯಿಂದ 7226, ತಮಿಳುನಾಡು 74, ತೆಲಂಗಾಣ 425, ಆಂದ್ರ ಪ್ರದೇಶ 43, ಗೋವಾ 53, ಗುಜರಾತ್ 43 ಜನ ಜಿಲ್ಲೆಗೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಸರಕಾರದ ಮಧ್ಯಾಹ್ನದ ವರದಿಯಲ್ಲಿ ಉಡುಪಿಯ ಒಂದು ಪ್ರಕರಣದ ಮಾಹಿತಿ ಮಾತ್ರ ನೀಡಲಾಗಿದೆ. ಉಳಿದ ನಾಲ್ಕು ಸೋಂಕು ಪ್ರಕರಣದ ಮಾಹಿತಿ ಸಂಜೆಯ ವರದಿಯಲ್ಲಿ ನೀಡಲಾಗುತ್ತದೆ.