Advertisement

ಕೋವಿಡ್ ಗೆದ್ದ ಐದು ತಿಂಗಳ ಮಗು

06:44 AM May 29, 2020 | Suhan S |

ಕಾರವಾರ: ಅಚ್ಚರಿ ಬೆಳವಣಿಗೆಯಲ್ಲಿ 5 ತಿಂಗಳ ಮಗುವೂ ಸಹ ಕೋವಿಡ್‌ ಗೆದ್ದಿದೆ. ಕಿಮ್ಸ್‌ ವೈದ್ಯರ ಸತತ ಪರಿಶ್ರಮದಿಂದ ಮಗು ಕೋವಿಡ್‌ನಿಂದ ಮುಕ್ತವಾಗಿದೆ.

Advertisement

ಮೇ 8 ರಂದು ಮಗು ಕೋವಿಡ್‌ ಚಿಕಿತ್ಸೆಗಾಗಿ ಕಾರವಾರ ಕಿಮ್ಸ್‌ಗೆ ದಾಖಲಾಗಿತ್ತು. ಮೂರ್ಚೆ ರೋಗದಿಂದ ಸಹ ಬಳಲುತ್ತಿದ್ದ ಮಗು ಮೊದಲು ಮಂಗಳೂರಿನ ನಿರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿತ್ತು. ಆ ಸಮಯ ಜೊತೆಯಿಂದ ಕುಟುಂಬದ ಓರ್ವ ಸದಸ್ಯರಿಗೆ ಕೋವಿಡ್‌ ವೈರಸ್‌ ತಗುಲಿ ಅವರು ಕೋವಿಡ್‌ ಪೀಡಿತರಾದರು. ಇದು ಮುಂದೆ ಮನೆಯವರಿಗೆ ಹಬ್ಬಿತ್ತು. ಇದೀಗ ಕುಟುಂಬ ಹಾಗೂ ಅವರ ಸಂಪರ್ಕಕ್ಕೆ ಬಂದವರೆಲ್ಲಾ ಗುಣಮುಖರಾಗಿ ಭಟ್ಕಳದ ಮನೆಗೆ ಸೇರಿದ್ದಾರೆ.

ಗುರುವಾರ ಕಿಮ್ಸ್‌ನಿಂದ 5 ತಿಂಗಳ ಮಗು ಹಾಗೂ 2 ವರ್ಷದ ಮಗು ಹಾಗೂ 76 ವರ್ಷದ ವೃದ್ಧೆ ಸಹ ಗುಣಮುಖರಾಗಿ ಮನೆಗೆ ತೆರಳಿದರು. ಇವತ್ತಿನ ಅಚ್ಚರಿ ಬೆಳವಣಿಗೆಯಲ್ಲಿ 60 ವರ್ಷ ದಾಟಿದ ವೃದ್ಧೆ ಸಹ ಕೋವಿಡ್‌ ಗೆದ್ದಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಕಾರವಾರ ಕಿಮ್ಸ್‌ ವೈದ್ಯರಾದ ಮಕ್ಕಳ ತಜ್ಞ ಡಾ| ವಿಶ್ವನಾಥ, ಡಾ| ಸೋನಿಯಾ, ಡಾ| ಪ್ರವೀಣ್‌ ಅವರ ಶ್ರಮವನ್ನು ಮೆಚ್ಚಿದ್ದಾರೆ. ಕಳೆದ 19 ದಿನಗಳಿಂದ 5 ತಿಂಗಳ ಮಗು ಹಾಗೂ 2 ವರ್ಷದ ಮಗು ಹಾಗೂ 76 ವರ್ಷದ ವೃದ್ಧೆಗೆ ಸತತ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಮ್ಸ್‌ ಆಸ್ಪತ್ರೆಯ ಕೋವಿಡ್‌ ಘಟಕದ ಸಿಬ್ಬಂದಿ ಕೋವಿಡ್‌ ಪೀಡಿತ ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಂಡಿದ್ದು, ಕೋವಿಡ್‌ ಗೆಲ್ಲಲು ಕಾರಣವಾಯಿತು ಎಂದು ಜಿಲ್ಲಾಡಳಿತ ಮತ್ತು ಕಿಮ್ಸ್‌ನ ಎಲ್ಲಾ ಸಿಬ್ಬಂದಿ ಮೂವರು ವೈದ್ಯರ ಶ್ರಮವನ್ನು ಶ್ಲಾಘಿಸಿದ್ದಾರೆ.

ಈಗ ಉಳಿದವರು ಮಹಾರಾಷ್ಟ್ರ ಮತ್ತು ಇತರೆ ರಾಜ್ಯದಿಂದ ಬಂದವರು: ಈಗ ಕಾರವಾರ ಕಿಮ್ಸ್‌ನಲ್ಲಿ 36 ಜನ ಕೋವಿಡ್‌ ಪೀಡಿತರಿದ್ದು, ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಮರಳಿದವರು. ಒಬ್ಬರು ಗುಜರಾತ್‌, ಒಬ್ಬರು ತಮಿಳುನಾಡಿನಿಂದ ಬಂದವರಿದ್ದಾರೆ. ಎಲ್ಲಾ 36 ಜನರ ಆರೋಗ್ಯ ಸ್ಥಿರವಾಗಿದೆ. ಎಲ್ಲರೂ ಗುಣಮುಖರಾಗಿ ಹೊರ ಬರುತ್ತಾರೆ ಎಂಬ ವಿಶ್ವಾಸವನ್ನು ಜಿಲ್ಲಾಡಳಿತ ಹಾಗೂ ಕಿಮ್ಸ್‌ ವೈದ್ಯರು ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವೈದ್ಯರ ಶ್ರಮ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದ ಜೊತೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಆಡಳಿತ ಹೇಳಿದೆ. ಈತನ್ಮಧ್ಯೆ ಭಟ್ಕಳದಲ್ಲಿ ಲಾಕ್‌ಡೌನ್‌ ಸಡಿಲಿಕೆಗೆ ಕೆಲ ಕ್ರಮಗಳನ್ನು ತಾಲೂಕಾಡಳಿತ ಕೈಗೊಳ್ಳತೊಡಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next