ಬೆಂಗಳೂರು: ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ತಿಗಳರಪಾಳ್ಯದ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು, ಕಳೆದ ರಾತ್ರಿ ಬೆಳಕಿಗೆ ಬಂದಿದೆ.
ಬ್ಯಾಡರಹಳ್ಳಿಯ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಅವರ ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯಲ್ಲಿ ಒಂಬತ್ತು ತಿಂಗಳ ಮಗು ಕೂಡಾ ಸಾವನ್ನಪ್ಪಿದೆ. 3 ವರ್ಷದ ಮಗುವೊಂದು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆ ಯಜಮಾನ ಶಂಕರ್ ಮನೆಯಲ್ಲಿರಲಿಲ್ಲ. ಮನೆಗೆ ಫೋನ್ ಮಾಡಿದ್ದ ವೇಳೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಬಳಿ ನಿನ್ನೆ ಬಂದು ಮನೆಬಾಗಿಲಲ್ಲಿ ಕರೆಗಂಟೆ ಒತ್ತಿದ್ದಾರೆ. ಆದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸುತ್ತಮುತ್ತಲಿನವರೂ ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ಶಂಕರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ಒಡೆದು ನೋಡಿದಾಗ 5 ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು. 3 ವರ್ಷದ ಮಗು ಶವಗಳ ನಡುವೆ ನಾಲ್ಕೈದು ದಿನ ನರಳುತ್ತಾ ಕುಳಿತಿತ್ತು.
ಇದನ್ನೂ ಓದಿ:ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ
ಸ್ಥಳೀಯ ಪತ್ರಿಕೆಯೊಂದರ ಸಂಪಾದಕರಾಗಿರುವ ಶಂಕರ್ ಸಪ್ಟೆಂಬರ್ 12ರಂದು ಮನೆಯ ಸದಸ್ಯರ ಜೊತೆ ಜಗಳ ಮಾಡಿಕೊಂಡು ಹೊರಹೋಗಿದ್ದರು ಎನ್ನಲಾಗಿದೆ. ಮನೆಯಲ್ಲಿ ನಿತ್ಯ ಜಗಳ, ಮನಸ್ತಾಪ ನಡೆಯುತ್ತಿತ್ತು. ಇದರಿಂದ ನೊಂದು ಶಂಕರ್ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಶಂಕರ್ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮರಣೋತ್ತರ ಪರೀಕ್ಷೆ ಮಾಡಲಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುತ್ತದೆ.