ಗಾಜಿಯಾಬಾದ್: ಮೂರೂ ಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು, ಮಹಿಳೆಯರು ಸೇರಿದಂತೆ ಐದು ಮಂದಿ ಸಜೀವ ದಹನಗೊಂಡಿರುವ ಘಟನೆ ಗಾಜಿಯಾಬಾದ್ ನ ಲೋನಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಬುಧವಾರ ತಡರಾತ್ರಿ ಕಟ್ಟಡದ ತಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿದೆ ಕಟ್ಟಡದ ಎರಡು ಹಾಗೂ ಮೂರನೇ ಮಹಡಿಯಲ್ಲಿದ್ದ ಜನರು ಹೊರಬರಲಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ, ಮೃತರಲ್ಲಿ ಏಳು ತಿಂಗಳ ಹಸುಳೆ, ಏಳು ವರ್ಷದ ಬಾಲಕಿ, ಮಹಿಳೆಯರು, ವೃದ್ದರು ಸೇರಿದಂತೆ ಒಟ್ಟು ಐದು ಮಂದಿ ಸೇರಿದ್ದಾರೆ. ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದೆ, ಘಟನೆಯಲ್ಲಿ ಒಬ್ಬ ಮಹಿಳೆ ಮತ್ತು ಬಾಲಕಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡದಲ್ಲಿ ಸಂಗ್ರಹಿಸಿದ್ದ ಥರ್ಮಾಕೋಲ್, ಫೋಮ್‌ನಿಂದ ಬೆಂಕಿಯ ತೀವ್ರತೆ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು ಬೆಂಕಿ ಅವಘಡ ಹೇಗೆ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ, ಘಟನೆಯಲ್ಲಿ ಮೃತಪಟ್ಟವರ ಮಾಹಿತಿಯನ್ನು ಕಲೆಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಮಾಹಿತಿ ನೀಡಿದ ಪ್ರತ್ಯಕ್ಷ ದರ್ಶಿಯೊಬ್ಬರು 3 ಅಂತಸ್ತಿನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲು ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದಾಗಿ ಮನೆಯ ಸದಸ್ಯರು ಮನೆಯಿಂದ ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ. ಅಲ್ಲದೆ ಮನೆಯ ಒಳಗಿಂದ ಮಹಿಳೆಯರು ತಮ್ಮನ್ನು ರಕ್ಷಣೆ ಮಾಡುವಂತೆ ಕಿರುಚುತ್ತಿದ್ದರು ಆದರೆ ನಾವು ಏನು ಮಾಡಲಾಗದ ಸ್ಥಿತಿಯಲ್ಲಿದ್ದೆವು ಬಳಿಕ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದೆವು ಇದಾದ ಬಳಿಕ ಅಗ್ನಿಶಾಮಕ ತಂಡ ಹಾಗು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು. ಮನೆಯ ತಳ ಅಂತಸ್ಥಿನಲ್ಲಿ ಹೆಚ್ಚಿನ ಫೋಮ್ ಶೀಟ್‌ಗಳನ್ನು ಸಂಗ್ರಹಿಸಲಾಗಿತ್ತು ಜೊತೆಗೆ ಡಬ್ಬಗಳಲ್ಲಿ ಕೆಲವು ಕೆಮಿಕಲ್ ಕೂಡ ಇಡಲಾಗಿದ್ದು ಇದರಿಂದಾಗಿ ಬೆಂಕಿ ವೇಗವಾಗಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಭರ್ಜರಿ ಏರಿಕೆ, 23,000 ಗಡಿದಾಟಿದ ನಿಫ್ಟಿ