ಮುಧೋಳ: ನೆರೆ ಸಂದರ್ಭದಲ್ಲಿ ಹಾನಿಗೀಡಾದ ಪ್ರತಿ ಮನೆಗೂ ರೂ.5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.
ಮುಧೋಳಕ್ಕೆ ನೆರೆ ಹಾನಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಸಂತ್ರಸ್ತರ ಬೇಡಿಕೆ ಸ್ವೀಕರಿಸಿ ಅವರು ಮಾತನಾಡಿದರು. ಇದೇ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಬೃಹತ್ ನೆರೆ ಸಂತ್ರಸ್ತರ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದ ಮಾಜಿ ಸಚಿವ, ವಿಪ ಸದಸ್ಯ ಆರ್.ಬಿ. ತಿಮ್ಮಾಪುರ ಸಂತ್ರಸ್ತರ ಪರವಾಗಿ ವಿವಿಧ ಬೇಡಿಕೆ ಶೀಘ್ರವಾಗಿ ಈಡೇರಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಾದಯಾತ್ರೆ: ಇದಕ್ಕೂ ಮೊದಲು ತಾಲೂಕಿನ ಮಳಲಿ ಗ್ರಾಮದಿಂದ ನೆರೆ ಸಂತ್ರಸ್ತರ ಪಾದಯಾತ್ರೆ ನೇತೃತ್ವ ವಹಿಸಿದ ವಿಪ ಸದಸ್ಯ ಆರ್.ಬಿ. ತಿಮ್ಮಾಪುರ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್, ಉತ್ತೂರ ಗೇಟ್, ಬಸವೇಶ್ವರ ಸರ್ಕಲ್, ಶಿವಾಜಿ ಸರ್ಕಲ್, ಗಡದನ್ನವರ ಸರ್ಕಲ್, ರನ್ನ ಸರ್ಕಲ್ ಮೂಲಕ ಸಾಗಿ ಪ್ರವಾಸಿ ಮಂದಿರ ತಲುಪಿದರು. ವಿಪ ಸದಸ್ಯ ಆರ್.ಬಿ. ತಿಮ್ಮಾಪುರ ಮಾತನಾಡಿ, ನೆರೆ ಪ್ರವಾಹದಲ್ಲಿ ಸಿಲುಕಿ ಮನೆ-ಮಠ, ಹೊಲ-ಗದ್ದೆ, ಜಾನುವಾರು ಕಳೆದುಕೊಂಡು ತತ್ತರಿಸಿ ಹೋಗಿರುವ ನೆರೆ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ನೀಡದಿರುವ ಸರ್ಕಾರದ ಕ್ರಮ ಖಂಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲೆಗೆ ಎರಡನೇ ಬಾರಿ ಭೇಟಿ ನೀಡಿದ್ದರೂ, ಇದುವರೆಗೂ ರೈತರ ಬೆಳೆ ನಾಶಕ್ಕೆ ಯಾವುದೇ ಪರಿಹಾರ ಘೋಷಿಸದೇ ಕೇವಲ ಭೇಟಿ ನೀಡಿ ಹೋಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ನೆರೆ ಪರಿಹಾರಕ್ಕೆ ವರದಿ ಕಳುಹಿಸಿದ್ದು, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿದೆ. ಕಾರಣ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಎಷ್ಟು ಗಟ್ಟಿಯಾಗಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದರು.
ರಾಜ್ಯದಿಂದ 25 ಜನ ಸಂಸದರನ್ನು ಜನತೆ ಆಯ್ಕೆ ಮಾಡಿ ಕಳುಹಿಸಿದ್ದು, ಅವರು ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗೋಣ, ನಾನು ಪ್ರಧಾನಿಗಳ ಜೊತೆ ಮಾತನಾಡಿ, ನೆರೆ ಪರಿಹಾರ ಕೇಂದ್ರದಿಂದ ಬಿಡುಗಡೆಗೊಳಿಸೋಣ ಎಂದು ಹೇಳಿದರೂ, ಬಿಜೆಪಿ ನಾಯಕರು ಜಾಣ ಕುರುಡುತನ ತೋರುತ್ತಿದ್ದಾರೆ ಎಂದರು.
ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಬಸವಂತ ಕಾಟೆ, ತಿಮ್ಮಣ್ಣ ಹಲಗತ್ತಿ, ಪ್ರಶಾಂತ ಕಾಳೆ, ರವಿ ಕಾಂಬಳೆ, ಅಹಿಂದ ಅಧ್ಯಕ್ಷ ಭೀಮಶಿ ತಳವಾರ, ಮುದಕಣ್ಣ ಅಂಬಿಗೇರ,ನಗರಸಭೆ ಸದಸ್ಯರು ಸೇರಿದಂತೆ ಇತರರು ಇದ್ದರು.